ಮಡಿಕೇರಿ ತಾಲ್ಲೂಕಿನ ಕೊಯನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಪರಿಕರಗಳನ್ನು ಹೊರತರುತ್ತಿರುವುದು.
ಮಡಿಕೇರಿ: ಇದುವರೆಗೂ ಆರೆಂಜ್ ಅಲರ್ಟ್ ನೀಡಲಾಗುತ್ತಿದ್ದ ಕೊಡಗು ಜಿಲ್ಲೆಗೆ ಈಗ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ. ಅತಿ ಭಾರಿ ಮಳೆ ಬೀಳುವ ಮುನ್ನಚ್ಚರಿಕೆ ನೀಡಿದ್ದು, ಎಚ್ಚರ ವಹಿಸುವಂತೆ ಸೂಚಿಸಿದೆ.
ಈ ಮಧ್ಯೆ ನಗರ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಮಂಗಳವಾರ ಮುಂದುವರಿದಿದೆ.
ಐಗೂರು ಗ್ರಾಮದ ಬಳಿಯ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಭೇತ್ರಿಯಲ್ಲಿ ಕಾವೇರಿ ನದಿ ಭೋರ್ಗರೆಯುತ ಹರಿಯುತ್ತಿದೆ.
ಕುಶಾಲನಗರ ತಾಲ್ಲೂಕು ಸುಂಟಿಕೊಪ್ಪ ಹೋಬಳಿಯ ಉಲುಗುಲಿ ಗ್ರಾಮದ ನಿವಾಸಿ ಗಂಗಮ್ಮ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.
ಸೋಮವಾರಪೇಟೆ ತಾಲ್ಲೂಕಿನ ಯಡೂರು ಗ್ರಾಮದಲ್ಲಿ ಪೊನ್ನಮ್ಮ ಚಿಯಣ್ಣ ಅವರ ಮನೆ ತೀವ್ರಗಾಳಿ ಹಾಗೂ ಮಳೆಯಿಂದ ಮನೆಯ ಚಾವಣಿ ಹಾನಿಯಾಗಿದೆ.
ಮಣ್ಣು ಕುಸಿದು ಹಾನಿಯಾಗಿದ್ದ ತಾಲ್ಲೂಕಿನ ಕೊಯನಾಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದ ಪರಿಕರಗಳನ್ನು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರವು ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಸಿಬ್ಬಂದಿಯ ಸಹಾಯದಿಂದ ಹೊರಗೆ ತಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.