
ವಿರಾಜಪೇಟೆ: ಪುರಸಭೆಯ ಆಡಳಿತ ಮಂಡಳಿಯ ಅವಧಿ ಮುಗಿದ ಬಗ್ಗೆ ಅಧಿಕೃತ ಘೋಷಣೆಯಾಗಿದ್ದು, ಜೆಡಿಎಸ್ ಪಕ್ಷದ ಪ್ರಮುಖರು ಶನಿವಾರ ಪಟಾಕಿ ಸಿಡಿಸಿ ಪಟ್ಟಣದಲ್ಲಿ ಸಂಭ್ರಮಾಚರಣೆ ನಡೆಸಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಈ ಹಿಂದೆ ಪುರಸಭೆಯು ಪಟ್ಟಣ ಪಂಚಾಯಿತಿ ಆಗಿದ್ದಾಗ 2018ರಲ್ಲಿ ಚುನಾವಣೆ ನಡೆದಿತ್ತು. ಬಳಿಕ ಪುರಸಭೆಯಾಗಿ ಮೇಲದರ್ಜೆಗೇರಿದರೂ ಚುನಾವಣೆ ನಡೆಯದೇ ಪಟ್ಟಣ ಪಂಚಾಯಿತಿಗೆ ಆಯ್ಕೆಯಾದವರೆ ಅಧಿಕಾರಿ ನಡೆಸಿದ್ದರು. ಆ ಚುನಾವಣೆಯಲ್ಲಿ ಆಯ್ಕೆಯಾದವರು ಏಳುವರೆ ವರ್ಷ ಸುದೀರ್ಘ ಅಧಿಕಾರಕ್ಕೆ ಅಂಟಿಕೊಂಡಿದ್ದರು. ಈ ಅವಧಿಯಲ್ಲಿ ಯಾವುದೇ ಜನಪರ, ಅಭಿವೃದ್ದಿ ಕೆಲಸದಲ್ಲಿ ತೊಡಗಿಸಿಕೊಳ್ಳದೆ ಸ್ವಹಿತಾಸಕ್ತಿಯಲ್ಲಿ ಕಾಲ ಕಳೆದರು ಎಂದರು.
‘ಕೆಲ ಸದಸ್ಯರ ಕಪಿಮುಷ್ಠಿಯಲ್ಲಿ ಪುರಸಭೆಯ ಆಡಳಿತ ವ್ಯವಸ್ಥೆ ನಲುಗಿಹೋಗಿತ್ತು. ನಾವೇ ಎಲ್ಲ ಎನ್ನುವಂತೆ ದರ್ಪದಿಂದ ವರ್ತಿಸುತ್ತಿದ್ದ ಕೆಲ ಸದಸ್ಯರು, ಕೆಲ ಅಧಿಕಾರಿಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿದರು. ಶಾಸಕ ಎ.ಎಸ್.ಪೊನ್ನಣ್ಣ ಅವರು ಅನುದಾನ ತಂದು ಪಟ್ಟಣ ಅಭಿವೃದ್ಧಿಪಡಿಸುವ ಕನಸು ಕಂಡಿದ್ದರೂ ಕೆಲ ಸದಸ್ಯರಿಂದ ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗಲಿಲ್ಲ. ಭ್ರಷ್ಟಚಾರ ನಡೆಸಿ, ಅದರ ವಿರುದ್ಧ ಧ್ವನಿ ಎತ್ತಿದವರ ಬಾಯಿ ಮುಚ್ಚಿಸುವ ವ್ಯವಸ್ಥಿತ ಕೆಲಸವನ್ನು ಕೆಲ ಸದಸ್ಯರು ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಅಭಿವೃದ್ಧಿ ಕನಸು ಕಂಡಿರುವ ಶಾಸಕ ಎ.ಎಸ್. ಪೊನ್ನಣ್ಣ ಅವರು ಪ್ರಾಮಾಣಿಕರು ಹಾಗೂ ದಕ್ಷರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಲಿ. ಆ ಮೂಲಕ ಜನತೆ ತಮ್ಮ ಮೇಲೆ ಹೊಂದಿರುವ ನಂಬಿಕೆ ಉಳಿಸಿಕೊಳ್ಳಲಿ. ಪದೇಪದೇ ಸ್ಥಳೀಯ ಚುನಾವಣೆಗೆ ಸ್ಪರ್ಧಿಸಿ ಆರಿಸಿ ಸ್ವಹಿತಾಸಕ್ತಿ ಮೆರೆಯುವವರನ್ನು ಜನ ತಿರಸ್ಕರಿಸಬೇಕು. ‘ಹಣ ನೀಡಿದರೆ ಜನ ಮತ ಹಾಕುತ್ತಾರೆ’ ಎನ್ನುವ ದರ್ಪ ಹೊಂದಿರುವವರಿಗೆ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.