ADVERTISEMENT

ಮುಳಬಾಗಿಲು | ಪೊಲೀಸ್‌ ವಶದಲ್ಲಿದ್ದ ಆರೋಪಿಗೆ ಸೋಂಕು: ಠಾಣೆ ಸಂಪೂರ್ಣ ಸೀಲ್‌ಡೌನ್‌

ಮುಳಬಾಗಿಲು ಡಿವೈಎಸ್ಪಿ ಕಚೇರಿ– ಠಾಣೆ ಸಂಪೂರ್ಣ ಸೀಲ್‌ಡೌನ್‌

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 16:46 IST
Last Updated 15 ಜೂನ್ 2020, 16:46 IST
ಪೊಲೀಸರ ವಶದಲ್ಲಿದ್ದ ಆರೋಪಿಗೆ ಕೊರೊನಾ ಸೋಂಕು ಇರುವುದು ಖಚಿತವಾದ ಹಿನ್ನೆಲೆಯಲ್ಲಿ ಮುಳಬಾಗಿಲು ನಗರ ಠಾಣೆಯನ್ನು ಸೋಮವಾರ ಸೀಲ್‌ಡೌನ್‌ ಮಾಡಲಾಯಿತು.
ಪೊಲೀಸರ ವಶದಲ್ಲಿದ್ದ ಆರೋಪಿಗೆ ಕೊರೊನಾ ಸೋಂಕು ಇರುವುದು ಖಚಿತವಾದ ಹಿನ್ನೆಲೆಯಲ್ಲಿ ಮುಳಬಾಗಿಲು ನಗರ ಠಾಣೆಯನ್ನು ಸೋಮವಾರ ಸೀಲ್‌ಡೌನ್‌ ಮಾಡಲಾಯಿತು.   

ಕೋಲಾರ: ಪೊಲೀಸರ ವಶದಲ್ಲಿದ್ದ ಆರೋಪಿ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ ಇಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 18ಕ್ಕೇರಿದೆ.

ಸೋಂಕಿತ ಆರೋಪಿಯು ಬೆಂಗಳೂರಿನ ಕೆ.ಆರ್‌.ಪುರ ಬಳಿಯ ರಾಜೀವ್‌ಗಾಂಧಿ ನಗರ ನಿವಾಸಿ. ಈತನ ಪತ್ನಿಯು ಮುಳಬಾಗಿಲಿನ ಹೈದರಿನಗರದ ತವರು ಮನೆಯಲ್ಲಿ ಜೂನ್‌ 7ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಸಂಬಂಧ ಮುಳಬಾಗಿಲು ನಗರ ಠಾಣೆ ಪೊಲೀಸರು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಜೂನ್‌ 8ರಂದು ಬೆಂಗಳೂರಿನಲ್ಲಿ ಬಂಧಿಸಿ ಠಾಣೆಗೆ ಕರೆದುಕೊಂಡು ಬಂದಿದ್ದರು. ಬಳಿಕ ಆರೋಗ್ಯ ಇಲಾಖೆ ಸಿಬ್ಬಂದಿಯು ಆರೋಪಿಯ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಸೋಮವಾರ ರಾತ್ರಿ ಬಂದ ಪ್ರಯೋಗಾಲಯ ವರದಿಯಲ್ಲಿ ಆರೋಪಿಗೆ ಸೋಂಕು ಇರುವುದು ದೃಢಪಟ್ಟಿದೆ.

ADVERTISEMENT

ಆದರೆ, ಪ್ರಯೋಗಾಲಯದ ವರದಿ ಬರುವ ಮುನ್ನವೇ ಮುಳಬಾಗಿಲು ಉಪ ವಿಭಾಗದ ಡಿವೈಎಸ್ಪಿ, ಮುಳಬಾಗಿಲು ಠಾಣೆ ಇನ್‌ಸ್ಪೆಕ್ಟರ್ ಸೇರಿದಂತೆ 22 ಮಂದಿ ಸಿಬ್ಬಂದಿ ಆರೋಪಿಯ ಸಂಪರ್ಕಕ್ಕೆ ಬಂದಿದ್ದಾರೆ. ಇದೀಗ ಇವರೆಲ್ಲರನ್ನೂ ಕ್ವಾರಂಟೈನ್‌ ಮಾಡಲಾಗಿದೆ. ಅಲ್ಲದೇ, ಮುಳಬಾಗಿಲು ಪೊಲೀಸ್‌ ಠಾಣೆ ಹಾಗೂ ಡಿವೈಎಸ್ಪಿ ಕಚೇರಿಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ಮುಂಬೈ ನಂಟು: ಮಹಾರಾಷ್ಟ್ರದಿಂದ ಇತ್ತೀಚೆಗೆ ಜಿಲ್ಲೆಯ ಕೆಜಿಎಫ್‌ಗೆ ಬಂದಿದ್ದ 30 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ. ಕೆಜಿಎಫ್‌ನ ಬೆಮಲ್‌ ಭಾರತ್‌ ನಗರದ ಈ ವ್ಯಕ್ತಿಯು ಮುಂಬೈನಲ್ಲಿ ಉದ್ಯೋಗದಲ್ಲಿದ್ದರು.

ಲಾಕ್‌ಡೌನ್‌ ಸಡಿಲಿಕೆ ಬಳಿಕ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದ ಇವರನ್ನು ಅಲ್ಲಿಯೇ 7 ದಿನಗಳ ಕಾಲ ಕ್ವಾರಂಟೈನ್‌ ಮಾಡಲಾಗಿತ್ತು. ಕ್ವಾರಂಟೈನ್‌ ಅವಧಿ ಪೂರ್ಣಗೊಂಡ ಬಳಿಕ ಕೆಜಿಎಫ್‌ನ ಮನೆಗೆ ಬಂದಿದ್ದ ಇವರನ್ನು ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿತ್ತು. ಇದೀಗ ಇವರಿಗೆ ಸೋಂಕು ಇರುವುದು ಪ್ರಯೋಗಾಲಯದ ವರದಿಯಲ್ಲಿ ಗೊತ್ತಾಗಿದೆ.

ಅತ್ತೆ ಮನೆಗೆ ಸೋಂಕಿತ: ಜಿಲ್ಲಾ ಕೇಂದ್ರದಲ್ಲಿನ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ವಸತಿ ಸಮುಚ್ಚಯದಲ್ಲಿ ಭಾನುವಾರ ಪತ್ತೆಯಾಗಿದ್ದ ಕೊರೊನಾ ಸೋಂಕಿತ ವ್ಯಕ್ತಿಯು ಬಂಗಾರಪೇಟೆ ತಾಲ್ಲೂಕಿನ ಕುಪ್ಪನಹಳ್ಳಿ ಗ್ರಾಮದ ಸಂಬಂಧಿಕರ ಮನೆಗೆ ತೆರಳಿ ಹಲವು ಸಂಪರ್ಕಕ್ಕೆ ಬಂದಿರುವುದು ಪರಿಶೀಲನೆಯಿಂದ ಗೊತ್ತಾಗಿದೆ.

ಕಾರು ಚಾಲಕರಾದ ಈ ಸೋಂಕಿತ ವ್ಯಕ್ತಿಗೆ ಜೂನ್‌ 8ರಂದು ಜ್ವರ ಬಂದಿತ್ತು. ಹೀಗಾಗಿ ಇಟಿಸಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ವೈದ್ಯರ ಸಲಹೆಯಂತೆ ಜೂನ್‌ 12ರಂದು ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ಹೋಗಿ ಕಫಾ ಮತ್ತು ರಕ್ತ ಮಾದರಿ ಕೊಟ್ಟಿದ್ದರು. ಬಳಿಕ ಭಾನುವಾರ ಇವರಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿತ್ತು.

ಪ್ರಯೋಗಾಲಯದ ವರದಿ ಬರುವ ವೇಳೆಗಾಗಲೇ ಇವರು ಕುಪ್ಪನಹಳ್ಳಿಯಲ್ಲಿನ ಅತ್ತೆಯ ಮನೆಗೆ ಹೋಗಿದ್ದರು. ಇವರ ಸಂಪರ್ಕಕ್ಕೆ ಬಂದಿರುವ ಪತ್ನಿ, ಮಾವ, ಅತ್ತೆ ಹಾಗೂ ಭಾವನನ್ನು ಇದೀಗ ಕ್ವಾರಂಟೈನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.