ADVERTISEMENT

ಸುಂಟಿಕೊಪ್ಪ | 2030ರವರೆಗೂ ಪೊಲೀಸ್ ವಸತಿ ಗೃಹ ಯೋಜನೆ: ಸಚಿವ ಜಿ.ಪ‍ರಮೇಶ್ವರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 4:24 IST
Last Updated 16 ಫೆಬ್ರುವರಿ 2026, 4:24 IST
ಸುಂಟಿಕೊಪ್ಪದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ವಸತಿ ಗೃಹದ ಉದ್ಘಾಟನಾ ಸಮಾರಂಭವನ್ನು ರಾಜ್ಯ ಗೃಹ ಸಚಿವ ಡಾ‌‌.ಜಿ.ಪರಮೇಶ್ವರ ಉದ್ಘಾಟಿಸಿದರು
ಸುಂಟಿಕೊಪ್ಪದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ವಸತಿ ಗೃಹದ ಉದ್ಘಾಟನಾ ಸಮಾರಂಭವನ್ನು ರಾಜ್ಯ ಗೃಹ ಸಚಿವ ಡಾ‌‌.ಜಿ.ಪರಮೇಶ್ವರ ಉದ್ಘಾಟಿಸಿದರು   

ಸುಂಟಿಕೊಪ್ಪ: ರಾಜ್ಯದಲ್ಲಿ ಪೊಲೀಸರಿಗಾಗಿ 2030ನೇ ಇಸವಿಯವರೆಗೆ ಪೊಲೀಸ್ ವಸತಿ ಗೃಹ ಯೋಜನೆ ಮುಂದುವರೆಸಲಾಗುವುದು ಎಂದು ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಸುಂಟಿಕೊಪ್ಪದಲ್ಲಿ ನೂತನವಾಗಿ ನಿರ್ಮಿಸಿರುವ ಪೊಲೀಸ್ ವಸತಿ ಗೃಹ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ಈಗಾಗಲೇ ಪೊಲೀಸ್ ಗೃಹ ಯೋಜನೆಯಡಿಯಲ್ಲಿ 40 ಸಾವಿರ ಮನೆಗಳು ಪೂರ್ಣಗೊಂಡಿದ್ದು, ಇನ್ನು 60 ಸಾವಿರ ಮನೆ ಪೂರ್ಣಗೊಳಿಸಬೇಕಿದೆ. ಈ ಬಗ್ಗೆ ಕೆಲವು ದಿನಗಳ ಹಿಂದೆ ಬಜೆಟ್ ಪೂರ್ವ ಇಲಾಖಾವಾರು ಚರ್ಚೆ ಸಂದರ್ಭ ಹೆಚ್ಚುವರಿ ಪೊಲೀಸ್ ಠಾಣೆಗಳನ್ನು ನೀಡಲು ಸಾಧ್ಯವಾಗದಿದ್ದರೂ, ಪೊಲೀಸ್ ಮನೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಬೇಡಿಕೆ ಇಟ್ಟಿದ್ದೇನೆ’ ಎಂದರು.

ADVERTISEMENT
ಸುಂಟಿಕೊಪ್ಪ ಪೊಲೀಸ್ ಇಲಾಖೆಯಿಂದ ಡಾ.ಪರಮೇಶ್ವರ ಅವರನ್ನು ಸನ್ಮಾನಿಸಿ ಗೌರವಿಸಿದರು

ಸುಂಟಿಕೊಪ್ಪ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮೊದಲ ಹಂತದ ಪೊಲೀಸ್ ವಸತಿಗೃಹ ನಿರ್ಮಾಣ ಪೂರ್ಣಗೊಂಡಿದ್ದು, ಇದರಲ್ಲಿ 12 ಮನೆಗಳಿವೆ. ಈಗಾಗಲೇ ಮಡಿಕೇರಿಯಲ್ಲಿ ₹7.5.ಕೋಟಿ ವೆಚ್ಚದಲ್ಲಿ ಪೊಲೀಸ್ ವಸತಿ ಸಮುಚ್ಚಯ ನಿರ್ಮಾಣಕ್ಕೆ ಭೂಮಿ ಪೂಜೆ ನಿರ್ಮಿಸಲಾಗಿದೆ. ಇದನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ನಿರ್ಮಿಸಲಾಗುತ್ತಿದ್ದು, ಅದಷ್ಟು ಬೇಗನೆ ಕಾಮಗಾರಿ ಪೂರ್ಣಗೊಂಡರೇ ನಾನೇ ಉದ್ಘಾಟಿಸಲು ಬರುತ್ತೇನೆ’ ಎಂದು ತಿಳಿಸಿದರು.

ಸುಂಟಿಕೊಪ್ಪದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ವಸತಿ ಗೃಹದ ಶಂಕುಸ್ಥಾಪನೆಯನ್ನು ರಾಜ್ಯ ಗೃಹ ಸಚಿವ ಡಾ‌‌.ಜಿ.ಪರಮೇಶ್ವರ ಚಾಲನೆ ನೀಡಿದರು‌‌

‘ನಮ್ಮ ಸರ್ಕಾರ ಸಾವಿರ ದಿನಗಳನ್ನು ಪೂರೈಸಿದೆ. ನನ್ನ ನೇತೃತ್ವದಲ್ಲೇ ರೂಪಿಸಿದ ಪ್ರಣಾಳಿಕೆಯಲ್ಲಿ 593 ಭರವಸೆಗಳನ್ನು ನೀಡಲಾಗಿತ್ತು. ಆ ಪೈಕಿ ಶೇ 50ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದೇವೆ. 5 ಗ್ಯಾರಂಟಿಗಳ ಒಟ್ಟು ಮೊತ್ತ ₹1.36 ಲಕ್ಷ ಕೋಟಿ. ಬಡವರಿಗಾಗಿ ಈ ತರಹದ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ’ ಎಂದರು.

ಸುಂಟಿಕೊಪ್ಪದಲ್ಲಿ ನೂತನಾಗಿ ನಿರ್ಮಾಣಗೊಂಡಿರುವ ಪೊಲೀಸ್ ವಸತಿ ಗೃಹವನ್ನು ರಾಜ್ಯ ಗೃಹ ಸಚಿವ ಡಾ‌‌.ಜಿ.ಪರಮೇಶ್ವರ ರಿಬ್ಬನ್ ಕತ್ತರಿಸಿ ಭಾನುವಾರ ಉದ್ಘಾಟಿಸಿದರು

ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ರಾಜ್ಯ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಸಿ.ಎಸ್.ಅರುಣ್‌ಮಾಚಯ್ಯ, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾಸ್ಟರ್, ಕೊಡಗು ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಡಿಸಿಎಫ್ ಅಭಿಷೇಕ್, ಬೆಟ್ಟಗೇರಿ ಸಮೂಹ ತೋಟ ಮಾಲೀಕರಾದ ಡಿ.ವಿನೋದ್ ಶಿವಪ್ಪ, ಮುಖಂಡರಾದ ಕೆ.ಪಿ.ಚಂದ್ರಕಲಾ, ಪಿ.ಎಂ.ಲತೀಫ್, ಎಂ.ಲಕ್ಷ್ಮಣ, ಕೆ.ಕೆ.ಮಂಜುನಾಥ್ ಕುಮಾರ್, ಕೆ.ಎಂ.ಲೋಕೇಶ್, ಯಾಕೂಬ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿದರು

ಪೊಲೀಸರಿಗೆ ಬೇಕಿದೆ ಇನ್ನಷ್ಟು ಮನೆಗಳು; ಶಾಸಕ

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಾ.ಮಂತರ್‌ಗೌಡ ಮಾತನಾಡಿ ‘ಕುಶಾಲನಗರ ಪೊಲೀಸ್ ಉಪವಿಭಾಗದಲ್ಲಿ 144 ವಸತಿಗೃಹಗಳ ಬೇಡಿಕೆಯಿದ್ದು ಈಗ 32 ಮಾತ್ರ ಲಭ್ಯವಿದೆ. ಸುಂಟಿಕೊಪ್ಪದಲ್ಲಿ 50 ವಸತಿಗಳ ಪೈಕಿ 12 ನಿರ್ಮಾಣಗೊಂಡಿದ್ದು ಇನ್ನು ವಸತಿಗೃಹಗಳು ಬೇಕಾಗಿವೆ‌’ ಎಂದು ಹೇಳಿದರು. ಚಿಕ್ಕ ಅಳುವಾರದಲ್ಲಿ 108 ಎಕರೆ ಮಿನಿ ವಿಮಾನ ನಿಲ್ದಾಣಕ್ಕೆ ಕಾಯ್ದಿರಿಸಿದ ಜಾಗ ಪೊಲೀಸ್ ಇಲಾಖೆಗೆ ಬಂದಿದೆ. ಈ ಜಾಗವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಹಾಗೆಯೇ ಕೊಡಗಿನಲ್ಲಿ ವಾರಂತ್ಯಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಬರುತ್ತಿದ್ದು ಪ್ರವಾಸಿಗರಿಗೂ ಸ್ಥಳೀಯರಿಗೂ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕನಿಷ್ಠ 500ರಿಂದ 600 ಮಂದಿ ಪೊಲೀಸರ ಅಗತ್ಯತೆ ಇದೆ. ಕೊಡ್ಲಿಪೇಟೆಯಲ್ಲಿ ಪೊಲೀಸ್ ಠಾಣೆ ಬೇಡಿಕೆ ಮಂಡಿಸಿದ ಅವರು ಕೊಡಗಿನ ಇಲಾಖೆಗೆ ಸಮಗ್ರ ಅಭಿವೃದ್ಧಿಯ ಹಿನಲೆಯಲ್ಲಿ ಒಂದು ಪ್ಯಾಕೇಜ್ ಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.