
ಮಡಿಕೇರಿ: ‘ಎಸ್‌ಐಆರ್’ ಎಂದರೆ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಅಲ್ಲ. ಇದು ಬಡವರನ್ನು ‘ತೀವ್ರ ನಿಗಾ ಘಟಕ’ಕ್ಕೆ ಕೊಂಡೊಯ್ಯುವ ಕ್ರಮದಂತೆ ಕಾಣುತ್ತಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ದ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ತಿಳಿಸಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ಪಕ್ಷದ ಜನಾಗ್ರಹ ಸಮಾವೇಶದಲ್ಲಿ ಅವರು ‘ಎಸ್‌ಐಆರ್’ ಕುರಿತು ಮಾತನಾಡಿದರು.
ಇದರಿಂದ ಕೇವಲ ಮುಸ್ಲಿಮರಿಗಷ್ಟೇ ತೊಂದರೆಯಾಗುತ್ತದೆ ಎಂದು ಭಾವಿಸಲಾಗಿದೆ. ಆದರೆ, ಅದು ತಪ್ಪು. ಇದರಿಂದ ಎಲ್ಲ ಧರ್ಮ, ಜಾತಿಯ ಬಡವರಿಗೆ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದು ಕೇವಲ ಮತಪಟ್ಟಿ ಪರಿಷ್ಕರಣೆ ಮಾತ್ರವಲ್ಲ. ಇದು ದೇಶದ ಜನರ ಪೌರತ್ವವನ್ನು ಅಗ್ನಿಪರೀಕ್ಷೆಗೆ ಒಡ್ಡುವ ಕ್ರಿಯೆ. ಇದು ನೋಟು ರದ್ದತಿ ಕ್ರಮದಂತೆ ಎಲ್ಲ ಬಡವರಿಗೆ, ವಲಸೆ ಕಾರ್ಮಿಕರಿಗೆ, ಮಹಿಳೆಯರಿಗೆ ತೊಂದರೆಯನ್ನುಂಟು ಮಾಡುತ್ತದೆ ಎಂದರು.
‘ತಮಿಳುನಾಡಿನಲ್ಲಿ 90 ಲಕ್ಷ ಮಂದಿಯನ್ನು ಮತಪಟ್ಟಿಯಿಂದ ಹೊರಗಿಟ್ಟು ಅವರಿಂದ ಪೌರತ್ವ ಸಾಬೀತುಪಡಿಸಲು ದಾಖಲಾತಿಗಳನ್ನು ಕೇಳಲಾಗಿದೆ. ಆಧಾರ್ ಕಾರ್ಡ್, ಪಡಿತರ ಚೀಟಿ, ಪ್ಯಾನ್ ಕಾರ್ಡ್ ಹೀಗೆ ನಮ್ಮಲ್ಲಿರುವ ಯಾವುದೇ ದಾಖಲಾತಿಗಳು ಅವರಿಗೆ ಬೇಕಿಲ್ಲ. ಅವರಿಗೆ ಬೇಕಿರುವುದು ನಮ್ಮಲ್ಲಿ ಇಲ್ಲದ ದಾಖಲಾತಿಗಳೇ ಆಗಿವೆ’ ಎಂದು ಕಿಡಿಕಾರಿದರು.
ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪಾಸಪೋರ್ಟ್, ಆಸ್ತಿ ಮಾಲೀಕತ್ವದ ಪ್ರಮಾಣಪತ್ರ ಹೀಗೆ ಕೇವಲ ವಿದ್ಯಾವಂತರಿಗೆ, ಆಸ್ತಿ ಹೊಂದಿರುವ ಶ್ರೀಮಂತರಿಗಷ್ಟೇ ಇರುವ ದಾಖಲಾತಿಗಳನ್ನು ಕೇಳಲಾಗುತ್ತಿದೆ. ಇದು ವ್ಯವಸ್ಥಿತವಾಗಿ ಶಿಕ್ಷಣ ಇಲ್ಲದವರು ಹಾಗೂ ಬಡವರನ್ನು ಮತಪಟ್ಟಿಯಿಂದ ಹೊರಗಿಡುವ ಕೃತ್ಯ ಎಂದು ಆರೋಪಿಸಿದರು.
ಎಸ್‌ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯ ಅಶ್ರಫ್ ಮೌಲವಿ ಮಾತನಾಡಿ, ‘ಎಸ್‌ಐಆರ್ ಪ್ರಕ್ರಿಯೆಯ ಹಿಂದೆ ದುರುದ್ದೇಶವಿದ್ದು, ಜನರು ಜಾಗೃತರಾಗಿ ಅದರ ವಿರುದ್ಧ ಧ್ವನಿ ಎತ್ತಬೇಕು’ ಎಂದರು.
ಪತ್ರಕರ್ತ ರಾ.ಚಿಂತನ್, ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷೆ ಶಾಹಿದಾ ತಸ್ನೀಮ್, ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ಅಡ್ಕಾರ್ ಮಾತನಾಡಿದರು.
ವಿವಿಧ ಪಕ್ಷಗಳ ಕಾರ್ಯಕರ್ತರು, ಮುಖಂಡರು ಎಸ್‌ಡಿಪಿಐಗೆ ಸೇರ್ಪಡೆಗೊಂಡರು. ಇದಕ್ಕೂ ಮುನ್ನ ಎವಿ ಶಾಲೆ ಬಳಿಯಿಂದ ಗಾಂಧಿ ಮೈದಾನದವರೆಗೆ ಕಾರ್ಯಕರ್ತರು ರ‍್ಯಾಲಿ ನಡೆಸಿದರು. ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಎಂ.ಕೆ.ಮನ್ಸೂರ್ ಆಲಿ, ಕಾರ್ಯದರ್ಶಿ ಮೇರಿ ವೇಗಸ್, ನಗರಾಧ್ಯಕ್ಷ ಮೊಹಮ್ಮದ್ ಅಲಿ, ನಗರಸಭಾ ಸದಸ್ಯೆ ನೀಮಾ ಅರ್ಷದ್, ಕಾರ್ಯದರ್ಶಿ ಬಶೀರ್ ಅಹಮ್ಮದ್, ಕೆ.ಸಿ.ಬಷೀರ್, ಅಬ್ದುಲ್ ಜಮೀರ್, ಫಾರುಕ್ ಖಾನ್, ಷರೀಫ್, ಭಾಷಾ, ಹನೀಫ್ ವಿರಾಜಪೇಟೆ, ಜಕ್ರಿಯ ಕುಶಾಲನಗರ, ಹಫೀಜ್, ಉಸ್ಮಾನ್ ಸುಂಟಿಕೊಪ್ಪ ಭಾಗವಹಿಸಿದ್ದರು.
ಬಿಜೆಪಿಯನ್ನು ಎದುರಿಸಬಲ್ಲ ಶಕ್ತಿ ಇರುವುದು ಎಸ್‌ಡಿಪಿಐಗೆ ಮಾತ್ರ ದೇಶ ಕಾಂಗ್ರೆಸ್ ಮುಕ್ತವಾಗುತ್ತಿದೆ ರಾಜಕೀಯವಾಗಿ ಇನ್ನೂ ಉಳಿದುಕೊಳ್ಳಬೇಕೆನ್ನುವ ಇಚ್ಛೆ ಇದ್ದರೆ ಅದು ಎಸ್‌ಡಿಪಿಐಗೆ ಬೆಂಬಲ ಸೂಚಿಸಲಿಅಫ್ಸರ್ ಕೊಡ್ಲಿಪೇಟೆ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ.
ಸಂವಿಧಾನದ ಆಶಯಗಳನ್ನು ತಿಳಿಯದವರು ಇಂದು ಆಡಳಿತ ನಡೆಸುತ್ತಿದ್ದಾರೆ. ಒಬ್ಬ ವ್ಯಕ್ತಿ ಒಂದು ಕುಟುಂಬದ ಸುತ್ತ ರಾಜಕಾರಣ ಸುತ್ತುತ್ತಿದೆ. ಬಡವರಿಗೆ ನ್ಯಾಯ ಸಿಗುತ್ತಿಲ್ಲದೇವನೂರು ಪುಟ್ಟನಂಜಯ್ಯ ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ.
‘ಪೌರತ್ವ ಕಸಿದುಕೊಳ್ಳುವ ಪ್ರಯತ್ನ’
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ ‘ಎಸ್‌ಐಅರ್ ಎನ್ನುವುದು ನುಸುಳುಕೋರರನ್ನು ಪತ್ತೆ ಹಚ್ಚುವ ಪ್ರಕ್ರಿಯೆಯಲ್ಲ ಅದು ಪೌರತ್ವವನ್ನು ಕಸಿದುಕೊಳ್ಳುವ ಪ್ರಯತ್ನ. ಬೆಟ್ಟ ಕೊರೆದು ಇಲಿ ಹಿಡಿಯುವ ಸಾಹಸ ಇದಾಗಿದೆ ಇಲ್ಲಿಯವರೆಗೆ ಕೇವಲ ಇಬ್ಬರು ಬಾಂಗ್ಲಾ ದೇಶಿಗರನ್ನು ಮಾತ್ರ ಪತ್ತೆ ಮಾಡಲಾಗಿದೆ. ಇದಕ್ಕಾಗಿ 9 ಕೋಟಿ ಮತದಾರರು ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ’ ಎಂದು ಆರೋಪಿಸಿದರು. ಕೃಷಿ ಮಾಡಿಕೊಂಡು ಬದುಕು ಸಾಗಿಸುತ್ತಿರುವ ರೈತರ ಜಮೀನನ್ನು ಸಿಎನ್‌ಡಿ ವ್ಯಾಪ್ತಿಗೆ ತಂದು ಸೆಕ್ಷನ್ 4ರ ಅಡಿಯಲ್ಲಿ ನೋಟಿಸ್ ಜಾರಿ ಮಾಡಿರುವ ಕ್ರಮವನ್ನು ಕೈಬಿಟ್ಟು ಜಮೀನನ್ನು 57ರ ಅಡಿಯಲ್ಲಿ ಸಕ್ರಮಗೊಳಿಸಬೇಕು. ಮಾನವ ಹಾಗೂ ವನ್ಯಜೀವಿ ನಡುವಿನ ಸಂಘರ್ಷವನ್ನು ತಡೆಯಲು ಶಾಶ್ವತ ಯೋಜನೆಯನ್ನು ರೂಪಿಸಬೇಕು. ಕೊಡಗಿನಲ್ಲಿರುವ ನಿವೇಶನ ರಹಿತ ಮತ್ತು ವಸತಿ ರಹಿತ ಕುಟುಂಬಗಳಿಗೆ ತಕ್ಷಣ ನಿವೇಶನ ವಸತಿ ಮಂಜೂರು ಮಾಡಬೇಕು. ಎಲ್ಲಾ ನಮೂನೆ 50 53 57 ಹಾಗೂ 94ಸಿ 94ಸಿಸಿ ಸಮಿತಿ ರಚಿಸಿ ಸಕ್ರಮಗೊಳಿಸಬೇಕು. ಜೀವನದಿ ಕಾವೇರಿ ಕಲುಷಿತಗೊಳ್ಳುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.