ADVERTISEMENT

ವಿರಾಜಪೇಟೆ: ಹುಲಿ ಸೆರೆಗೆ ಕಾರ್ಯಾಚರಣೆ

ಗ್ರಾಮಸ್ಥರು, ರೈತರಿಂದ ಅಹೋರಾತ್ರಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 2:15 IST
Last Updated 30 ಮಾರ್ಚ್ 2022, 2:15 IST
ಅರಣ್ಯ ಇಲಾಖೆಯ ಅಧಿಕಾರಿಗಳನ್ನು ರೈತ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು
ಅರಣ್ಯ ಇಲಾಖೆಯ ಅಧಿಕಾರಿಗಳನ್ನು ರೈತ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು   

ವಿರಾಜಪೇಟೆ (ಕೊಡಗು): ‘ಕಾರ್ಮಿಕನ ಬಲಿ ಪಡೆದ ಅಪಾಯಕಾರಿ ಹುಲಿಗೆ ಗುಂಡಿಕ್ಕಲು ಸರ್ಕಾರದಿಂದ ಶೀಘ್ರದಲ್ಲಿಯೇ ಅನುಮತಿ ಸಿಗುವ ಸಾಧ್ಯತೆಯಿದೆ. ಅದಕ್ಕೂ ಮೊದಲು ಕಾರ್ಯಾಚರಣೆ ನಡೆಸಿ ಅಪಾಯಕಾರಿ ಹುಲಿಯನ್ನು ಸೆರೆ ಹಿಡಿಯಲು ಪ್ರಯತ್ನಿಸಲಾಗುವುದು’ ಎಂದು ವಿರಾಜಪೇಟೆ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ತಿಳಿಸಿದರು.

‘ಅರಣ್ಯ ಇಲಾಖೆಯು ಹುಲಿ ದಾಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ’ ಎಂದುರುದ್ರಗುಪ್ಪೆ ಗ್ರಾಮದಲ್ಲಿ ಅವರು ರೈತರಿಗೆ ಭರವಸೆ ನೀಡಿದರು.

ಸೋಮವಾರ ಸಂಜೆ ಹುಲಿ ದಾಳಿಗೆ ಬಲಿಯಾದ ಕಾರ್ಮಿಕ ಗಣೇಶ್ (40) ಮೃತದೇಹವಿಟ್ಟು ಗ್ರಾಮಸ್ಥರು ಹಾಗೂ ರೈತ ಸಂಘದ ಪದಾಧಿಕಾರಿಗಳು ಅಹೋರಾತ್ರಿ ಪ್ರತಿಭಟನೆ ನಡೆಸಿದರು.

ADVERTISEMENT

ಸಮೀಪದ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1ನೇ ರುದ್ರಗುಪ್ಪೆ ಗ್ರಾಮದ ಕಾಫಿ ತೋಟದಲ್ಲಿ ಕಾಳು ಮೆಣಸು ಕೊಯ್ಲು ವೇಳೆ ಗಣೇಶ್ ಹುಲಿ ದಾಳಿಯಿಂದ ಮೃತಪಟ್ಟಿದ್ದರು. ‌

ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಮೃತದೇಹವನ್ನು ಕೊಂಡೊಯ್ಯಲು ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದ ಗ್ರಾಮಸ್ಥರು ರಾತ್ರಿಯಿಡೀ ಸ್ಥಳದಲ್ಲೇ ಧರಣಿ ನಡೆಸಿದ್ದರು.

‘ಕಾರ್ಮಿಕನ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಗ್ರಾಮಸ್ಥರು ಭೀತಿಗೆ ಒಳಗಾಗಿದ್ದಾರೆ. ದುರಂತಕ್ಕೆ ಹೊಣೆಯಾಗಿರುವ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮನು ಸೋಮಯ್ಯ ಡಿವೈಎಸ್ಪಿ ಜಯಕುಮಾರ್ ಅವರಿಗೆ ದೂರು ನೀಡಿದರು. ಡಿವೈಎಸ್ಪಿ ಕ್ರಮದ ಭರವಸೆ ನೀಡಿದರು.

ಸ್ಥಳಕ್ಕೆ ಬಂದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಅವರನ್ನು ಸುತ್ತುವರಿದ ಗ್ರಾಮಸ್ಥರು, ‘ಇಂತಹ ಅಧಿಕಾರಿಗಳು ಜಿಲ್ಲೆಗೆ ಬೇಕಾಗಿಲ್ಲ’ ಎಂದು ಘೋಷಣೆ ಕೂಗಿದರು.

ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಇತ್ತು. ಮೃತದೇಹವನ್ನು ವಿರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.