ವಿರಾಜಪೇಟೆ: ಮಾನವ ತಾನು ಸಂಪಾದನೆ ಮಾಡಿರುವುದರಲ್ಲಿ ಒಂದು ಭಾಗವನ್ನು ಸಮಾಜಕ್ಕೆ ನೀಡಿದಲ್ಲಿ ತೃಪ್ತಿಯ ಜೀವನ ನಡೆಸಬಹುದು ಎಂದು ವಿರಾಜಪೇಟೆ ರೋಟರಿ ಕ್ಲಬ್‌ನ ಅಧ್ಯಕ್ಷ ಪ್ರಣವ್ ಎಂ. ಚಿತ್ರಬಾನು ಅವರು ಅಭಿಪ್ರಾಯಪಟ್ಟರು.
ಸಮೀಪದ ಬಿ. ಶೆಟ್ಟಿಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನಡೆದ ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ಎನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮಾನವನು ಎಲ್ಲವನ್ನು ಸಮಾಜದಿಂದ ಸಂಪಾದಿಸುತ್ತಾನೆ. ತಾನು ಸಂಪಾದಿಸಿದ ಸಂಪತ್ತಿನ ಅಲ್ಪ ಭಾಗವನ್ನು ಇತರರಿಗೆ ದಾನ ನೀಡಿದರೆ ಅಥವಾ ಸಮಾಜ ಸೇವೆಗೆ ಬಳಸಿದರೆ ದಾನ ನೀಡಿದವನಿಗೆ ಸಂತೋಷ ಹಾಗೂ ತೃಪ್ತಿಯನ್ನು ತಂದು ಕೊಡುತ್ತದೆ’ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಸುಜಾತಾ ಮಾತನಾಡಿ. ‘ಎನ್.ಎಸ್.ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ. ನಾವು ಕೇವಲ ನಾಯಕರಾದರೆ ಸಾಲದು, ನಾಯಕರಲಿ ಉತ್ತಮ ನಾಯಕರಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ವ್ಯಕ್ತಿತ್ವ ವಿಕಸನಗೊಳಿಸುತ್ತ ಜೀವನ ಮೌಲ್ಯವನ್ನು ರೂಪಿಸಿಕೊಂಡು ಗುರುಹಿರಿಯರಿಗೆ ತಂದೆ ತಾಯಿಯರಿಗೆ ಹಾಗೂ ಸಮಾಜಕ್ಕೆ ಸಹಕಾರಿಯಾಗಿ ಗೌರವಯುತವಾಗಿ ಬಾಳಬೇಕು’ ಎಂದರು.
ಶಾಲೆಯ ಅಭಿವೃದ್ಧಿ ಸಮಿತಿ ಸದಸ್ಯ ತೀತಿಮಾಡ ಲಾಲ ಭೀಮಯ್ಯ ಮಾತನಾಡಿ, ‘ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಸೇವಾ ಮನೋಭಾವನೆ ಕೇವಲ ಶಿಬಿರ ಮುಗಿಯುವವರೆಗೆ ಮಾತ್ರವಲ್ಲದೆ, ಜೀವನದುದ್ದಕ್ಕೂ ಸೇವಾ ಮನೋಭಾವನೆಯನ್ನು ಇಟ್ಟುಕೊಂಡಲ್ಲಿ ಬದುಕು ಬದಲಾಗಲಿದೆ. ಶಿಬಿರದಲ್ಲಿ ಕಲಿತ ಉತ್ತಮ ವಿಚಾರಗಳನ್ನು ಜೀವನದ ವಿವಿಧ ಘಟ್ಟಗಳಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಿ ಬಾಳಬೇಕು’ ಎಂದು ಕಿವಿಮಾತು ಹೇಳಿದರು.
ಮದ್ರೀರ ಗಿರೀಶ್ ಗಣಪತಿ ಮಾತನಾಡಿ, ‘ಶಿಬಿರಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ಶಿಬಿರದಿಂದ ವಿದ್ಯಾರ್ಥಿಗಳು ಹಲವು ರೀತಿಯ ಉತ್ತಮ ವಿಚಾರ ಕಲಿಯಲು ಸಾಧ್ಯ’ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾವೇರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಮಂಡೇಪಂಡ ಎಸ್. ಮುತ್ತಣ್ಣ ಮಾತನಾಡಿ, ‘ಜೀವನದಲ್ಲಿ ಶಿಸ್ತು ಮುಖ್ಯ. ಆರಂಭಿಕ ಹಂತದಿಂದಲೇ ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಂಡು ಉತ್ತಮವಾದ ಗುರಿಯನಿಟ್ಟುಕೊಂಡು ಸಾಗಿದರೆ ಯಶಸ್ಸು ಖಚಿತ’ ಎಂದರು.
ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ವೀಣಾ, ಎನ್.ಎಸ್.ಎಸ್ ಅಧಿಕಾರಿ ಸುನಿಲ್ ಕುಮಾರ್ ಉಪಸ್ಥಿತರಿದ್ದರು. ಸಹ ಶಿಬಿರಾಧಿಕಾರಿ ಅನುಪಮಾ, ಶಾಲೆಯ ಸಹ ಶಿಕ್ಷಕಿ ಸುಜೋತಿ ಸುರೇಶ್, ಸೋನಿ ರಜನೀಶ್, ಎಸ್.ಡಿ.ಎಂ.ಸಿ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.