
ನಾಪೋಕ್ಲು: ಪುತ್ತರಿ ಹಬ್ಬ ಸಮೀಪಿಸುತ್ತಿದ್ದಂತೆ ಅಲ್ಲಲ್ಲಿ ಐನ್ ಮನೆಗಳನ್ನು ಅಲಂಕರಿಸುವ ಕೆಲಸ ಬಿರುಸಿನಿಂದ ಸಾಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಬೃಹತ್ ಹಳೆಯ ಮನೆಗಳು, ಮರದ ಕಂಬಗಳು, ದೊಡ್ಡ ಬಾಗಿಲುಗಳು, ಕಿಟಕಿಯ ವಿನ್ಯಾಸ, ದೇವದಾರು ಮರಗಳಿಂದ ಕೆತ್ತಿದ ಮರದ ಕಂಬಗಳು, ಅವುಗಳ ಮೇಲಿನ ಕೆತ್ತನೆ ಕುಸರಿ ಕೆಲಸಗಳು... ಇವು ಜಿಲ್ಲೆಯ ಜನಾಂಗಗಳ ಐನ್‌ಮನೆಗಳ ರಚನಾ ವಿನ್ಯಾಸ.
‘ಐನ್‌ಮನೆ’ ಎಂದರೆ ಕೊಡಗಿನ ಬಹುತೇಕ ಜನಾಂಗದವರಿಗೆ ದೇವ ಮನೆಯ ಭಾವನೆ. ಐನ್‌ಮನೆ ಎಂದರೆ ಅಯ್ಯನ ಮನೆ, ಹಿರಿಯ ಮುತ್ತಜ್ಜ ಕಟ್ಟಿ ಹಿರಿಯರು ಬಾಳಿ ಬದುಕಿದ ಮನೆ. ಹಿಂದೆ ಕೂಡಿ ಬದುಕುತ್ತಿದ್ದ ಅವಿಭಕ್ತ ಕುಟುಂಬ ಪದ್ಧತಿಯಿಂದ, ಒಗ್ಗಟ್ಟಿನಲ್ಲಿ ಇಡಿ ಕುಟುಂಬದ ಮಂದಿ ಬಾಳಿ ಬದುಕಿದ ಮನೆ. ಇಂದಿಗೂ ದೊಡ್ಡ ಮನೆ ಸಂಸ್ಕೃತಿ ಕೊಡಗಿನ ಬಹುತೇಕ ಜನಾಂಗದವರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ.
ಪುತ್ತರಿ ಕೊಡವರು ಆಚರಿಸುವ ಪ್ರಮುಖ ಭತ್ತದ ಸುಗ್ಗಿಯ ಹಬ್ಬ. ಪುತ್ತರಿ ಹಬ್ಬದಂದು ಐನ್‌ಮನೆಯಲ್ಲಿ ಕುಟುಂಬದ ಎಲ್ಲರೂ ಸೇರುತ್ತಾರೆ. ಊರಿನ ದೇವಸ್ಥಾನಕ್ಕೆ ತೆರಳಿ ಭತ್ತದ ಕದಿರಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಐನ್‌ಮನೆಗೆ ತೆರುಳುತ್ತಾರೆ. ಪುತ್ತರಿ ಹಬ್ಬದ ಮರುದಿನ ಗುರುಕಾರಣದ ಹಾಡು ಪುತ್ತರಿ ಕೋಲಾಟವನ್ನು ಆಡುತ್ತಾರೆ.
ಕುಟುಂಬ ಕುಟುಂಬಗಳ ನಡುವೆ ಸಂಬಂಧ ಉಳಿಸಿಕೊಳ್ಳಲು, ಸಂವಹನ ಬೆಸೆದುಕೊಳ್ಳಲು, ಪ್ರೀತಿ ವಿಶ್ವಾಸ ಕಾಪಾಡಿಕೊಳ್ಳಲು ಐನ್‌ಮನೆಗಳು ಅತ್ಯವಶ್ಯಕ.
ಹಿಂದೆ ಐನ್ ಮನೆಗಳಲ್ಲಿ ತುಳಿಯ ಅಥವಾ ಕಣಜದ ವ್ಯವಸ್ಥೆ ಇರುತ್ತಿತ್ತು. ಅನುಕೂಲಕ್ಕೆ ಅವಶ್ಯಕತೆಗೆ ತಕ್ಕಂತೆ ಎತ್ತರದ ದೊಡ್ಡ ಸಣ್ಣ ತುಳಿಯಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು. ಹಿಂದೆ ಕೂಡು ಕುಟುಂಬ ಇದ್ದಂತಹ ಸಂದರ್ಭದಲ್ಲಿ ಅವರವರ ಭಾಗದ ಮನೆಯ ಮೇಲಿನ ಅಟ್ಟದಲ್ಲಿ ಅವರವರ ತುಳಿಯಗಳನ್ನು ಇಟ್ಟು ಅದರಲ್ಲಿ ಅಕ್ಕಿ ಭತ್ತವನ್ನು ಶೇಖರಿಸುತ್ತಿದ್ದರು. ಪ್ರಸ್ತುತ ಭತ್ತದ ವ್ಯವಸಾಯ ಕಡಿಮೆಯಾಗಿ ವಾಣಿಜ್ಯ ಬೆಳೆ ಕಾಫಿಯತ್ತ ಕೊಡಗಿನವರು ಮುಖ ಮಾಡಿರುವುದರಿಂದ ತುಳಿಯದ ಅವಶ್ಯಕತೆ ಕಂಡು ಬರುತ್ತಿಲ್ಲ.
ಹಿಂದೆ ಪುತ್ತರಿ ಹಬ್ಬದ ಸಂದರ್ಭದಲ್ಲಿ ಕದಿರು ಕುಯ್ಯುವುದಕ್ಕಾಗಿ ದೊಡ್ಡ ದೇವರ ಗದ್ದೆಯನ್ನು ಬಿಟ್ಟುಬಿಡುತ್ತಿದ್ದರು. ಪುತ್ತರಿ ದಿನ ಐನ್‌ಮನೆಗೆ ಬಂದು ಎಲ್ಲರೂ ಒಟ್ಟಾಗಿ ಪುತ್ತರಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ, ಇಂದು ಕದಿರು ತಂದು ಐನ್‌ಮನೆ ಅಂಗಳದಲ್ಲಿ ಕಟ್ಟಿ ಬರುವ ಸಂಪ್ರದಾಯವಷ್ಟೇ ಕಾಣಿಸುತ್ತಿದೆ. ಹಲವು ಭಾಗಗಳಲ್ಲಿ ಊರಿನ, ಗ್ರಾಮದ ದೇವಸ್ಥಾನಗಳ ಗದ್ದೆಗಳಿಂದಲೇ ಕದಿರು ತಂದು ತಮ್ಮ ತಮ್ಮ ಮನೆಗಳಲ್ಲಿಯೇ ಪುತ್ತರಿಯ ಸಂಭ್ರಮವನ್ನು ಮುಗಿಸಿಬಿಡುತ್ತಿದ್ದಾರೆ.
ಕೊಡಗಿನ ಸಂಸ್ಕೃತಿಯಲ್ಲಿ ಮಹತ್ವದ್ದು ಐನ್‌ಮನೆ: ‘ಜಿಲ್ಲೆಯ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಐನ್ ಮನೆಯಲ್ಲಿ ಕುಟುಂಬಸ್ಥರೆಲ್ಲ ಒಗ್ಗೂಡುತ್ತಾರೆ. ವಿಶೇಷವಾಗಿ ಪುತ್ತರಿ ಹಬ್ಬದ ಸಂದರ್ಭದಲ್ಲಿ ಐನ್‌ಮನೆಗಳು ಹೊಚ್ಚ ಹೊಸತರಂತೆ ಕಂಗೊಳಿಸುತ್ತವೆ. ಕುಟುಂಬಸ್ಥರೆಲ್ಲ ಒಗ್ಗೂಡಿ ಐನ್‌ಮನೆಗಳನ್ನು ಸುಣ್ಣ ಬಣ್ಣಗಳಿಂದ ಅಲಂಕರಿಸುತ್ತಾರೆ. ಕೊಡಗಿನವರ ಸಂಸ್ಕೃತಿಯಲ್ಲಿ ಈ ಮನೆ ಮಹತ್ವದ ಪಾತ್ರ ವಹಿಸುತ್ತದೆ. ಐನ್‌ಮನೆ ಮೇಲಿನ ನಂಬಿಕೆ ಶ್ರದ್ಧೆ, ಪ್ರೀತಿ, ವಿಶ್ವಾಸ, ದೈವಿಕ ಭಾವನೆ ಇಂದಿಗೂ ಸಂಸ್ಕೃತಿ ಉಳಿದುಕೊಂಡಿರಲು ಕಾರಣವಾಗಿದೆ’ ಎಂದು ಹೇಳುತ್ತಾರೆ ನಾಪೋಕ್ಲುವಿನ ಕುಲ್ಲೇಟಿರ ಅಜಿತ್ ನಾಣಯ್ಯ.
ಸಂಸ್ಕೃತಿ ಉಳಿಯಬೇಕಾದರೆ ಐನ್‌ಮನೆ ಅವಶ್ಯಕ
ಇಂದು ಹಲವೆಡೆ ಐನ್‌ಮನೆಗಳು ನಿರ್ವಹಣೆ ಇಲ್ಲದೆ ಸೊರಗಿವೆ. ಐನ್‌ಮನೆ ಹೋಗಿ ಸಣ್ಣ ಗುಡಿ ಒಂದನ್ನು ನಿರ್ಮಿಸಿಕೊಂಡಿದ್ದಾರೆ. ಶಿಥಿಲಸ್ಥಿತಿಗೆ ತಲುಪಿದ್ದ ಮನೆಗಳನ್ನು ಬಿಚ್ಚಿ ಅದೇ ಜಾಗದಲ್ಲಿ ಪೂರ್ವಿಕರ ನೆಲೆಯನ್ನು ಕಾಪಾಡಿಕೊಳ್ಳಲು ಹೊಸ ಮನೆಗಳನ್ನು ನಿರ್ಮಿಸಿದ್ದಾರೆ. ಕುಟುಂಬದ ಮೂಲಪುರುಷ ಜಾಗ ದೈವ ದೇವರು ಐನ್‌ಮನೆ ಇವುಗಳಿಗೆ ಒಂದಕ್ಕೊಂದು ಸಂಬಂಧ ಇರುವುದರಿಂದ ಇಡೀ ಸಂಸ್ಕೃತಿ ಉಳಿಯಬೇಕಾದರೆ ಐನ್‌ಮನೆಗಳು ಅವಶ್ಯಕ ಎಂದು ಹಿರಿಯರು ಪ್ರತಿಪಾದಿಸುತ್ತಾರೆ.
ಹಿಂದೆ ರಾಶಿಗಟ್ಟಲೆ ಭತ್ತ ಬೆಳೆಯುತ್ತಿದ್ದ ಹಳ್ಳಿ ಗದ್ದೆಗಳಿಂದು ಯಾವುದೇ ಚಟುವಟಿಕೆಗಳು ಕಾಣದೆ ಬಣಗುಡುತ್ತಿವೆ. ಹಾಗಾಗಿ ಐನ್‌ಮನೆಯ ಕಣಜ ಅಥವಾ ಪತ್ತಾಯಗಳು ಎಲ್ಲೂ ಬಳಕೆ ಆಗುತ್ತಿಲ್ಲ. ಹಿಂದೆ ಐನ್‌ಮನೆಯಲ್ಲಿರುವವರು ಅವರವರ ಪಾಲಿನ ಭತ್ತವನ್ನು ಅವರವರ ಭಾಗದ ಅಟ್ಟದ ಮೇಲೆ ಕಣಜಗಳಲ್ಲಿ ಶೇಖರಿಸಿಡುತ್ತಿದ್ದರು. ಆದರೆ ಇಂದು ಯಾವುದೇ ಅಟ್ಟವು ಬಳಕೆಯಾಗುತ್ತಿಲ್ಲ. ಪುತ್ತರಿ ಹಬ್ಬಕ್ಕೆ ಮಾತ್ರ ಜೀವ ಪಡೆದುಕೊಳ್ಳುವ ಅಟ್ಟಗಳು ನಂತರ ಯಥಾ ರೀತಿ ದೂಳು ಹಿಡಿಯುತ್ತಿವೆ.
ಭತ್ತದ ಕೃಷಿ ಇಳಿಕೆ
ಹಿಂದೆ ಸಾಂಪ್ರದಾಯಿಕ ಭತ್ತದ ತಳಿಗಳನ್ನು ಬೆಳೆಯುತ್ತಿದ್ದರು. ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಭತ್ತದ ಬೆಳೆ ಹಣ್ಣಾಗಿ ಕೊಯ್ಲಿಗೆ ಬರುತ್ತಿತ್ತು. ಭತ್ತದ ಕೃಷಿ ಮಾಡುವವರ ಸಂಖ್ಯೆ ತೀವ್ರಗತಿಯಲ್ಲಿ ಇಳಿಮುಖ ಕಂಡಿದೆ. ಕೃಷಿಕರು ಹೊಸ ಹೊಸ ತಳಿಗಳನ್ನು ಬೆಳೆಯುತ್ತಿರುವುದರಿಂದ ಅವಧಿಗೂ ಮುನ್ನವೇ ಕಟಾವಿಗೆ ಬರುತ್ತಿದೆ. ಹಾಗಾಗಿ ಪುತ್ತರಿ ಹಬ್ಬದ ಸಂದರ್ಭದಲ್ಲಿ ಪೈರು ಕತ್ತರಿಸುವ ಆಚರಣೆಯು ತನ್ನ ಮಹತ್ವವನ್ನು ಕಳೆದುಕೊಂಡಿದೆ ಎನ್ನುತ್ತಾರೆ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.