ADVERTISEMENT

3,611 ಕಾರ್ಡ್‌ ಎಪಿಎಲ್‌ ಆಗಿ ಪರಿವರ್ತನೆ!

ಜಿಲ್ಲೆಯಲ್ಲಿ ಒಟ್ಟು 21,854 ಶಂಕಿತ ಅನರ್ಹ ಬಿಪಿಎಲ್‌ ಪಡಿತರ ಚೀಟಿ ಪತ್ತೆ

ಕೆ.ಓಂಕಾರ ಮೂರ್ತಿ
Published 7 ಡಿಸೆಂಬರ್ 2025, 5:51 IST
Last Updated 7 ಡಿಸೆಂಬರ್ 2025, 5:51 IST
.
.   

ಕೋಲಾರ: ಜಿಲ್ಲೆಯಲ್ಲಿ 3,611 ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಪಡಿಸುವ ಮೂಲಕ ಆಹಾರ ನಾಗರಿಕ ಸರಬರಾಜು ಇಲಾಖೆಯು ₹1.20 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವವರು, ನಕಲಿ ಕಾರ್ಡ್‌ ಹೊಂದಿರುವ ಹೊರರಾಜ್ಯದವರು, 7.5 ಎಕರೆಗೂ ಅಧಿಕ ಜಮೀನು ಹೊಂದಿರುವವರು ಸೇರಿದಂತೆ ಹಲವರಿಗೆ ಶಾಕ್‌ ನೀಡಿದೆ.

ಕೇಂದ್ರ ಸರ್ಕಾರದ ಮಾನದಂಡಗಳು ಮತ್ತು ರಾಜ್ಯ ಸರ್ಕಾರದ ‘ಕುಟುಂಬ ತಂತ್ರಾಂಶ’ ದತ್ತಾಂಶದ ಮೂಲಕ ಅಕ್ಟೋಬರ್‌ ಅಂತ್ಯದವರೆಗೆ 21,854 ಶಂಕಿತ ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ ಈಗಾಗಲೇ 3,611 ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾಯಿಸಲಾಗಿದ್ದು, ಇನ್ನುಳಿದ 18,243 ಚೀಟಿಗಳ ಪರಿಶೀಲನೆ ನಡೆಯುತ್ತಿದೆ.

₹25 ಲಕ್ಷಕ್ಕಿಂತ ಹೆಚ್ಚಿನ ಜಿಎಸ್‌ಟಿ ವಹಿವಾಟು ಮಾಡಿದ್ದರೆ ಅಂಥವರ ಬಿಪಿಎಲ್‌ ಕಾರ್ಡ್‌ ರದ್ದಾಗುತ್ತದೆ. ಉದ್ಯಮಗಳ ವಹಿವಾಟು ನಡೆಸುವವರಿಗೆ, ಕಳೆದ 12ಕ್ಕೂ ಅಧಿಕ ತಿಂಗಳಿಂದ ಪಡಿತರ ಪಡೆಯದವರಿಗೆ, 6ರಿಂದ 12 ತಿಂಗಳ ನಡುವೆ ಪಡಿತರ ಸ್ವೀಕರಿಸದವರಿಗೆ, 18 ವರ್ಷಗಳ ಒಳಗಿನ ಒಬ್ಬರೇ ಸದಸ್ಯರು ಇದ್ದರೆ, ಎಲ್‌ಎಂವಿ ವಾಹನಗಳ ಮಾಲೀಕತ್ವ ಇರುವವರನ್ನು ಅನರ್ಹರ ಗುಂಪಿಗೆ ಸೇರಿಸಲಾಗಿದೆ. ಕೆಲವರು ಮೃತರ ಹೆಸರಿನಲ್ಲಿ ಕಾರ್ಡ್‌ ಮುಂದುವರಿಸಿ ಪಡಿತರ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.

ADVERTISEMENT

ಅರ್ಹರಲ್ಲದವರೂ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವವರು) ಹಾಗೂ ಅಂತ್ಯೋದಯ ಕಾರ್ಡ್‌ಗಳನ್ನು ಹೊಂದಿದ್ದಾರೆ. ಇದರಿಂದಾಗಿ ಪಡಿತರ ಸೇರಿದಂತೆ ಹಲವಾರು ಸೌಲಭ್ಯಗಳು ಅನರ್ಹರ ಪಾಲಾಗುತ್ತಿದ್ದವು. ಅದನ್ನು ತಪ್ಪಿಸಲು ಸರ್ಕಾರದ ನಿರ್ದೇಶನದ ಮೇರೆಗೆ ಇಲಾಖೆ ಅಧಿಕಾರಿಗಳು ಪರಿಷ್ಕರಣೆ ಕಾರ್ಯಕ್ಕೆ ಮುಂದಾಗಿದ್ದರು.

ಜನರಿಂದ ದೂರು: ಈಚೆಗೆ ಕೆಜಿಎಫ್‌ ಕ್ಷೇತ್ರದಲ್ಲಿ ಶಾಸಕಿ ರೂಪಕಲಾ ಶಶಿಧರ್‌ ನೇತೃತ್ವದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ತಮ್ಮ ಅರಿವಿಗೆ ತಾರದೆ ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ ಆಗಿ ಪರಿವರ್ತಿಸಿದ್ದಾರೆ ಎಂದು ದೂರಿದ್ದರು. ಪುನಃ ಬಿಪಿಎಲ್‌ ಚೀಟಿ ಕೊಡಿಸಿ ಎಂದು ದುಂಬಾಲು ಬಿದ್ದಿದ್ದರು. ಈ ಸಂಬಂಧ ಕ್ರಮವಹಿಸಲು ಅಧಿಕಾರಿಗಳಿಗೆ ಶಾಸಕಿ ಸೂಚಿಸಿದ್ದರು.

‘ಸಂಬಂಧಿಸಿದ ದಾಖಲೆಗಳನ್ನು ನೀಡಿದರೆ ಬಿಪಿಎಲ್‌ನಲ್ಲೇ ಉಳಿಯುತ್ತಾರೆ. ಇದು ಬರೀ ಶಂಕಿತ ಅನರ್ಹ ಬಿಎಪಿಎಲ್ ಚೀಟಿಗಳ ಪಟ್ಟಿ. ವಿವಿಧ ಕಾರಣಗಳಿಂದ 3,611 ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಂಡು ಎಪಿಎಲ್‌ಗೆ ವರ್ಗಾಯಿಸಲಾಗಿದೆ. ಇನ್ನುಳಿದವು ಪರಿಶೀಲನಾ ಹಂತದಲ್ಲಿವೆ’ ಎಂದು ಆಹಾರ ಇಲಾಖೆಯ ಉಪನಿರ್ದೇಶಕಿ ಲತಾ ಪ್ರತಿಕ್ರಿಯಿಸಿದರು.

3.83 ಲಕ್ಷ ಕಾರ್ಡ್‌ಗಳು: ಜಿಲ್ಲೆಯಲ್ಲಿ 29,403 ಅಂತ್ಯೋದಯ ಕಾರ್ಡ್‌ಗಳು, 46,527 ಎಪಿಎಲ್‌ ಕಾರ್ಡ್‌ಗಳು ಹಾಗೂ 3,07,126 ಬಿಪಿಎಲ್‌ ಕಾರ್ಡ್‌ಗಳಿವೆ. ಒಟ್ಟು 3,83,056 ಪಡಿತರ ಚೀಟಿಗಳಿವೆ.

432 ಬಿಪಿಎಲ್‌ ಅರ್ಜಿ ವಿಲೇಗೆ ಬಾಕಿ

ಆನ್‌ಲೈನ್‌ ಮೂಲಕ ಬಿಪಿಎಲ್‌ ಹೊಸ ಪಡಿತರ ಚೀಟಿ ಕೋರಿ 18205 ಅರ್ಜಿಗಳು ಜಿಲ್ಲೆಯಲ್ಲಿ ಸಲ್ಲಿಕೆಯಾಗಿದ್ದವು. ಈ ಪೈಕಿ 14773 ಚೀಟಿಗಳನ್ನು ವಿಲೇ ಮಾಡಲಾಗಿದೆ. ಇನ್ನುಳಿದ 3432 ಅರ್ಜಿಗಳ ಸ್ಥಳ ತನಿಖೆ ನಡೆಯುತ್ತಿವೆ ಎಂದು ಆಹಾರ ಇಲಾಖೆಯ ಉಪನಿರ್ದೇಶಕಿ ಲತಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.