ADVERTISEMENT

ಗ್ಯಾನವಾಪಿ ಮಸೀದಿ: ಮುಸ್ಲಿಂ ಜಮಾತ್‌ಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 2:31 IST
Last Updated 16 ಫೆಬ್ರುವರಿ 2024, 2:31 IST
ಮುಸ್ಲಿಂ ಜಮಾತ್‌ಗಳ ಒಕ್ಕೂಟ ಮಡಿಕೇರಿಯಲ್ಲಿ ಗುರುವಾರ ನಡೆಸಿದ ಸಭೆಯಲ್ಲಿ ಚಿಂತಕ ಶಿವಸುಂದರ್ ಮಾತನಾಡಿದರು
ಮುಸ್ಲಿಂ ಜಮಾತ್‌ಗಳ ಒಕ್ಕೂಟ ಮಡಿಕೇರಿಯಲ್ಲಿ ಗುರುವಾರ ನಡೆಸಿದ ಸಭೆಯಲ್ಲಿ ಚಿಂತಕ ಶಿವಸುಂದರ್ ಮಾತನಾಡಿದರು   

ಮಡಿಕೇರಿ:‌ ಗ್ಯಾನವಾಪಿ ಮಸೀದಿ ವಿಷಯಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಜಮಾತ್‌ಗಳ ಒಕ್ಕೂಟ ಇಲ್ಲಿನ ಹಳೆ ಖಾಸಗಿ ಬಸ್‌ನಿಲ್ದಾಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಗ್ಯಾನವಾಪಿ ಮಸೀದಿ ವಿಷಯ ಸೇರಿದಂತೆ ಒಟ್ಟು 6 ಅಂಶಗಳ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ವಕ್ಫ್‌ ಆಸ್ತಿಗಳನ್ನು ಸಂರಕ್ಷಿಸಬೇಕು, ‘1991ರ ಪ್ರಾರ್ಥನಾ ಸ್ಥಳದ ಕಾಯ್ದೆಯನ್ನು ಚಾಚೂತಪ್ಪದೇ ಪಾಲಿಸಬೇಕು, ಮುಸ್ಲಿಂ ಸಮುದಾಯಕ್ಕೆ ಸರ್ಕಾರಿ ಸೇವೆಯಲ್ಲಿ ಹಾಗೂ ಶೈಕ್ಷಣಿಕವಾಗಿ ಶೇ 8ರಷ್ಟು ಮೀಸಲಾತಿ ನೀಡಬೇಕು ಎಂದು ಅವರು ಆಗ್ರಹಿಸಿದರು.

ADVERTISEMENT

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ವಕ್ಫ್ ಬೋರ್ಡ್ ಸಭೆ ಕರೆದು ಒತ್ತುವರಿಯಾಗಿರುವ ವಕ್ಫ್ ಆಸ್ತಿಗಳನ್ನು ಮರಳಿ ಪಡೆದು ಸಂರಕ್ಷಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಮಡಿಕೇರಿ ನಗರಸಭೆಯ ಎಸ್‌ಡಿಪಿಐ ಸದಸ್ಯ ಅಮಿನ್ ಮೊಹಿಸಿನ್, ‘ಮುಸ್ಲಿಮರ ಮೀಸಲಾತಿಯನ್ನು ಕಿತ್ತುಕೊಂಡರು. ಈಗ ಚಾರಿತ್ರಿಕ ಮಸೀದಿಗಳ ಹುನ್ನಾರ ನಡೆಯುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಮುಸ್ಲಿಮರಿಗೆ ಶೇ 8ರಷ್ಟು ಮೀಸಲಾತಿ ನೀಡಬೇಕು, ಬಜೆಟ್‌ನಲ್ಲಿ ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ₹ 10 ಸಾವಿರ ಕೋಟಿ ಮೀಸಲಿಡಬೇಕು. ಕುಶಾಲನಗರದಲ್ಲಿ ಕೊಲೆಯಾದ ಮಡಿಕೇರಿ ನಿವಾಸಿ ಶದೀದ್ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ಒದಗಿಸುವ ಜೊತೆಗೆ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

ಮುಸ್ಲಿಂ ಜಮಾತ್‌ಗಳ ಒಕ್ಕೂಟ ಮಡಿಕೇರಿಯಲ್ಲಿ ಗುರುವಾರ ನಡೆಸಿದ ಸಭೆಯಲ್ಲಿ ಚಿಂತಕ ಶಿವಸುಂದರ್ ಮಾತನಾಡಿದರು
ಹಲವು ಜಮಾಹತ್‌ಗಳ  ಮುಖಂಡರು ಪ್ರತಿಭಟನೆಯಲ್ಲಿ ಭಾಗಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುಖಂಡರು
ಭಾರತವನ್ನು ಭಾರತವಾಗಿಯೇ ಉಳಿಸಿಕೊಳ್ಳುವ ಹೋರಾಟಕ್ಕೆ ಕರೆ
‘ಭಾರತೀಯರೆಲ್ಲರೂ ಒಂದುಗೂಡಿ ಭಾರತವನ್ನು ಭಾರತವಾಗಿಯೇ ಉಳಿಸಿಕೊಳ್ಳುವ ಹೋರಾಟಕ್ಕೆ ಮುಂದಾಗಬೇಕು’ ಎಂದು ಚಿಂತಕ ಶಿವಸುಂದರ್ ಕರೆ ನೀಡಿದರು. ‘ಇದು ಮಸೀದಿ ಉಳಿಸುವ ಒಂದು ಧರ್ಮದ ಹೋರಾಟವಾಗಬಾರದು. ಭಾರತವನ್ನು ಸಂಪೂರ್ಣವಾಗಿ ಬದಲಾಯಿಸಲು ಹೊರಟವರ ವಿರುದ್ಧದ ಹೋರಾಟವಾಗಬೇಕು. ಅದಕ್ಕಾಗಿ ತಳಮಟ್ಟದಲ್ಲಿ ಒಗ್ಗಟ್ಟು ರೂಪುಗೊಳ್ಳಬೇಕು’ ಎಂದು ಹೇಳಿದರು. ‘ಮಸೀದಿ ಮಂದಿರಗಳನ್ನು ಒಡೆದು ಹಾಕುವುದು ಧರ್ಮ ಅಲ್ಲ. ಅದು ದೊಡ್ಡ ಅಧರ್ಮ. ನೆನ್ನೆ ಬಾಬರಿ ಮಸೀದಿ ಇಂದು ಗ್ಯಾನವಾಪಿ ನಾಳೆ ಮಥುರಾ ಶ್ರೀರಂಗಪಟ್ಟಣಗಳ ಮಸೀದಿಗಳನ್ನು ಒಡೆಯುತ್ತಾ ಹೋದರೆ ಅಂತ್ಯವೆಲ್ಲಿದೆ?’ ಎಂದು ಪ್ರಶ್ನಿಸಿದರು. ‘1991ರ ಪ್ರಾರ್ಥನಾ ಸ್ಥಳದ ಕಾಯ್ದೆಯು 1947 ಆಗಸ್ಟ್ 15ರಂದು ದೇಶದಾದ್ಯಂತ ಅಸ್ತಿತ್ವದಲ್ಲಿದ್ದ ಯಾವುದೇ ಧಾರ್ಮಿಕ ಸ್ಥಳವನ್ನು ಯಥಾ ಸ್ಥಿತಿಯಲ್ಲಿ ಮುಂದುವರಿಸಬೇಕು ಮತ್ತು ಯಾವುದೇ ವಿವಾದಗಳಲ್ಲಿ ಮಧ್ಯಪ್ರವೇಶಕ್ಕೆ ಅವಕಾಶವಿರಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಈ ಕಾನೂನನ್ನು ಎಲ್ಲರೂ ಪಾಲಿಸಬೇಕು’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.