
ಕೋಲಾರ: ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯಿಂದ ಒಕ್ಕಲಿಗ ಸಮುದಾಯಕ್ಕೆ ತೊಂದರೆಯಾದರೆ ಅಥವಾ ಏನಾದರೂ ಹೆಚ್ಚು ಕಮ್ಮಿಯಾಗಿ ಅನ್ಯಾಯವಾದರೆ ನಾವು ಸುಮ್ಮನೇ ಕೂರಲ್ಲ ಎಂದು ಪಟ್ಟನಾಯಕನಹಳ್ಳಿಯ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ, ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕೋಲಾರದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಬುಧವಾರ ನಡೆದ ಬಾಲಕಿಯರ ಹಾಸ್ಟೆಲ್ ಕಟ್ಟಡಕ್ಕೆ ಶಂಕುಸ್ಥಾಪನೆ, ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಬಹಳ ವಿವೇಚನೆ ಹಾಗೂ ಎಚ್ಚರಿಕೆಯಿಂದ ವರದಿ ಕೊಡಬೇಕು. ಸರ್ಕಾರ ಕೂಡ ಎಲ್ಲಾ ರೀತಿಯಲ್ಲಿ ಯೋಚನೆ ಮಾಡಿ ಯಾವುದೇ ಸಮುದಾಯಗಳಿಗೆ ತೊಂದರೆ ಆಗದಂತೆ ಎಲ್ಲಾ ವರ್ಗಗಳಿಗೆ ನ್ಯಾಯ ಒದಗಿಸಬೇಕು. ಧ್ವನಿ ಇಲ್ಲದ ಸಣ್ಣ ಸಮುದಾಯಗಳನ್ನೂ ಗುರುತಿಸಬೇಕು ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದಲ್ಲಿ ಸುಮಾರು ₹ 738 ಕೋಟಿ ಠೇವಣಿ ಇದ್ದು, ಸಮುದಾಯದ ನಾಯಕರಾದ ಎಚ್.ಡಿ.ದೇವೇಗೌಡರ ಹೆಸರಲ್ಲಿ ವೈದ್ಯಕೀಯ ಕಾಲೇಜು ಮತ್ತು ದಿವಂಗತ ಎಸ್.ಎಂ.ಕೃಷ್ಣ ಅವರ ಹೆಸರಲ್ಲಿ ಎಂಜಿನಿಯರಿಂಗ್ ಕಾಲೇಜು ಪ್ರಾರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಈ ಹಿಂದೆಯೂ ಹಲವಾರು ಬಾರಿ ಹೇಳಿದ್ದೇನೆ. ಇನ್ನೂ ಏಕೆ ಸಾಧ್ಯವಾಗುತ್ತಿಲ್ಲವೋ ಗೊತ್ತಾಗುತ್ತಿಲ್ಲ ಎಂದರು.
ಸಂಘದಲ್ಲಿ ಮತ್ತೆ ಕಿತ್ತಾಟ, ಗುಂಪುಗಾರಿಕೆ ನಡೆಯಬಾರದು. ಸರ್ಕಾರವು ಆಡಳಿತಾಧಿಕಾರಿ ನೇಮಿಸುವುದನ್ನು ಸಮುದಾಯವು ಅವಮಾನ ಎಂದು ಭಾವಿಸುತ್ತದೆ. ಹಿಂದೆ ಕಾರ್ಯಕಾರಿ ಸಮಿತಿ ಸಭೆ ನಡೆಯುವಾಗ ಹೊರಗಡೆ ಪೊಲೀಸರನ್ನು ಇಟ್ಟುಕೊಂಡು ನಡೆಸಬೇಕಾದ ಪರಿಸ್ಥಿತಿ ಇತ್ತು. ಅಂಥ ವಾತಾವರಣ ನಿರ್ಮಿಸಬೇಡಿ ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಮಠದ ನಿಶ್ಚಲಾನಂದನಾಥ ಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ, ನಿರ್ದೇಶಕರು, ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.