ADVERTISEMENT

ಕುಶಾಲನಗರ: ಕೊರೊನಾ ಆತಂಕದ ನಡುವೆ ನೀರಿಗೆ ಪರದಾಟ

ಶಿರಂಗಾಲ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ತೊಂದರೆ

ರಘು ಹೆಬ್ಬಾಲೆ
Published 9 ಏಪ್ರಿಲ್ 2020, 19:30 IST
Last Updated 9 ಏಪ್ರಿಲ್ 2020, 19:30 IST
ಬಾಗಿಲು ಮುಚ್ಚಿರುವ ಶಿರಂಗಾಲ ಶುದ್ಧ ನೀರಿನ ಘಟಕ
ಬಾಗಿಲು ಮುಚ್ಚಿರುವ ಶಿರಂಗಾಲ ಶುದ್ಧ ನೀರಿನ ಘಟಕ   

ಕುಶಾಲನಗರ: ಉತ್ತರ ಕೊಡಗಿನ ಗಡಿ ಗ್ರಾಮವಾದ ಶಿರಂಗಾಲದಲ್ಲಿ ಕೊರೊನಾ ಭೀತಿಯ ನಡುವೆ ಜನರು ಕುಡಿಯುವ ನೀರಿಗೂ ಪರದಾಡಬೇಕಾದ ಪರಿಸ್ಥಿತಿಯಿದೆ.

ಕೊರೊನಾ ವೈರಸ್ ಹರಡದಂತೆ ಲಾಕ್‌ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಶಿರಂಗಾಲ ಗ್ರಾಮದಲ್ಲಿರುವ ಅಂತರ ಜಿಲ್ಲಾ ಗಡಿಯಾದ ಅರಣ್ಯ ತಪಾಸಣಾ ಗೇಟ್ ಬಂದ್‌ ಮಾಡಲಾಗಿದ್ದು, ಯಾವುದೇ ವಾಹನ ಹಾಗೂ ಜನರು ಸಂಚರಿಸದಂತೆ ನಿರ್ಬಂಧ ಹೇರಲಾಗಿದೆ. ಬಿಗಿ ಪೋಲಿಸ್ ಭದ್ರತೆ ಕಲ್ಪಿಸಲಾಗಿದೆ.

ಗ್ರಾಮದ ಪಂಚಾಯಿತಿ ಬಳಿ ಶುದ್ಧ ನೀರಿನ‌ ಘಟಕ ಸ್ಥಾಪಿಸಲಾಗಿದ್ದು, ವಿದ್ಯುತ್ ವೋಲ್ಟೇಜ್ ಕೊರತೆಯಿಂದ ಅನೇಕ ದಿನಗಳಿಂದ ಸ್ಥಗಿತಗೊಂಡಿದೆ. ಇದರಿಂದ ಜನರು ಇಂದಿಗೂ ಕುಡಿಯುವ ನೀರು ಸೇರಿದಂತೆ ದಿನಸಿ ವಸ್ತುಗಳಿಗಾಗಿ ಪರದಾಡುತ್ತಿದ್ದಾರೆ.

ADVERTISEMENT

ಬಯಲುಸೀಮೆ ಪ್ರದೇಶವಾದ ಶಿರಂಗಾಲ ಗ್ರಾಮದಲ್ಲಿ 3,659 ಜನಸಂಖ್ಯೆ ಇದೆ. ಈ ಗ್ರಾಮದಲ್ಲಿ 1,040 ಕುಟುಂಬಗಳಿದ್ದು, ಶಿರಂಗಾಲ ಸೇರಿದಂತೆ ಮೂಡಲಕೊಪ್ಪಲು, ಮಣಜೂರು, ನಲ್ಲೂರು, ಸಾಲುಗೋಪ್ಪಲು ಸುತ್ತಲಿನ 10 ಗ್ರಾಮಗಳ ಜನರು ಕುಡಿಯಲು ಶುದ್ಧ ನೀರಿನ‌ ಘಟಕವನ್ನು ಅವಲಂಬಿಸಿದ್ದಾರೆ.

‘ಸಂಕಷ್ಟದ ಸಮಯದಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದ್ದರೂ ಕೂಡ ಗ್ರಾಮ ಪಂಚಾಯಿತಿ ಆಡಳಿತ ನಿರ್ಲಕ್ಷ್ಯ ವಹಿಸಿದೆ’ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್ ದೂರಿದ್ದಾರೆ.

‘ನಮಗೆ ಈಗ ಕೊರೊನಾ ವೈರಸ್‌ಗಿಂತ ನೀರಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಶುದ್ಧ ಕುಡಿಯುವ ನೀರಿಗಾಗಿ ಕರ್ಫ್ಯೂ ನಡುವೆಯೇ ಕೂಡಿಗೆ, ಕೂಡುಮಂಗಳೂರು ಹಾಗೂ ಕುಶಾಲನಗರಕ್ಕೆ ಹೋಗಿ ನೀರು ತರುವ ಪರಿಸ್ಥಿತಿ ಉಂಟಾಗಿದೆ‘ ಎಂದು ಗ್ರಾಮದ ಜನರು ತಮ್ಮ ಅಳಲು ತೋಡಿಕೊಂಡಿದ್ದಾರೆ.

‘ಬೇಸಿಗೆ ಅವಧಿ ಆರಂಭಗೊಂಡಿದ್ದು, ರೈತರು ತಮ್ಮ ಕೃಷಿ ಚಟುವಟಿಕೆಗೆ ಪಂಪ್‌ಸೆಟ್ ಮೂಲಕ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಗಡಿ ಗ್ರಾಮ ಶಿರಂಗಾಲಕ್ಕೆ ವಿದ್ಯುತ್ ವೋಲ್ಟೇಜ್ ಕೊರತೆ ಉಂಟಾಗುತ್ತಿದೆ. ಶುದ್ಧ ನೀರಿನ ಘಟಕಕ್ಕೆ 230 ವೋಲ್ಟೇಜ್ ಬೇಕಾಗಿದೆ. ಆದ್ದರಿಂದ, ಘಟಕದ ಮೋಟರ್ ಬದಲಿಸಿಕೊಂಡಲ್ಲಿ ವೋಲ್ಟೇಜ್ ಸಮಸ್ಯೆ ಉಂಟಾಗುವುದಿಲ್ಲ’ ಎಂದು ಕುಡಿಯುವ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಎಂಜಿನಿಯರ್ ಬಸವರಾಜ್ ತಿಳಿಸಿದ್ದಾರೆ.

*
ವಿದ್ಯುತ್ ಸಮಸ್ಯೆಯಿಂದ ಶುದ್ಧ ನೀರಿನ ಘಟಕ ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದು, ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಗ್ರಾಮ ಪಂಚಾಯತಿ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
– ಎಚ್.ಡಿ.ಹರೀಶ್, ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.