ADVERTISEMENT

ಸುಂಟಿಕೊಪ್ಪ | ಬೀದಿ ನಾಯಿಗಳ ದಾಳಿ: ಮನೆಗೆ ನುಗ್ಗಿದ ಚಿರತೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 4:44 IST
Last Updated 27 ಅಕ್ಟೋಬರ್ 2025, 4:44 IST
ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆ ವ್ಯಾಪ್ತಿಯ ತೊಂಡೂರಿನಲ್ಲಿ ಭಾನುವಾರ ಬೀದಿ ನಾಯಿಗಳ ದಾಳಿಯಿಂದ ಬಲಿಯಾದ ಜಿಂಕೆಯನ್ನು ಅರಣ್ಯ ಇಲಾಖೆ ವಾಹನದ ಮೂಲಕ ಸಾಗಿಸಿದರು.
ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆ ವ್ಯಾಪ್ತಿಯ ತೊಂಡೂರಿನಲ್ಲಿ ಭಾನುವಾರ ಬೀದಿ ನಾಯಿಗಳ ದಾಳಿಯಿಂದ ಬಲಿಯಾದ ಜಿಂಕೆಯನ್ನು ಅರಣ್ಯ ಇಲಾಖೆ ವಾಹನದ ಮೂಲಕ ಸಾಗಿಸಿದರು.   

ಸುಂಟಿಕೊಪ್ಪ: ಬೀದಿನಾಯಿಗಳ ದಾಳಿಯಿಂದ ಪ್ರಾಣ ಉಳಿಸಿಕೊಳ್ಳಲು ಜಿಂಕೆಯೊಂದು ಮನೆಗೆ ನುಗ್ಗಿ ಅತಂಕ ಸೃಷ್ಟಿಸಿದ ಘಟನೆ ಸಮೀಪದ ತೊಂಡೂರು ಗ್ರಾಮದಲ್ಲಿ ಭಾನುವಾರ ನಡೆದಿದೆ.

7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡೂರು ಗ್ರಾಮದಲ್ಲಿ ಬೆಳಿಗ್ಗೆ 8ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಮುಖ್ಯ ರಸ್ತೆಯಲ್ಲಿರುವ ರಾಧಕೃಷ್ಣಪ್ಪ ಅವರ ಮನೆಗೆ ಜಿಂಕೆ ನುಗ್ಗಿದೆ. ಮನೆಯಲ್ಲಿ ರಾಧ ಅವರ ಸೊಸೆ ಮತ್ತು ಪುಟ್ಟ ಮಗು ಇತ್ತು. ಮನೆಯ ಬಾಗಿಲಿಗೆ ಜಿಂಕೆ ಡಿಕ್ಕಿ ಹೊಡೆದಿದೆ. ಕೊನೆಗೆ ಮನೆಯಿಂದ ಹೊರ ಬಂದ ಜಿಂಕೆ ರಸ್ತೆ ದಾಟಿ ಅರಣ್ಯ ಪ್ರವೇಶಿಸುವಷ್ಟರಲ್ಲಿ ಮತ್ತೆ ದಾಳಿ ನಡೆಸಿದ ನಾಯಿಗಳು ಜಿಂಕೆಯನ್ನು ಕೊಂದಿವೆ.

ವಿಷಯ ತಿಳಿದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದು ಜಿಂಕೆಯ ಕಳೇಬರವನ್ನು ವಾಹನದಲ್ಲಿ ರವಾನಿದ್ದಾರೆ‌‌.ಈ ಹೆಣ್ಣು ಜಿಂಕೆಯು 12 ವರ್ಷ ಪ್ರಾಯದೆಂದು ಅಂದಾಜಿಸಲಾಗಿದೆ.

ADVERTISEMENT

ಈ ವೇಳೆ ಮಾತನಾಡಿದ ರಾಧಕೃಷ್ಣಪ್ಪ ಅವರು, ದೇವರ ದಯೆಯಿಂದ ಏನು ಅಹಿತಕರ ಘಟನೆ ಸಂಭವಿಸಿಲ್ಲ. ವನ್ಯಪ್ರಾಣಿ ಮತ್ತು ಬೀದಿನಾಯಿಗಳ ಹಾವಳಿಯಿಂದ ನಮಗೆ ತೊಂದರೆಯಾಗಿದ್ದರೆ ಯಾರು ಹೊಣೆ? ಎಂದು ಪ್ರಶ್ನಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮತ್ತು ಸಮಾಜ ಸೇವಕ ಆರ್.ಕೆ.ಚಂದ್ರು ಮಾತನಾಡಿ, ಈ ತಿಂಗಳಿನಲ್ಲಿ ಸರಿಸುಮಾರು 18 ಜಿಂಕೆಗಳು ಬೀದಿನಾಯಿಗಳ ದಾಳಿಗೆ ಒಳಗಾಗಿವೆ. ಬೀದಿ ನಾಯಿಗಳ ಹಾವಳಿಯನ್ನು ಗ್ರಾಮ ಪಂಚಾಯಿತಿ ನಿಯಂತ್ರಿಸಬೇಕಾಗಿದೆ ಎಂದು ಹೇಳಿದರು.

ಶನಿವಾರವೂ ಕೂಡ ಹಾಡಹಗಲೇ ಗರ್ಭಿಣಿ ಜಿಂಕೆಯೊಂದನ್ನು ನಾಯಿಗಳು ಬೇಟೆಯಾಡಿದನ್ನು ಅವರು ಉಲ್ಲೇಖಿಸಿದರು. ಅರಣ್ಯಕ್ಕೆ ಪ್ರವೇಶೀಸುವವರ ಮೇಲೆ ಮೊಕದ್ದಮೆ ದಾಖಲಿಸುವ ವನ್ಯಜೀವಿ ವಿಭಾಗ ಪ್ರತ್ಯೇಕವಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಾಣಿ ಹಿಂಸೆಯಾಗುತ್ತಿದ್ದರೂ ಕೂಡ ಇಲಾಖೆಯ ಅಧಿಕಾರಿಗಳು ಮೌನವಾಗಿರುವುದು ಯಾಕೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೀದಿನಾಯಿಗಳ ಪರವಾಗಿ ಇರುವವರು ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಡೆಸುವುದಲ್ಲದೆ, ಬೀದಿ ನಾಯಿಗಳಿಗೆ ಆಹಾರ ಮತ್ತು ಪುನರ್ವಸತಿ ಕೇಂದ್ರವನ್ನು ತೆರೆಯುವಂತಾಗಬೇಕೆಂದು ಅವರು ಸಲಹೆ ನೀಡಿದರು.

ಉಪವಲಯ ಸಂರಕ್ಷಣಾಧಿಕಾರಿ ಕೆ.ಎ.ದೇವಯ್ಯ ಪ್ರತಿಕ್ರಿಯಿಸಿ, ಜಿಂಕೆಗಳ ಸಾವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿಗೆ ಲಿಖಿತ ಮನವಿ ನೀಡಲಾಗುವುದೆಂದು ಹೇಳಿದರು.

ಈ ಕುರಿತು ಮಾಹಿತಿ ನೀಡಿದ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಪಿಡಿಒ ನಂದೀಶ್ ಅವರು, ಅರಣ್ಯ ಇಲಾಖೆಯಿಂದ ಮನವಿಯನ್ನು ಆಡಳಿತ ಮಂಡಳಿ ಸಭೆಯಲ್ಲಿಟ್ಟು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.