ADVERTISEMENT

ಮಡಿಕೇರಿ: ಸ್ವಚ್ಛತೆಗೆ ಸೇರಿತು ಸಾವಿರಾರು ಕೈ

ಕೆಲವೇ ತಾಸುಗಳಲ್ಲಿ ರಾಶಿಗಟ್ಟಲೆ ಕಸ ಸಂಗ್ರಹ, ಸ್ವಚ್ಛತೆಗೆ ಮುನ್ನುಡಿ ಬರೆದ ಅಭಿಯಾನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 4:18 IST
Last Updated 16 ಅಕ್ಟೋಬರ್ 2025, 4:18 IST
ಶಾಸಕ ಡಾ.ಮಂತರ್‌ಗೌಡ ಅವರ ಕಸ ಗುಡಿಸುವ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಮಡಿಕೇರಿಯಲ್ಲಿ ಬುಧವಾರ ಚಾಲನೆ ನೀಡಿದರು
ಶಾಸಕ ಡಾ.ಮಂತರ್‌ಗೌಡ ಅವರ ಕಸ ಗುಡಿಸುವ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಮಡಿಕೇರಿಯಲ್ಲಿ ಬುಧವಾರ ಚಾಲನೆ ನೀಡಿದರು   

ಮಡಿಕೇರಿ: ‘ಐದು ಬೆರಳು ಕೂಡಿ ಒಂದು ಮುಷ್ಟಿಯು ಹಲವು ಮಂದಿ ಸೇರಿ ಈ ಸಮಷ್ಟಿಯು’ ಎಂಬ ದೇಶಭಕ್ತಿಗೀತೆಯೊಂದರ ಸಾಲಿನಂತೆ ಕೊಡಗು ಜಿಲ್ಲೆಯಾದ್ಯಂತ ಬುಧವಾರ ನಡೆದ ‘ಸ್ವಚ್ಛ ಕೊಡಗು - ಸುಂದರ ಕೊಡಗು’ ಅಭಿಯಾನಕ್ಕೆ ಸಾವಿರಾರು ಕೈಗಳು ಸೇರಿದವು. ಕೆಲವೇ ತಾಸಿನಲ್ಲಿ ಸುರಿಸಿದ ಬೆವರಿಗೆ ರಾಶಿಗಟ್ಟಲೆ ಕಸ ಸಂಗ್ರಹವಾಗಿ, ಹಲವು ಪ್ರದೇಶಗಳು ಸ್ವಚ್ಛತೆಯಿಂದ ಕಂಗೊಳಿಸಿದವು.

ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್ ನೀಡಿದ ಒಂದು ಕರೆಗೆ ಜಿಲ್ಲೆಯ ಎಲ್ಲ ಪ್ರಮುಖರು ಕಿವಿಯಾದರು. ಬರೋಬರಿ 320ಕ್ಕೂ ಅಧಿಕ ಸಂಘಟನೆಗಳು, ಸಂಘ, ಸಂಸ್ಥೆಗಳು ಸ್ವಚ್ಛತಾ ಅಭಿಯಾನದಲ್ಲಿ ಜೊತೆಯಾದವು. ಎಲ್ಲೆಲ್ಲೂ ಕಸ ತೆಗೆಯುವ ದೃಶ್ಯಗಳು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನದವರೆಗೆ ಕಂಡು ಬಂದವು.

ದಕ್ಷಿಣ ಕೊಡಗಿನ ಗಡಿಭಾಗ ಕುಟ್ಟದಿಂದ ಹಿಡಿದು ಉತ್ತರ ಕೊಡಗಿನ ಗಡಿಭಾಗ ಕೊಡ್ಲಿಪೇಟೆಯವರೆಗೂ ಜನರು ಅಭಿಯಾನದಲ್ಲಿ ಭಾಗಿಯಾಗುವ ಮೂಲಕ ಸ್ವಚ್ಛತೆಯ ಸಂದೇಶ ಸಾರಿದರು. ಇವರಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಎನ್‌ಎಸ್‌ಎಸ್‌ ಕಾರ್ಯಕರ್ತರು, ವಿವಿಧ ಸಂಘ, ಸಂಸ್ಥೆಗಳ ಕಾರ್ಯಕರ್ತರು, ಉಪನ್ಯಾಸಕರು, ಶಿಕ್ಷಕರು, ಸಾರ್ವಜನಿಕರೂ ಇದ್ದರು. ಇಂತಹದ್ದೊಂದು ಅಪರೂಪದ ದೃಶ್ಯಕ್ಕೆ ಕೊಡಗು ಸಾಕ್ಷಿಯಾಯಿತು.

ADVERTISEMENT

ಇಲ್ಲಿನ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಶಾಸಕ ಡಾ.ಮಂತರ್‌ಗೌಡ ಮತ್ತು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಕಸ ತೆಗೆಯುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡುತ್ತಿದ್ದಂತೆ ಸುಮಾರು 145ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ ಶುರುವಾಯಿತು.

ನಗರಸಭೆ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನಾಸೀರ್ ಅಹಮ್ಮದ್, ಉಪಾಧ್ಯಕ್ಷ ಜಾಹೀರ್ ಅಹಮ್ಮದ್, ಗೌರವ ಸಲಹೆಗಾರ ಜಿ.ಚಿದ್ವಿಲಾಸ್, ಅಭಿಯಾನದ ಸಾಮಾಜಿಕ ಜಾಲತಾಣ ಪ್ರಚಾರ ಸಮಿತಿ ಸಂಚಾಲಕ ಎಚ್.ಟಿ.ಅನಿಲ್, ಚೇಂಬರ್ ಆಫ್ ಕಾಮರ್ಸ್ ಮಡಿಕೇರಿ ಘಟಕದ ಅಧ್ಯಕ್ಷ ಸಂತೋಷ್ ಅಣ್ಕೇಕರ್, ಹೋಂಸ್ಟೇ ಅಸೋಸಿಯೇಷನ್  ಅಧ್ಯಕ್ಷೆ ಮೋಂತಿ ಗಣೇಶ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್, ರೆಡ್‌ಕ್ರಾಸ್ ಜಿಲ್ಲಾಧ್ಯಕ್ಷ ಬಿ.ಕೆ.ರವೀಂದ್ರ ರೈ,  ಔಷಧಿ ವ್ಯಾಪಾರಸ್ಥರ ಸಂಘದ  ಜಿಲ್ಲಾ ನಿರ್ದೇಶಕರಾದ ಪ್ರಸಾದ್ ಗೌಡ, ವಸಂತ್ ಕುಮಾರ್, ಅಂಬೆಕಲ್ ವಿನೋದ್, ಕೊಡಗು ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ವಸಂತ್, ಮಡಿಕೇರಿ ಲಯನ್ಸ್ ಸಂಸ್ಥೆ ಅಧ್ಯಕ್ಷ ಮದನ್ ಭಾಗವಹಿಸಿದ್ದರು.

ಬೆಳಿಗ್ಗೆ 8 ಗಂಟೆಗೆ ಆರಂಭವಾದ ಅಭಿಯಾನ ಸಾವಿರಾರು ಮಂದಿ ಭಾಗಿ | ಕೆಲವೆಡೆ ಸ್ವಯಂಪ್ರೇರಿತರಾಗಿ ಸಾರ್ವಜನಿಕರೂ ಭಾಗಿ
ಸ್ವಚ್ಛ ಮತ್ತು ಸುಂದರ ಕೊಡಗು ನಿರ್ಮಾಣದ ಜವಾಬ್ದಾರಿ ಜಿಲ್ಲೆಯ ಪ್ರತಿಯೊಬ್ಬರ ಮೇಲಿದೆ. ಇಲ್ಲಿನ ಪ್ರಕೃತಿ ಕಾಪಾಡದಿದ್ದರೆ ಭವಿಷ್ಯದಲ್ಲಿ ತೊಂದರೆಯಾಗುತ್ತದೆ.
ಡಾ.ಮಂತರ್‌ಗೌಡ ಶಾಸಕ.
ಅಭಿಯಾನದಲ್ಲಿ ಜಿಲ್ಲೆಯಾದ್ಯಂತ ಸಂಗ್ರಹವಾಗುವ ಕಸವನ್ನು ಮೈಸೂರಿನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳುಹಿಸಲಾಗುವುದು. ಕೊಡಗಿಗೆ ಅಗತ್ಯವಾಗಿದ್ದ ಅಭಿಯಾನ ಇದಾಗಿದ್ದು ಅಸಾಧ್ಯ ಯಾವುದು ಇಲ್ಲ ಎಂಬುದನ್ನು ಸಾಬೀತುಪಡಿಸಿದೆ.
ವೆಂಕಟ್ ರಾಜಾ ಜಿಲ್ಲಾಧಿಕಾರಿ.
ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಪ್ರವಾಸೋದ್ಯಮ ಅವಲಂಬಿತರು ಜವಾಬ್ದಾರಿ ತೆಗೆದುಕೊಂಡು ಈ ಯೋಜನೆ ರೂಪಿಸಲಾಗಿದೆ. ಇದರಲ್ಲಿ 320 ಕ್ಕೂ ಅಧಿಕ ಸಂಘ ಸಂಸ್ಥೆಗಳು ಪಾಲ್ಗೊಂಡಿವೆ
ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಕೂರ್ಗ್ ಹೋಟೆಲ್ ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ.

ನೀರಿನ ಬಾಟಲಿಗಿಂತ ಮದ್ಯದ ಬಾಟಲಿಗಳೇ ಅಧಿಕ!

ಕಸ ಸಂಗ್ರಹದಲ್ಲಿ ನೀರಿನ ಬಾಟಲಿಗಿಂತ ಹೆಚ್ಚಾಗಿ ಮದ್ಯದ ಬಾಟಲಿಗಳೇ ಕಂಡು ಬಂದವು ಎಂದು ಕಸ ಸಂಗ್ರಹದಲ್ಲಿ ತೊಡಗಿದ್ದ ಕೆಲವರು ‘ಪ್ರಜಾವಾಣಿ’ಗೆ ತಿಳಿಸಿದರು. ವಿಶೇಷವಾಗಿ ಹೊರಗಿನಿಂದ ಬಂದು ಇಲ್ಲಿ ವಾಹನದಲ್ಲಿ ಕುಳಿತು ಮದ್ಯ ಸೇವಿಸಿ ಬಾಟಲಿಗಳನ್ನು ರಸ್ತೆ ಬದಿಯಲ್ಲಿ ಹೆದ್ದಾರಿ ಬದಿಗಳಲ್ಲಿ ಎಸೆದು ಹೋಗಿರುವುದು ಕಂಡು ಬಂದಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.