ADVERTISEMENT

ಕೆಜಿಎಫ್‌ ಎಸ್ಪಿ ಮೇಲೆ ಹಲ್ಲೆ ವದಂತಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 3:53 IST
Last Updated 28 ಸೆಪ್ಟೆಂಬರ್ 2021, 3:53 IST
ಇಲಕ್ಕಿಯಾ ಕರುಣಾಗರನ್‌
ಇಲಕ್ಕಿಯಾ ಕರುಣಾಗರನ್‌   

ಕೋಲಾರ: ಜಿಲ್ಲೆಯ ಕೆಜಿಎಫ್‌ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್‌ ಅವರ ಮೇಲೆ ದುಷ್ಕರ್ಮಿಗಳು ಭಾನುವಾರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ವದಂತಿ ಹಬ್ಬಿದ್ದು, ಈ ಸಂಗತಿ ನಿರಾಕರಿಸುವ ಇಲಕ್ಕಿಯಾ ಅವರು ತಮ್ಮ ಬೆಂಗಾವಲು ಸಿಬ್ಬಂದಿ ಮೇಲೆ ಹಲ್ಲೆ ನಡೆದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಇಲಕ್ಕಿಯಾ ಅವರು ಭಾನುವಾರ ರಾತ್ರಿ ಕೆಜಿಎಫ್‌ನ ಅಜ್ಜಪಲ್ಲಿ ರಸ್ತೆಯಲ್ಲಿ ವಾಯುವಿಹಾರಕ್ಕೆ ಹೋಗಿದ್ದಾಗ 5 ಮಂದಿ ದುಷ್ಕರ್ಮಿಗಳು ಬೈಕ್‌ಗಳಲ್ಲಿ ಹಿಂಬಾಲಿಸಿ ಬಂದು ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ್ದಾರೆ ಎಂದು ಸೋಮವಾರ ಸಂಜೆ ವದಂತಿ ಹಬ್ಬಿತ್ತು.

ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಇಲಕ್ಕಿಯಾ, ‘ನನ್ನ ಬೆಂಗಾವಲು ಸಿಬ್ಬಂದಿ ಮುನಿರತ್ನ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಚಿನ್ನಾಭರಣ ದೋಚಲು ಯತ್ನಿಸಿದ್ದಾರೆ. ಘಟನೆ ನಡೆದಿರುವ ಅಜ್ಜಪಲ್ಲಿ ರಸ್ತೆಯಲ್ಲಿ ನಾನು ಪ್ರತಿನಿತ್ಯ ಸಂಜೆ ವಾಯುವಿಹಾರಕ್ಕೆ ಹೋಗುತ್ತಿದ್ದೆ. ಹೀಗಾಗಿ ನನ್ನ ಮೇಲೆಯೇ ಹಲ್ಲೆ ನಡೆದಿದೆ ಎಂಬ ವದಂತಿ ಹಬ್ಬಿದೆ’ ಎಂದು ತಿಳಿಸಿದರು.

ADVERTISEMENT

‘ಮುನಿರತ್ನ ಅವರು ಬಂಗಾರಪೇಟೆಯಿಂದ ಬೈಕ್‌ನಲ್ಲಿ ಕೆಜಿಎಫ್‌ಗೆ ಬರುತ್ತಿದ್ದಾಗ ಹಲ್ಲೆ ನಡೆದಿದೆ. ಮುನಿರತ್ನ ಅವರು ನೀಡಿದ ದುಷ್ಕರ್ಮಿಗಳ ಬೈಕ್‌ಗಳ ನೋಂದಣಿ ಸಂಖ್ಯೆಯ ಮಾಹಿತಿ ಆಧರಿಸಿ 5 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.