ADVERTISEMENT

ಮಡಿಕೇರಿ: ನೆರವಿಗೆ ಕಾದಿದೆ ಪ್ರವಾಸೋದ್ಯಮ ಕ್ಷೇತ್ರ

ಕೇಂದ್ರ ಸರ್ಕಾರದ ಪ್ರವಾಸೋದ್ಯಮದ ಯಾವ ಯೋಜನೆಗೂ ಒಳಪಡದ ಕೊಡಗು ಜಿಲ್ಲೆ!

ಕೆ.ಎಸ್.ಗಿರೀಶ್
Published 31 ಜನವರಿ 2024, 2:58 IST
Last Updated 31 ಜನವರಿ 2024, 2:58 IST
ತಡಿಯಂಡಮೋಳ್ ಬೆಟ್ಟಶ್ರೇಣಿಯಲ್ಲಿ ಹರಿದು ಬರುತ್ತಿರುವ ನೀಲಕಂಡಿ ಜಲಧಾರೆ
ತಡಿಯಂಡಮೋಳ್ ಬೆಟ್ಟಶ್ರೇಣಿಯಲ್ಲಿ ಹರಿದು ಬರುತ್ತಿರುವ ನೀಲಕಂಡಿ ಜಲಧಾರೆ   

ಮಡಿಕೇರಿ: ಕೊಡಗು ಜಿಲ್ಲೆಯ ಜನರು ಕಾಫಿ ಬೆಳೆಯ ಮೇಲೆ ಹೇಗೆ ಅವಲಂಬಿತರಾಗಿದ್ದಾರೋ ಹಾಗೆಯೇ ಪ್ರವಾಸೋದ್ಯಮ ಕ್ಷೇತ್ರದ ಮೇಲೂ ಹಲವು ಮಂದಿ ಅವಲಂಬಿತರಾಗಿದ್ದಾರೆ.

ಒಂದಿಲ್ಲೊಂದು ರೀತಿಯಲ್ಲಿ ಪ್ರತ್ಯೇಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಪ್ರವಾಸೋದ್ಯಮ ಕ್ಷೇತ್ರವನ್ನು ಬಹುಪಾಲು ಮಂದಿ ಅವಲಂಬಿಸಿದ್ದಾರೆ. ಆದರೆ, ಇದುವರೆಗೂ ಕೇಂದ್ರ ಸರ್ಕಾರ ಈ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಬಾರಿಯ ಬಜೆಟ್‌ನಲ್ಲಾದರೂ ಏನಾದರೂ ಕೊಡುಗೆ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ಇಲ್ಲಿನ ಜನರಿದ್ದಾರೆ.

ಕೇಂದ್ರ ಸರ್ಕಾರವು ಈಗಾಗಲೇ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪರ್ವತಮಾಲಾ, ಪ್ರಸಾದ, ಸ್ವದೇಶ ದರ್ಶನ್ ಹೀಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಯಾವುದೇ ಯೋಜನೆ ವ್ಯಾಪ್ತಿಗೆ ಕೊಡಗು ಜಿಲ್ಲೆಯನ್ನು ಸೇರಿಸಿಲ್ಲ. ಇದು ಜನರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ADVERTISEMENT

ಹಾಗೆ ನೋಡಿದರೆ, ಕೇಂದ್ರ ಸರ್ಕಾರದ ಪ್ರವಾಸೋದ್ಯಮದ ಯೋಜನೆಗಳ ವ್ಯಾಪ್ತಿಗೆ ರಾಜ್ಯದ ಬಹಳಷ್ಟು ಜಿಲ್ಲೆಗಳು ಇನ್ನೂ ಸೇರ್ಪಡೆಯಾಗಿಲ್ಲ. ಬಳ್ಳಾರಿ, ಮೈಸೂರು, ಬೆಳಗಾವಿ, ಬೀದರ್ ಸೇರಿದಂತೆ ಕೇವಲ 6 ಜಿಲ್ಲೆಗಳಷ್ಟೇ ಕೇಂದ್ರದ ಪ್ರವಾಸೋದ್ಯಮದ ಯೋಜನೆಗಳ ವ್ಯಾಪ್ತಿಗೆ ಒಳಪಟ್ಟಿವೆ. ಈ ಬಾರಿ ಕೊಡಗು ಜಿಲ್ಲೆ ಸೇರ್ಪಡೆಯಾಗಬಹುದೇ ಎಂಬ ನಿರೀಕ್ಷೆ ಮೂಡಿಸಿದೆ.

ಮುಖ್ಯವಾಗಿ, ಕೊಡಗು ಉಳಿದ ಜಿಲ್ಲೆಗಳಂತೆ ಅಲ್ಲ. ಇಲ್ಲಿ ಪ್ರವಾಸೋದ್ಯಮಕ್ಕೆ ವಿಫುಲವಾದ ಅವಕಾಶಗಳಿವೆ. ಮೂಲಸೌಕರ್ಯಗಳ ಕೊರತೆ ಹಾಗೂ ಪ್ರಚಾರದ ಕೊರತೆಯ ನಡುವೆಯೂ ಉತ್ತರ ಭಾರತದಿಂದಲೂ ಲಕ್ಷಾಂತರ ಮಂದಿ ಪ್ರವಾಸಿಗರು ಪ್ರತಿ ವರ್ಷ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರವನ್ನು ಶಿಸ್ತುಬದ್ಧವಾಗಿ ಅಭಿವೃದ್ಧಿಗೊಳಿಸಿದರೆ ಖಂಡಿತವಾಗಿಯೂ ಇಲ್ಲಿನ ಜನರಿಗೆ ಅನುಕೂಲವಾಗುವುದರಲ್ಲಿ ಸಂಶಯ ಇಲ್ಲ ಎಂದು ಬಹುತೇಕ ಮಂದಿ ಅಭಿಪ್ರಾಯಪಡುತ್ತಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಪ್ರವಾಸಿಗರಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಆದಾಯ ತರುವ ಜಿಲ್ಲೆಯಾಗಿರುವ ಕೊಡಗನ್ನು ವಿಶೇಷವಾಗಿ ಪರಿಗಣಿಸಬೇಕು ಎಂಬ ಒತ್ತಾಯವೂ ವಿವಿಧ ವಲಯಗಳ ಪರಿಣತರಿಂದ ಕೇಳಿ ಬಂದಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೊಡಗು ಜಿಲ್ಲಾ ಹೋಟೆಲ್ ರೆಸಾರ್ಟ್ ಮತ್ತು ರೆಸ್ಟೋರೆಂಟ್ ಸಂಘದ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ‘ಗೂಗಲ್‌ನಲ್ಲಿ ಹುಡುಕುವ ಪ್ರವಾಸಿ ತಾಣಗಳ ಪೈಕಿ ವಿಶ್ವದಲ್ಲೇ ಕೊಡಗು 7ನೇ ಸ್ಥಾನದಲ್ಲಿದೆ. ‘ಸ್ಕಾಟ್‌ಲ್ಯಾಂಡ್ ಆಫ್ ಇಂಡಿಯಾ’ ಎಂದೇ ಪ್ರಸಿದ್ಧಿಯಾಗಿರುವ ಕೊಡಗನ್ನು ಕೇಂದ್ರ ಸರ್ಕಾರ ವಿಶೇಷವಾಗಿ ಪರಿಗಣಿಸಬೇಕಿದೆ’ ಎಂದು ಹೇಳಿದರು.

ಸುಮಾರು 1 ಕೋಟಿ ಜನರು ಪ್ರತಿ ವರ್ಷವೂ ಕೊಡಗಿಗೆ ಭೇಟಿ ನೀಡುತ್ತಾರೆ. ಕೇಂದ್ರ ಸರ್ಕಾರ ಇಂತಹ ಮಹತ್ವಪೂರ್ಣ ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಬೇಕು. ಒಂದು ರೀತಿಯಲ್ಲಿ ದತ್ತು ತೆಗೆದುಕೊಂಡಂತೆ ಪರಿಗಣಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಕೊಡಗಿನ ತಡಿಯಂಡಮೋಳ್‌ನಲ್ಲಿ ಸೂರ್ಯೋದಯದ ಸೊಬಗು

ತಡಿಯಂಡಮೋಳ್ ಶಿಖರದತ್ತ ಚಾರಣಿಗರು
ಮಡಿಕೇರಿಯ ರಾಜಾಸೀಟ್‌ನಲ್ಲಿ ಕಾಣ ಸಿಗುವ ಸೂರ್ಯಾಸ್ತ
ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ವಾರಾಂತ್ಯದಲ್ಲಿ ಕಂಡು ಬರುವ ಪ್ರವಾಸಿಗರ ದಂಡು
ಮಡಿಕೇರಿಯ ರಾಜಾಸೀಟ್ ಉದ್ಯಾನಕ್ಕೆ ಭೇಟಿ ನೀಡುವ ಅಪಾರ ಜನಸ್ತೋಮ
ಮಳೆಗಾಲದಲ್ಲಿ ಕಂಡು ಬರುವ ಮಡಿಕೇರಿ ಸಮೀಪದ ಅಬ್ಬಿ ಜಲಪಾತ
ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಜಲಪಾತ

ಕೇಂದ್ರ ಬಜೆಟ್‌ನಲ್ಲಿ ಕೊಡಗಿಗೆ ಬೇಕಿದೆ ವಿಶೇಷ ಅನುದಾನ ಜಿಲ್ಲೆಗೂ ಬೇಕಿದೆ ಕೇಂದ್ರ ಪ್ರವಾಸೋದ್ಯಮ ಯೋಜನೆ ಗರಿಗೆದರಿದ ಪ್ರವಾಸೋದ್ಯಮ ವಲಯದ ನಿರೀಕ್ಷೆಗಳು

ಕೊಡಗು ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಯನ್ನು ಕೇಂದ್ರ ಸರ್ಕಾರ ವಿಶೇಷವಾಗಿ ಪರಿಗಣಿಸಬೇಕು. ‌

-ಬಿ.ಆರ್.ನಾಗೇಂದ್ರ ಪ್ರಸಾದ್ ಜಿಲ್ಲಾ ಹೋಟೆಲ್ ರೆಸಾರ್ಟ್ ಮತ್ತು ರೆಸ್ಟೋರೆಂಟ್ ಸಂಘದ ಅಧ್ಯಕ್ಷ

‘ಚಾಲೆಂಜ್ ಮೋಡ್’ನಡಿ ಪ್ರಸ್ತಾವ ಸಲ್ಲಿಕೆ

ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಅನಿತಾ ಭಾಸ್ಕರ್ ಪ್ರತಿಕ್ರಿಯಸಿ ‘ಕೇಂದ್ರ ಸರ್ಕಾರಕ್ಕೆ ಈಗಾಗಲೇ ‘ಚಾಲೆಂಜ್ ಮೋಡ್’ ಯೋಜನೆಯಡಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು. ₹ 11 ಕೋಟಿ ಮೊತ್ತದ ಈ ಪ್ರಸ್ತಾವದಲ್ಲಿ ಪರಿಸರಸ್ನೇಹಿ ಪ್ರವಾಸೋದ್ಯಮವನ್ನು ಪ್ರಧಾನ ಅಂಶವನ್ನಾಗಿರಿಸಲಾಗಿದೆ. ದಕ್ಷಿಣ ಕೊಡಗಿನ 19 ಸ್ಥಳಗಳ ಅಭಿವೃದ್ಧಿ ಪ್ರಸ್ತಾವದಲ್ಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.