ADVERTISEMENT

ಬಹಿಷ್ಕಾರ ಹಿಂದಕ್ಕೆ ಪಡೆದು ಮತದಾನ ಮಾಡಿದ ಅಂಬಟ್ಟಿಗೆ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 6:12 IST
Last Updated 27 ಏಪ್ರಿಲ್ 2024, 6:12 IST
ಗೋಣಿಕೊಪ್ಪಲು ಮಹಿಳಾ ಸಮಾಜದ ಮತಗಟ್ಟೆಯಲ್ಲಿ ವೀಲ್‌ಚೇರ್‌ನಲ್ಲಿ ಬಂದು ಮತಚಲಾಯಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಅವರೊಂದಿಗೆ ಕುಟುಂಬದ ಸದಸ್ಯರಾದ ಚಂದನ್ ಕಾಮತ್, ಸಂಗೀತ ಕಾಮತ್, ಸಂಧ್ಯಾ ಕಾಮತ್ ಪಾಲ್ಗೊಂಡಿದ್ದರು
ಗೋಣಿಕೊಪ್ಪಲು ಮಹಿಳಾ ಸಮಾಜದ ಮತಗಟ್ಟೆಯಲ್ಲಿ ವೀಲ್‌ಚೇರ್‌ನಲ್ಲಿ ಬಂದು ಮತಚಲಾಯಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಅವರೊಂದಿಗೆ ಕುಟುಂಬದ ಸದಸ್ಯರಾದ ಚಂದನ್ ಕಾಮತ್, ಸಂಗೀತ ಕಾಮತ್, ಸಂಧ್ಯಾ ಕಾಮತ್ ಪಾಲ್ಗೊಂಡಿದ್ದರು   

ಗೋಣಿಕೊಪ್ಪಲು: ಗ್ರಾಮಕ್ಕೆ ಮೂಲ ಸೌಕರ್ಯ ನೀಡಿಲ್ಲ ಎಂಬ ಕಾರಣದಿಂದ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದ ಅಂಬಟ್ಟಿ ಗ್ರಾಮಸ್ಥರು ಶಾಸಕ ಎ.ಎಸ್.ಪೊನ್ನಣ್ಣ ಅವರು ನೀಡಿದ ಭರವಸೆ ಮೇರೆಗೆ ಬಹಿಷ್ಕಾರ ಹಿಂದಕ್ಕೆ ಪಡೆದು ಶುಕ್ರವಾರ ಮತದಾನ ಮಾಡಿದರು.

ಚುನಾವಣೆ ಮುಗಿದ ಬಳಿಕ ಗ್ರಾಮಕ್ಕೆ ಕುಡಿಯುವ ನೀರು, ರಸ್ತೆ, ಬೀದಿ ದೀಪ ಒದಗಿಸಿಕೊಡಲಾಗುವುದು ಎಂದು ಶಾಸಕ ಪೊನ್ನಣ್ಣ ಮತದಾರರ ಮನ ಒಲಿಸಿದರು. ಇದಕ್ಕೆ ಸ್ಪಂದಿಸಿದ ಗ್ರಾಮಸ್ಥರು ಮತದಾನ ಮಾಡಿದರು.

ತಿತಿಮತಿಯಲ್ಲಿ ಸಾಲು ಗಟ್ಟಿ ನಿಂತಿದ್ದ ಮತದಾರರು: ತಿತಿಮತಿ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಬಲ ಪಾರ್ಶ್ವ ಮತ ಗಟ್ಟೆ ಸಂಖ್ಯೆ 207ರಲ್ಲಿ 1600 ಮತದಾರರಿದ್ದು ಸಂಜೆ ವರೆಗೂ ಮತದಾರರು ಸಾಲು ಗಟ್ಟಿ ನಿಲ್ಲುವಂತಾಯಿತು. ಇಲ್ಲಿನ ಸಂಜೆ 6 ಗಂಟೆ ಗೆ ಮತದಾನ ಮುಗಿದಾಗಲೂ ನೂರಾರು ಜನರು ಸಾಲಿನಲ್ಲಿ ನಿಂತಿದ್ದರು. ಬಳಿಕ ಮತಗಟ್ಟೆಯ ಅಧ್ಯಕ್ಷಾಧಿಕಾರಿ ಚೀಟಿ ನೀಡಿ ಮತದಾನಕ್ಕೆ ಅವಕಾಶ ನೀಡಿದರು. ಇದೇ ಶಾಲೆಯ ಎಡ ಪಾರ್ಶ್ವ ಮತಗಟ್ಟೆ 206ರಲ್ಲಿ ಕಡಿಮೆ ಮತದಾರರಿದ್ದು ಇಲ್ಲಿ ಮತಗಟ್ಟೆ ಅಧಿಕಾರಿಗಳು ಮತದಾರರೇ ಇಲ್ಲದೆ ಕಾಯುತ್ತಾ ಕುಳಿತಿದ್ದರು.

ADVERTISEMENT

ಉಪನ್ಯಾಸಕ, ಮತದಾರ ಮೋಹನ್ ಎಂಬವರು ಮಾತನಾಡಿ,  ಒಂದೇ ಶಾಲೆಯ ಎಡ ಭಾಗ ಮತ್ತು ಬಲ ಭಾಗದಲ್ಲಿ ಎರಡು ಮತಗಟ್ಟೆಗಳಿದ್ದು ಒಂದರಲ್ಲಿ 1500 ಕ್ಕೂ ಹೆಚ್ಚು ಮತದಾರರಿದ್ದಾರೆ ಮತ್ತೊಂದರಲ್ಲಿ ಕೇವಲ 650 ಮತದಾರರಿದ್ದಾರೆ. ಇದರಿಂದ ಒಂದು ಮತ ಗಟ್ಟೆಯಲ್ಲಿ ಮತದಾರರು ಗಂಟೆ ಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದಿನಿಂದಲೂ ಈ ಮತಗಟ್ಟೆಯಲ್ಲಿ ಇದೇ ರೀತಿಯ ಪರಿಸ್ಥಿತಿ ಇದೆ. ಮುಂದೆಯಾದರೂ ಸಂಬಂಧ ಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಹೋಗಲಾಡಿಸಬೇಕು ಎಂದು ಅವರು ಮನವಿ ಮಾಡಿದರು.

ಬುಡಕಟ್ಟು ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರ್ಮಾಡು, ತಿತಿಮತಿ, ನಿಟ್ಟೂರು, ಚೂರಿಕಾಡು, ಕುಟ್ಟ ಮೊದಲಾದ ಭಾಗಗಳಲ್ಲಿ ಗಿರಿಜನ ಮತದಾರರು ಬೆಳಿಗ್ಗೆಯಿಂದಲೇ ಉತ್ಸಾಹದಲ್ಲಿ ಬಂದು ಮತದಾನ ಮಾಡಿದರು. ತೋಟದ ಕೆಲಸಕ್ಕೆ ತೆರಳಿದ್ದ ನೂರಾರು ಕಾರ್ಮಿಕರು ಸಂಜೆ 5 ಗಂಟೆ ವೇಳೆಗೆ ಮತಗಟ್ಟೆಗೆ ಬಂದು ಮತಚಲಾಯಿಸಿದರು.

ಗೋಣಿಕೊಪ್ಪಲು ಮಹಿಳಾ ಸಮಾಜದ ಮತಗಟ್ಟೆ 186ರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಅನಾರೋಗ್ಯದ ನಡುವೆಯೂ ವೀಲ್‌ಚೇರ್‌ನಲ್ಲಿ ಮತಗಟ್ಟೆಗೆ ಬಂದು ತಮ್ಮ ಕುಟುಂಬದವರ ಸಹಾಯದೊಂದಿಗೆ ಮತಚಲಾಯಿಸಿದರು.

ಗೋಣಿಕೊಪ್ಪಲು ಬಳಿಯ ತಿತಿಮತಿ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಸಾಲು ಗಟ್ಟಿ ನಿಂತಿದ್ದ ಮತದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.