ADVERTISEMENT

ಮಡಿಕೇರಿ | ವಾತ್ಸಲ್ಯ ಶಿಶುಪಾಲನಾ ಕೇಂದ್ರಕ್ಕೆ ಚಾಲನೆ

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಉದ್ಘಾಟಿಸಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 6:05 IST
Last Updated 19 ನವೆಂಬರ್ 2022, 6:05 IST
ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ವಾತ್ಸಲ್ಯ ಶಿಶುಪಾಲನಾ ಕೇಂದ್ರವನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಿ ನಂತರ ಮಾತನಾಡಿದರು. ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಇದ್ದಾರೆ
ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ವಾತ್ಸಲ್ಯ ಶಿಶುಪಾಲನಾ ಕೇಂದ್ರವನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಿ ನಂತರ ಮಾತನಾಡಿದರು. ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಇದ್ದಾರೆ   

ಮಡಿಕೇರಿ: ‘ಎಲ್ಲ ಮಕ್ಕಳನ್ನು ಒಂದೇ ಮನೋಭಾವದಿಂದ ನೋಡಬೇಕು’ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ವಾತ್ಸಲ್ಯ ಶಿಶು ಪಾಲನಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳ ಕಲಿಕಾ ಚಟುವಟಿಕೆಗಳಿಗೆ ಹೆಚ್ಚು ಒತ್ತು ಕೊಡುವ ಕೆಲಸಗಳು ನಡೆಯಲಿ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಶಿಶು ಪಾಲನಾ ಕೇಂದ್ರ ಉದ್ಘಾಟನೆ ಆಗಿರುವುದರಿಂದ ಕಚೇರಿ ಸಿಬ್ಬಂದಿಗೆ ಹೆಚ್ಚಿನ ಸಹಾಯವಾಗಲಿದೆ’ ಎಂದರು.

ADVERTISEMENT

‘ಪಾಲನಾ ಕೇಂದ್ರದಲ್ಲಿ ಮಕ್ಕಳ ಚಲನವಲನ ಗಮನಿಸಲು ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ಕುಶಾಲನಗರದಲ್ಲೂ ಇದೇ ರೀತಿಯ ಕೇಂದ್ರ ಸ್ಥಾಪನೆಯಾಗಿದೆ. ಸರ್ಕಾರ ಇಂತಹ ಕಾರ್ಯಕ್ರಮಗಳ ಮುಖಾಂತರ ಜನರಿಗೆ ಉತ್ತಮ ಸ್ಪಂದನೆ ನೀಡುವ ಕಾರ್ಯ ಮಾಡುತ್ತಿದೆ’ ಎಂದು ಹೇಳಿದರು.

ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ ಮಾತನಾಡಿ, ‘ಜಿಲ್ಲೆಯ ಅನೇಕ ಕಡೆ ಕೇಂದ್ರಗಳು ಸ್ಥಾಪನೆಯಾಗಬೇಕು. ಜನರಿಗೆ ಕೆಲಸದ ನಡುವೆ ಮಕ್ಕಳನ್ನು ನೋಡಿಕೊಂಡು ಕಾರ್ಯ ನಿರ್ವಹಿಸುವುದು ಕಷ್ಟಕರವಾಗಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿಶು ಪಾಲನಾ ಕೇಂದ್ರ ಸ್ಥಾಪನೆಯಾಗಿದ್ದು ಜನಸಾಮಾನ್ಯರಿಗೆ ಮತ್ತು ಅಧಿಕಾರಿ ವರ್ಗದವರಿಗೂ ಅನುಕೂಲವಾಗಲಿದೆ’ ಎಂದರು.

ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಮಾತನಾಡಿ, ‘ಕೇಂದ್ರದ ಸೌಲಭ್ಯವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ’ ಎಂದು ತಿಳಿಸಿದರು.

ಸ್ತ್ರೀಶಕ್ತಿ ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ರೆಹನಾ ಸುಲ್ತಾನ್ ಮಾತನಾಡಿ, ‘ರಾಜ್ಯದಲ್ಲಿ ಪ್ರಥಮವಾಗಿ ಆರಂಭವಾದ ವಾತ್ಸಲ್ಯ ಕೇಂದ್ರ ಇದಾಗಿದ್ದು, ತಾಲ್ಲೂಕುಗಳಲ್ಲಿ ಎರಡು ಶಿಶು ಪಾಲನಾ ಕೇಂದ್ರಗಳು ಸ್ಥಾಪನೆ ಆಗಲಿವೆ’ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಿ. ಬಗಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಎನ್. ಮಂಜುನಾಥ್, ಶಿಶು ಕಲ್ಯಾಣಾಧಿಕಾರಿ ಪೂಣಚ್ಚ, ಇಲಾಖೆಯ ವಿಮಲಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.