ADVERTISEMENT

ಅವ್ಯವಸ್ಥೆ ಆಗರ BCM ಹಾಸ್ಟೆಲ್‌: ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆ

ಪ್ರಜಾವಾಣಿ ವಿಶೇಷ
Published 6 ಅಕ್ಟೋಬರ್ 2025, 2:40 IST
Last Updated 6 ಅಕ್ಟೋಬರ್ 2025, 2:40 IST
ಕೆಜಿಎಫ್ ಕೋರಮಂಡಲನಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿ ನಿಲಯ
ಕೆಜಿಎಫ್ ಕೋರಮಂಡಲನಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿ ನಿಲಯ   

ಕೆಜಿಎಫ್‌: ನಗರದ ಕೋರಮಂಡಲ್‌ನಲ್ಲಿರುವ ಹಿಂದುಳಿದ ವರ್ಗಗಳ ಹಾಸ್ಟೆಲ್‌ ಅವ್ಯವಸ್ಥೆಗಳ ಆಗರವಾಗಿದ್ದು, ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

ನಗರದಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ ಮತ್ತು ಎಸ್‌ಪಿ ಕಚೇರಿ ಬಳಿ ಎರಡು ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಿವೆ. ಅವುಗಳ ಪೈಕಿ ಸರ್ಕಾರಿ ಪಾಲಿಟೆಕ್ನಿಕ್‌ ಬಳಿ ಇರುವ ಹಾಸ್ಟೆಲ್‌ ಈಚೆಗೆ ನಿರ್ಮಾಣವಾಗಿದೆ. ಆದರೆ, ಹೊಸ ಕಟ್ಟಡವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳದ ಕಾರಣ, ಅದರ ಕಷ್ಟವನ್ನು ವಿದ್ಯಾರ್ಥಿಗಳು ಅನುಭವಿಸುವಂತಾಗಿದೆ.

ಹಿಂದುಳಿದ ವರ್ಗಗಳ ಹಾಸ್ಟೆಲ್‌ನಲ್ಲಿ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಕೂಡ ಶೇ 25 ರಷ್ಟು ಮೀಸಲು ಇದೆ. ಒಟ್ಟು 82 ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಬಳ್ಳಾರಿ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದಿಂದ ಬಂದವರಾಗಿದ್ದಾರೆ.

ADVERTISEMENT

ಹಾಸ್ಟೆಲ್‌ನ ಒಂದು ಕೊಠಡಿಯಲ್ಲಿ ಬರೋಬ್ಬರಿ ಹತ್ತು ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಎರಡು ಮಂಚಗಳಿರುವ ಕಬ್ಬಿಣದ ಸ್ಟಾಂಡ್‌ಗಳನ್ನು ಅಳವಡಿಸಲಾಗಿದೆ. ಒಂದು ಕೊಠಡಿಯಲ್ಲಿ ಐದು ಸ್ಟಾಂಡ್‌ಗಳಿದ್ದು, ಹತ್ತು ಮಂದಿ ವಿದ್ಯಾರ್ಥಿಗಳು ವಾಸಿಸುತ್ತಿದ್ದಾರೆ. ಪುಸ್ತಕ ಮತ್ತು ಬಟ್ಟೆ ಇಡಲು ಸೂಕ್ತವಾದ ಸ್ಥಳವಿಲ್ಲ. ಎರಡು ಅಡಿ ಉದ್ದ ಎರಡು ಅಗಲ ಇರುವ ಗೂಡಿನಲ್ಲಿ ಬಟ್ಟೆ ಮತ್ತು ಪುಸ್ತಕಗಳನ್ನು ಇಡಬೇಕಾಗಿದೆ. ಕೊಠಡಿಗಿರುವ ಒಂದು ಕಿಟಕಿಗೆ ಮಂಚ ಕೂಡ ಅಡ್ಡ. ಹಾಗಾಗಿ ವಿದ್ಯುತ್ ಬೆಳಕಿನಲ್ಲೇ ಇರಬೇಕಾಗಿದೆ.

ನೀರಿನ ಟ್ಯಾಂಕ್‌ ಸಹ ಶುದ್ದಗೊಳಿಸಿಲ್ಲ. ಹಾಗಾಗಿ ಬಿಳಿ ಬಣ್ಣದ ನೊರೆ ಬರುತ್ತದೆ. ಶೌಚಾಲಯವನ್ನು ಮೂರು ದಿನಗಳಿಗೊಮ್ಮೆ ಸ್ವಚ್ಛಗೊಳಿಸುತ್ತಾರೆ. ಅದು ಕೂಡ ಸ್ವಚ್ಛವಾಗಿರುವುದಿಲ್ಲ. ಹಾಗಾಗಿ ಅನೇಕರು ಮೂತ್ರ ವಿಸರ್ಜನೆಗೆ ಪಕ್ಕದ ಪೊದೆಗಳಿಗೆ ಹೋಗುತ್ತಾರೆ. ಶೌಚಾಲಯದಲ್ಲಿ ಕೈತೊಳೆಯಲು ಹಾಕಿರುವ ನಲ್ಲಿಗಳು ಕಾರ್ಯನಿರ್ವಹಿಸುತ್ತಿಲ್ಲ. ಊಟ ಕೂಡ ರುಚಿಯಾಗಿರುವುದಿಲ್ಲ. ಮಳೆ ಬಂದರೆ ಹಾಸ್ಟೆಲ್‌ಗೆ ಬರಲು ಸಾಧ್ಯವಿಲ್ಲ. ರಸ್ತೆ ಕೆಸರುಮಯವಾಗಿರುತ್ತದೆ. ಜೊತೆಗೆ ಹಾಸ್ಟೆಲ್‌ ಸುತ್ತ ಹಸುಗಳ ಕಾಟ ಎಂದು ಹಾಸ್ಟೆಲ್‌ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡರು.

ಹಾಸ್ಟೆಲ್‌ ಮೆನು ಪ್ರಕಾರವೇ ಊಟ ನೀಡಲಾಗುತ್ತಿದೆ. ಕಾಂಪೌಂಡ್ ಹಾಗೂ ಡಾಂಬರು ರಸ್ತೆ ಇಲ್ಲದೆ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳಿಗೆ ಇನ್ನೂ ಕೆಲ ಕೊಠಡಿಗಳು ಬೇಕಾಗಿವೆ. ಹೊಸ ಕೊಠಡಿ ನಿರ್ಮಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಹಾಸ್ಟೆಲ್‌ ಸಿಬ್ಬಂದಿ ಹೇಳುತ್ತಾರೆ.

ಹಾಸ್ಟೆಲ್‌ ಸಮಸ್ಯೆಗಳ ಬಗ್ಗೆ ದೂರು ಬಂದಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಅನಿತಾ, ತಾಲ್ಲೂಕು ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ
ಶಿಥಿಲವಾಗಿರುವ ಮೇಲ್ಚಾವಣಿ
ನಲ್ಲಿಗಳೇ ಇಲ್ಲದ ಕೈತೊಳೆಯುವ ಜಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.