ಸುಂಟಿಕೊಪ್ಪ: ಸಮೀಪದ ಸೂರ್ಲಬ್ಬಿ ನಾಡಿನ ಹಲವು ಗ್ರಾಮಗಳಲ್ಲಿ ಕಾಡುಪ್ರಾಣಿಗಳ ನಿರಂತರ ಉಪಟಳ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಭಯದ ವಾತಾವರಣದಲ್ಲಿಯೇ ಬದುಕು ಸಾಗಿಸುವಂತಾಗಿದೆ.
5-6 ವರ್ಷಗಳಿಂದ ಆನೆ, ಕಾಡುಕೋಣಗಳು ಈ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಾಫಿ, ಅಡಕೆ, ಭತ್ತ, ಬಾಳೆ ಮತ್ತು ಇನ್ನಿತರ ಬೆಳೆಗಳನ್ನು ನಾಶಪಡಿಸುತ್ತಿವೆ. ಇದರಿಂದ ಅಲ್ಪ ಪ್ರಮಾಣದಲ್ಲಿ ಕೃಷಿ ಮಾಡಿಕೊಂಡು ಜೀವನ ಮಾಡುವ ಇಲ್ಲಿನ ಜನರಿಗೆ ಅತಿವೃಷ್ಟಿ ಹಾಗೂ ಕಾಡು ಪ್ರಾಣಿಗಳ ನಿರಂತರ ಉಪಟಳದಿಂದ ನಷ್ಟವಾಗುತ್ತಿದೆ.
ಕಾಡು ಪ್ರಾಣಿಗಳ ಮೇಲೆ ಅತಿಯಾದ ಕಾಳಜಿ ಇದೆ. ಆದರೆ, ಅದರಿಂದ ಉಂಟಾಗುವ ಹಾನಿಯ ಬಗ್ಗೆ ನಿರ್ಲಕ್ಷ್ಯ ಏಕೆ ಎಂದು ಸ್ಥಳೀಯ ರೈತ ತಿಲಕ್ ಪ್ರಶ್ನಿಸುತ್ತಾರೆ.
‘ಅರಣ್ಯ ಇಲಾಖೆ ನೀಡುವ ಪರಿಹಾರ ಧನದಲ್ಲಿ ಬದುಕು ನಡೆಸಲು ಸಾಧ್ಯವಾಗುವುದಿಲ್ಲ’ ಎಂದು ಮುಟ್ಲು ಗ್ರಾಮದ ನಿವಾಸಿ ಉ.ಕಾ.ತಿಲಕ ಹೇಳಿದರು.
ಜತೆಗೆ ಈ ಭಾಗದಲ್ಲಿ ಜಂಟಿ ಖಾತೆಯಲ್ಲೆ ಹಲವು ತೋಟಗಳಿವೆ. ಇನ್ನೂ ಸಹ ಪಟ್ಟೆದಾರರ ಹೆಸರಿನಲ್ಲೇ ಇವೆ. ಪರಿಹಾರದ ಹಣವು ನಿಜವಾಗಿ ಸಾಗುವಳಿ ಮಾಡುತ್ತಿರುವವರಿಗೆ ತಲುಪುತ್ತಿಲ್ಲ.
ಕೂಡಲೇ ಅರಣ್ಯ ಇಲಾಖೆ ಮತ್ತು ಸರ್ಕಾರ ಕೃಷಿ ಬೆಳೆ ಮತ್ತು ಕೃಷಿಕರ ಮೇಲೆ ನಿರಂತರವಾಗಿ ವನ್ಯಪ್ರಾಣಿಗಳ ದಾಳಿಯನ್ನು ತಡೆಯುವುದರ ಜತೆಗೆ ಜನರ ರಕ್ಷಣೆಗೆ ನೆರವಾಗಬೇಕು ಎಂಬುದು ಸೂರ್ಲಬ್ಬಿ ವ್ಯಾಪ್ತಿಯ ಕೃಷಿಕರ ಮನವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.