ADVERTISEMENT

ವಿಧಾನಸಭಾ ಕ್ಷೇತ್ರಕ್ಕೆ 1 ಲಕ್ಷ ಸದಸ್ಯತ್ವ ಮಾಡಿಸಲು ಬಿಜೆಪಿ ಗುರಿ

ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 14:28 IST
Last Updated 14 ಜುಲೈ 2019, 14:28 IST
ಕೋಲಾರ ತಾಲ್ಲೂಕಿನ ವೇಮಗಲ್‌ನಲ್ಲಿ ಭಾನುವಾರ ಆರಂಭವಾದ ಬಿಜೆಪಿಯ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಸಂಸದ ಎಸ್.ಮುನಿಸ್ವಾಮಿ ಚಾಲನೆ ನೀಡಿದರು.
ಕೋಲಾರ ತಾಲ್ಲೂಕಿನ ವೇಮಗಲ್‌ನಲ್ಲಿ ಭಾನುವಾರ ಆರಂಭವಾದ ಬಿಜೆಪಿಯ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಸಂಸದ ಎಸ್.ಮುನಿಸ್ವಾಮಿ ಚಾಲನೆ ನೀಡಿದರು.   

ಕೋಲಾರ: ‘ಪಕ್ಷದಿಂದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷ ಸದಸ್ಯತ್ವ ನೋಂದಣಿ ಗುರಿ ಹೊಂದಿದ್ದು, ಪಕ್ಷಕ್ಕೆ ಬರುವವರನ್ನು ವಿಶಾಲ ಮನಸ್ಸಿನಿಂದ ಸ್ವಾಗತಿಸಿ’ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ತಾಲ್ಲೂಕಿನ ವೇಮಗಲ್‌ನಲ್ಲಿ ಭಾನುವಾರ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ‘ಹಿಂದಿನ ವರ್ಷ 27 ಸಾವಿರ ಸದಸ್ಯತ್ವವಾಗಿತ್ತು. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಜನ 7 ಲಕ್ಷ ಮತ ನೀಡಿ ನನ್ನನ್ನು ಸಂಸದನಾಗಿ ಆಯ್ಕೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯದಕ್ಷತೆ ಕಾರಣಕ್ಕೆ ಇಷ್ಟು ಮತ ಬರಲು ಸಾಧ್ಯವಾಯಿತು’ ಎಂದರು.

‘ಮೋದಿಯವರ ಜನಪರ ಕಾಳಜಿ, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ದೀನ ದಲಿತರ ಪರವಾದ ನೀತಿಯ ಜತೆಗೆ ದೇಶ ರಕ್ಷಣೆ ವಿಷಯದಲ್ಲಿ ದಿಟ್ಟ ಕ್ರಮ ಕೈಗೊಂಡ ಬಗ್ಗೆ ಜನರಿಗೆ ಮೆಚ್ಚುಗೆಯಿದೆ. ಬಿಜೆಪಿಯು ಜಗತ್ತಿನಲ್ಲಿ ಅತಿ ಹೆಚ್ಚು ಸದಸ್ಯತ್ವ ಹೊಂದಿರುವ ರಾಜಕೀಯ ಪಕ್ಷವಾಗಿದೆ. ಈ ಬಾರಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷದ ಶಾಸಕರನ್ನು ಆಯ್ಕೆ ಮಾಡಲು ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಎಪಿಎಂಸಿ ಸೇರಿದಂತೆ ಎಲ್ಲಾ ಸಂಸ್ಥೆಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವಂತೆ ಶ್ರಮ ವಹಿಸಬೇಕು. ಪಕ್ಷದ ಕಾರ್ಯಕರ್ತರೇ ಆಧಾರ ಸ್ತಂಭ. ಕಾರ್ಯಕರ್ತರ ಪರಿಶ್ರಮದಿಂದ ಮಾತ್ರ ಸದಸ್ಯತ್ವದ ಗುರಿ ತಲುಪಲು ಸಾಧ್ಯ’ ಎಂದು ತಿಳಿಸಿದರು.

ಕೆಲಸ ಮಾಡಿಲ್ಲ: ‘ಜಿಲ್ಲೆಯಲ್ಲಿ 28 ವರ್ಷ ಸಂಸದರಾಗಿದ್ದವರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂಬ ಕೂಗು ಇದೆ. ಜನರ ಋಣ ತೀರಿಸಲು ಶಕ್ತಿ ಮೀರಿ ಶ್ರಮಿಸುತ್ತೇನೆ. ಒಳ್ಳೆಯ ಕೆಲಸ ಮಾಡೋಣ. ಐಎಎಸ್‌ ಅಧಿಕಾರಿ ದಿವಂಗತ ಡಿ.ಕೆ.ರವಿ ಅವರನ್ನು ಜನ ಇಂದಿಗೂ ಸ್ಮರಿಸುತ್ತಾರೆ. ಅವರು ಮಾಡಿದ ಒಳ್ಳೆಯ ಕೆಲಸಗಳೇ ಇದಕ್ಕೆ ಕಾರಣ’ ಎಂದು ಅಭಿಪ್ರಾಯಪಟ್ಟರು.

‘ಕೆ.ಸಿ ವ್ಯಾಲಿ ನೀರು ಹರಿಸುವುದನ್ನು ತಾಂತ್ರಿಕ ಕಾರಣಕ್ಕೆ ಎರಡು ದಿನಗಳಿಂದ ಸ್ಥಗಿತಗೊಳಿಸಲಾಗಿದೆ. ಈ ಸಂಬಂಧ ಕೆ.ಸಿ ವ್ಯಾಲಿ ಯೋಜನೆ ಉಸ್ತುವಾರಿ ಎಂಜಿನಿಯರ್ ಅವರನ್ನು ಸಂಪರ್ಕಿಸಿದ್ದೇನೆ. ಸದ್ಯದಲ್ಲೇ ನೀರು ಹರಿಸುವುದಾಗಿ ಅವರು ತಿಳಿಸಿದ್ದಾರೆ. ಕೆ.ಸಿ ವ್ಯಾಲಿ ಯೋಜನೆ ನೀರನ್ನು ಕೃಷಿ ಚಟುವಟಿಕೆಗೆ ಬಳಸಬಾರದು. ಎಲ್ಲಾ ಕೆರೆಗಳು ತುಂಬಿ ಅಂತರ್ಜಲ ವೃದ್ಧಿಯಾದರೆ ಮುಂದೆ ಮಳೆ ಬಂದ ನಂತರ ಕೃಷಿಗೆ ಬಳಸಬಹುದು’ ಎಂದು ಕಿವಿಮಾತು ಹೇಳಿದರು.

ಉಳಿಗಾಲವಿಲ್ಲ: ‘ಮೋದಿಯವರ ಭ್ರಷ್ಟಾಚಾರರಹಿತ ಆಡಳಿತದಿಂದ ಕಾಂಗ್ರೆಸ್‌ನ ಅನೇಕ ಮುಖಂಡರು ಸಂಕಷ್ಟ ಅನುಭವಿಸುತ್ತಿದ್ದಾರೆ. ಜನರ ಹಣ ತಿಂದವರಿಗೆ ಉಳಿಗಾಲವಿಲ್ಲ ಎಂಬ ಆತಂಕ ಅವರನ್ನು ಕಾಡುತ್ತಿದೆ’ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಓಂಶಕ್ತಿ ಚಲಪತಿ ಟೀಕಿಸಿದರು.

‘ಬಿಜೆಪಿ ಕಾರ್ಯಕರ್ತರು ಪ್ರತಿ ಗ್ರಾಮದಲ್ಲೂ ಸದಸ್ಯತ್ವ ನೋಂದಣಿ ಮಾಡಿಸಿ. ಮುಂದಿನ ಚುನಾವಣೆ ವೇಳೆಗೆ ಪ್ರತಿ ಗ್ರಾಮದಲ್ಲೂ ಪಕ್ಷದ ಶಕ್ತಿ ವೃದ್ಧಿಯಾಗಿರಬೇಕು. ಸದಸ್ಯತ್ವ ಅಭಿಯಾನದಲ್ಲಿ ಮುಖಂಡರ ಜತೆಗೆ ಪ್ರತಿ ಕಾರ್ಯಕರ್ತರಿಗೂ ಜವಾಬ್ದಾರಿಯಿದೆ. ನಾವೆಲ್ಲಾ ಒಟ್ಟಾಗಿ ಪಕ್ಷ ಸಂಘಟನೆ ಮಾಡೋಣ’ ಎಂದು ಸಲಹೆ ನೀಡಿದರು.

ಸದಸ್ಯತ್ವ ನೋಂದಣಿ ತಾಲ್ಲೂಕು ಘಟಕದ ಸಂಚಾಲಕ ಚಲಪತಿ, ಪಕ್ಷದ ಮುಖಂಡರಾದ ಸಿ.ಡಿ.ರಾಮಚಂದ್ರೇಗೌಡ, ಬೈಚಪ್ಪ, ಬಸವೇಗೌಡ, ವಿಜಯ್‌ಕುಮಾರ್, ಎಸ್.ಎನ್.ಶ್ರೀರಾಮ್, ಮುರುಗೇಶ್, ಮಂಜುನಾಥ್, ಮಮತಾ, ವೆಂಕಟಸ್ವಾಮಿ, ದೇವರಾಜ್,ಕಿಶೋರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.