ADVERTISEMENT

ಮತಪತ್ರ ಬಳಕೆ | ಆರ್ಥಿಕ ಹೊರೆಯಾಗದು: ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 23:00 IST
Last Updated 6 ಸೆಪ್ಟೆಂಬರ್ 2025, 23:00 IST
ಜಿ.ಎಸ್‌.ಸಂಗ್ರೇಶಿ
ಜಿ.ಎಸ್‌.ಸಂಗ್ರೇಶಿ   

ಕೆಜಿಎಫ್‌: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್‌ ಮತಯಂತ್ರದ (ಎವಿಎಂ) ಬದಲು ಮತಪತ್ರ (ಬ್ಯಾಲೆಟ್‌ ಪೇಪರ್‌) ಬಳಸಿದರೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ. ವಿದ್ಯುನ್ಮಾನ ಮತಯಂತ್ರಕ್ಕೆ ತಗುಲುವ ವೆಚ್ಚವೇ ತಗಲುತ್ತದೆ ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ತಿಳಿಸಿದರು. 

ಚಾಂಪಿಯನ್‌ ರೀಫ್ಸ್‌ನಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಸುವಂತೆ ಸರ್ಕಾರ ಸೂಚನೆ ನೀಡಿದರೆ ಅದನ್ನು ಪಾಲಿಸಲಾಗುವುದು. ಯಾವ ರೀತಿ ಚುನಾವಣೆ ನಡೆಸಬೇಕು ಎಂಬುದನ್ನು ಸರ್ಕಾರ ನಿರ್ಧಾರ ಮಾಡುತ್ತದೆ ಎಂದರು.

ಚುನಾವಣೆ ನಡೆಸುವಾಗ ವೆಚ್ಚ ಮತ್ತು ಸಮಯವನ್ನು ಪರಿಗಣಿಸಬಾರದು. ನ್ಯಾಯಸಮ್ಮತ ಚುನಾವಣೆ ನಡೆಸುವುದಷ್ಟೇ ಮುಖ್ಯ ಎಂದು ಸಂಗ್ರೇಶಿ ಅಭಿಪ್ರಾಯಪಟ್ಟರು.

ADVERTISEMENT

ಜನವರಿ ಇಲ್ಲವೇ ಫೆಬ್ರುವರಿಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ

ಮೀಸಲಾತಿ ಗೊಂದಲದಿಂದಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಲಾಗಿದೆ. ಬರುವ ಜನವರಿ ಅಥವಾ ಫೆಬ್ರುವರಿಯಲ್ಲಿ ಚುನಾವಣೆ ನಡೆಯಬಹುದು ಎಂದು  ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ತಿಳಿಸಿದ್ದಾರೆ.

ಕ್ಷೇತ್ರ ಮರು ವಿಂಗಡಣೆ ಅರ್ಜಿ ವಿಚಾರಣೆ ಸುಪ್ರಿಂ ಕೋರ್ಟ್‌ನಲ್ಲಿ ಬಾಕಿ ಇದೆ. ಸರ್ಕಾರ ನವೆಂಬರ್‌1ಕ್ಕೆ ಕ್ಷೇತ್ರ ವಿಂಗಡಣೆ ವರದಿ ಸಲ್ಲಿಸಬೇಕು. ನ.30ರ ಒಳಗೆ ಚುನಾವಣಾ ಆಯೋಗಕ್ಕೆ ಮೀಸಲಾತಿ ಪಟ್ಟಿ ಕೊಡಬೇಕು. ಸರ್ಕಾರ ಮೀಸಲಾತಿ ಪಟ್ಟಿ ಕೊಟ್ಟ ನಂತರ ಚುನಾವಣೆ ನಡೆಸಲು ಮೂರು ತಿಂಗಳು ಕಾಲಾವಕಾಶ ಬೇಕು. ಇದನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿದ್ದು ಅದು ಸಮ್ಮತಿಸಿದೆ ಎಂದರು. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಾಗಿ ಕ್ಷೇತ್ರ ಮರು ವಿಂಗಡಣೆಗೆ ಸರ್ಕಾರ ಮೂರು ತಿಂಗಳ ಕಾಲಾವಕಾಶ ಕೇಳಿದೆ. ರಾಜ್ಯದ ಸುಮಾರು ಹನ್ನೆರಡು ಜಿಲ್ಲೆಗಳಲ್ಲಿ ಕ್ಷೇತ್ರ ವಿಂಗಡಣೆ ಪ್ರಯೋಗ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಪುರಸಭೆ ನಗರಸಭೆಗಳಿಗೆ ಹೊಸ ಸ್ಥಳ ಕ್ಷೇತ್ರ ಸೇರ್ಪಡೆಯಾಗಲಿವೆ. ಹೊಸ ತಾಲ್ಲೂಕು ರಚನೆಯಾದ ಮೇಲೆ ಹಿಂದಿನ ರೀತಿ ಚುನಾವಣೆ ನಡೆಸಲು ಸಾಧ್ಯವಿಲ್ಲ. 2023ರಲ್ಲಿ ಕ್ಷೇತ್ರ ವಿಂಗಡಣೆ ಆಗಿದೆ. ಹೊಸ ಮೀಸಲಾತಿ ಪ್ರಕಾರ ಪಟ್ಟಿ ಕೊಡಬೇಕಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.