ADVERTISEMENT

₹ 5 ಕೋಟಿ ಸಾಲ ವಿತರಣೆ ಗುರಿ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 11:59 IST
Last Updated 6 ಡಿಸೆಂಬರ್ 2019, 11:59 IST
ಕೋಲಾರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಾಲದ ಚೆಕ್‌ ವಿತರಿಸಿದರು.
ಕೋಲಾರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಾಲದ ಚೆಕ್‌ ವಿತರಿಸಿದರು.   

ಕೋಲಾರ: ‘ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ತ್ರೀಶಕ್ತಿ ಸಂಘಗಳ 1 ಲಕ್ಷ ಸದಸ್ಯರಿಗೆ ₹ 5 ಕೋಟಿ ಸಾಲ ವಿತರಿಸುವ ಗುರಿಯಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.

ಡಿಸಿಸಿ ಬ್ಯಾಂಕ್‌ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಾಲ ವಿತರಿಸಿ ಮಾತನಾಡಿ, ‘ಬ್ಯಾಂಕ್‌ನ ಜನಪರ ಯೋಜನೆಗಳನ್ನು ವಿರೋಧಿಗಳು ಸಹಿಸುತ್ತಿಲ್ಲ. ಸಾಲ ಪಡೆದ ಮಹಿಳೆಯರು ಬ್ಯಾಂಕ್‌ನ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು’ ಎಂದು ಹೇಳಿದರು.

‘ಸೊಸೈಟಿಗಳ ಮೂಲಕ ಮಹಿಳೆಯರಿಗೆ ಶೂನ್ಯ ಬಡ್ಡಿ ಸಾಲದಲ್ಲಿ ಗೃಹೋಪಕರಣ ನೀಡಲಾಗುತ್ತಿದೆ. ಇದನ್ನು ವಾಣಿಜ್ಯ ಮಳಿಗೆಯವರು ಸಹಿಸುತ್ತಿಲ್ಲ. ಮಹಿಳೆಯರು ಅಂಗಡಿಯಲ್ಲಿ ಗೃಹೋಪಕರಣ ಖರೀದಿಗೆ ಹೆಚ್ಚು ಹಣ ಪಾವತಿಸಬೇಕು. ಆದ ಕಾರಣ ಖಾಸಗಿ ಮಳಿಗೆಗಳ ಬದಲು ಬ್ಯಾಂಕ್‌ನ ಮೂಲಕ ಗೃಹೋಪಕರಣ ಖರೀದಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಖಾಸಗಿ ಲೇವಾದೇವಿದಾರರು ಶೇ 5ಕ್ಕೂ ಹೆಚ್ಚು ದರದಲ್ಲಿ ಬಡ್ಡಿ ಸಾಲ ನೀಡುತ್ತಾರೆ. ಆದರೆ, ಬ್ಯಾಂಕ್‌ನಿಂದ ಪಡೆದ ಶೂನ್ಯ ಬಡ್ಡಿ ಸಾಲವನ್ನು ಕಂತು ಲೆಕ್ಕದಲ್ಲಿ ಮರುಪಾವತಿಸಬಹುದು. ಬಡ್ಡಿ ಮಾಫಿಯಾಕ್ಕೆ ಕಡಿವಾಣ ಹಾಕುವುದು ಬ್ಯಾಂಕ್‌ನ ಧ್ಯೇಯ. ಇದಕ್ಕೆ ಮಹಿಳೆಯರು ಸಹಕಾರ ನೀಡಬೇಕು’ ಎಂದು ಕೋರಿದರು.

ದೇಶಕ್ಕೆ ಮಾದರಿ: ‘ಬ್ಯಾಂಕ್‌ನ ಕಾರ್ಯಕ್ರಮಗಳು ದೇಶಕ್ಕೆ ಮಾದರಿಯಾಗಿವೆ. ಬ್ಯಾಂಕ್‌ನ ಯೋಜನೆಗಳನ್ನು ಹೊರ ರಾಜ್ಯದ ಬ್ಯಾಂಕ್‌ಗಳು ಜಾರಿಗೆ ತರಲು ಮುಂದಾಗಿವೆ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಹೇಳಿದರು.

‘ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ರೈತರು ಬ್ಯಾಂಕ್‌ನ ಶಕ್ತಿಯಿದ್ದಂತೆ. ಸಂಘಗಳು ಪ್ರತಿ ವಾರ ಕಡ್ಡಾಯವಾಗಿ ಸಭೆ ನಡೆಸಬೇಕು ಮತ್ತು ಲೆಕ್ಕ ಪರಿಶೋಧನೆ ಮಾಡಿಸಬೇಕು. ಉಳಿತಾಯದ ಹಣವನ್ನು ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕು’ ಎಂದು ಸಲಹೆ ನೀಡಿದರು.

ಬ್ಯಾಂಕ್‌ ಸದೃಢ: ‘ಬ್ಯಾಂಕ್‌ಗೆ 6 ವರ್ಷಗಳ ಹಿಂದೆ ಯಾವುದೇ ಸಾಲ ನೀಡುವ ಶಕ್ತಿ ಇರಲಿಲ್ಲ. ಆದರೆ, ಹೊಸ ಆಡಳಿತ ಮಂಡಳಿಯ ಸತತ ಪ್ರಯತ್ನದಿಂದ ಬ್ಯಾಂಕ್‌ ಆರ್ಥಿಕವಾಗಿ ಸದೃಢವಾಗಿದೆ. ಹೆಚ್ಚಿನ ಸಾಲ ನೀಡುವ ಮೂಲಕ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಬ್ಯಾಂಕ್‌ ಮನೆ ಮಾತಾಗಿದೆ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್ ತಿಳಿಸಿದರು.

54 ಮಹಿಳಾ ಸ್ವಸಹಾಯ ಸಂಘಗಳಿಗೆ ₹ 2.70 ಕೋಟಿ ಸಾಲದ ಚೆಕ್‌ ವಿತರಿಸಲಾಯಿತು. ಜಿಲ್ಲಾ ಸಹಕಾರಿ ಒಕ್ಕೂಟದ ನಿರ್ದೇಶಕ ನಾಗರಾಜ್, ಅಣ್ಣಿಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ನಾಗರಾಜ್‌ಗೌಡ, ನಗರಸಭೆ ಮಾಜಿ ಸದಸ್ಯ ಅಫ್ರೋಜ್‌ ಪಾಷಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.