ADVERTISEMENT

ಕಳೆಗಟ್ಟಿದ ವಿಜಯದಶಮಿ ಆಚರಣೆ

ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ಉಪವಿಭಾಗಾಧಿಕಾರಿ ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 13:35 IST
Last Updated 8 ಅಕ್ಟೋಬರ್ 2019, 13:35 IST
ಕೋಲಾರ ಹೊರವಲಯದ ಕೊಂಡರಾಜನಹಳ್ಳಿಯ ಆಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ಉಪ ವಿಭಾಗಾಧಿಕಾರಿ ವಿಜಯದಶಮಿ ಅಂಗವಾಗಿ ಬನ್ನಿ ಮರಕ್ಕೆ ಮಂಗಳವಾರ ಪೂಜೆ ಸಲ್ಲಿಸಿದರು.
ಕೋಲಾರ ಹೊರವಲಯದ ಕೊಂಡರಾಜನಹಳ್ಳಿಯ ಆಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ಉಪ ವಿಭಾಗಾಧಿಕಾರಿ ವಿಜಯದಶಮಿ ಅಂಗವಾಗಿ ಬನ್ನಿ ಮರಕ್ಕೆ ಮಂಗಳವಾರ ಪೂಜೆ ಸಲ್ಲಿಸಿದರು.   

ಕೋಲಾರ: ದಸರಾ ಅಂಗವಾಗಿ ನಗರದ ಹೊರವಲಯದ ಕೊಂಡರಾಜನಹಳ್ಳಿಯ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಸೋಮಶೇಖರ್ ಅವರು ಬನ್ನಿ ಮರ ಕತ್ತರಿಸುವ ಮೂಲಕ ವಿಜಯದಶಮಿ ಆಚರಣೆ ಸಂಪ್ರದಾಯ ನೆರವೇರಿಸಿದರು.

ಕೊಂಡರಾಜನಹಳ್ಳಿ ಗ್ರಾಮದಲ್ಲಿ ಸಂಜೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನ ವಿಭಾಗಾಧಿಕಾರಿ ಅವರನ್ನು ದೇವಾಲಯ ಸಮಿತಿ ಸದಸ್ಯರು ಮತ್ತು ಗ್ರಾಮದ ಮುಖಂಡರು ಮೈಸೂರು ಪೇಟ ತೊಡಿಸಿ ಪೂರ್ಣಕುಂಭ ಸ್ವಾಗತದೊಂದಿಗೆ ಬನ್ನಿ ಮಂಟಪಕ್ಕೆ ಕರೆದೊಯ್ದರು.

ಬನ್ನಿ ಮರಕ್ಕೆ ಬಾಳೆಗೊನೆ ಕಟ್ಟಿ ಕಡಿಯುವ ಸಂಪ್ರದಾಯ ಗ್ರಾಮದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ತಾಲ್ಲೂಕಿನ ತಹಶೀಲ್ದಾರ್ ಪ್ರತಿ ವರ್ಷ ಈ ಸಂಪ್ರದಾಯ ನೆರವೇರಿಸುತ್ತಾರೆ. ತಹಶೀಲ್ದಾರ್‌ ಹುದ್ದೆ ಖಾಲಿ ಇರುವುದರಿಂದ ಈ ಬಾರಿ ಉಪವಿಭಾಗಾಧಿಕಾರಿ ಧಾರ್ಮಿಕ ಕಾರ್ಯ ನೆರವೇರಿಸಿದರು.

ADVERTISEMENT

ನಂತರ ದೇವಾಲಯದ ಬಳಿ ಶಕ್ತಿ ದೇವತೆಗಳ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಈ ವೇಳೆ ಆಯೋಜಿಸಿದ್ದ ಜಾತ್ರೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದರು. ಬನ್ನಿ ಮರಕ್ಕೆ ಪೂಜೆ ಸಲ್ಲಿಕೆಯಾದ ಬಳಿಕ ಬನ್ನಿ ಎಲೆಗಾಗಿ ಜನ ಮುಗಿಬಿದ್ದರು. ಇಲ್ಲಿ ಪೂಜಿಸಲಾದ ಬನ್ನಿ ಎಲೆ ಮತ್ತು ಬಾಳೆ ಕಾಯಿಯನ್ನು ಮನೆಯಲ್ಲಿಟ್ಟು ಪೂಜೆ ಸಲ್ಲಿಸಿದರೆ ಇಡೀ ವರ್ಷ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಜನರಲ್ಲಿ ಬೇರೂರಿದೆ.

ಕೋಸಂಬರಿ ವಿತರಣೆ: ಪಲ್ಲಕ್ಕಿ ಉತ್ಸವದ ಬಳಿಕ ಭಕ್ತರಿಗೆ ಪಾನಕ ಕೋಸಂಬರಿ ವಿತರಿಸಲಾಯಿತು. ಸೀತಾರಾಮ ಕಲ್ಯಾಣ ಮಂಟಪ ಹಾಗೂ ಆಂಜನೇಯಸ್ವಾಮಿ ದೇವಾಲಯ ಸಮಿತಿ ವತಿಯಿಂದ ಪಲ್ಲಕ್ಕಿಗಳಿಗೆ ನೆನಪಿನ ಕಾಣಿಕೆ ಸಲ್ಲಿಸಲಾಯಿತು.

ನಗರದಿಂದ ವಿವಿಧ ದೇವತೆಗಳ ಪಲ್ಲಕ್ಕಿ ಹೊತ್ತು ತರುವುದು, ಶಕ್ತಿ ದೇವತೆಗಳನ್ನು ಆಂಜನೇಯ ಸ್ವಾಮಿ ದೇವಾಲಯದ ಬಳಿ ತಂದು ಪೂಜೆ ಸಲ್ಲಿಸುವುದು ವಾಡಿಕೆ. ಪೂಜೆ ನಂತರ ಶಕ್ತಿ ದೇವತೆಗಳನ್ನು ಮೂಲ ದೇವಸ್ಥಾನಕ್ಕೆ ಕೊಂಡೊಯ್ಯಲಾಗುತ್ತದೆ.

ಕೊಂಡರಾಜನಹಳ್ಳಿ ದಸರಾ ಎಂದೇ ಪ್ರಖ್ಯಾತಿ ಪಡೆದಿರುವ ಈ ಪೂಜೆಗೆ ಕೋಲಾರ ನಗರ, ಕೊಂಡರಾಜನಹಳ್ಳಿ ಸುತ್ತಮುತ್ತಲಿನ ಅಮ್ಮೇರಹಳ್ಳಿ, ಮಡೇರಹಳ್ಳಿ, ಮಂಗಸಂದ್ರ, ಚೌಡದೇನಹಳ್ಳಿ, ಅರಾಭಿಕೊತ್ತನೂರು, ಚಲುವನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನ ಎತ್ತಿನ ಗಾಡಿ, ಟ್ರ್ಯಾಕ್ಟರ್‌ಗಳಲ್ಲಿ ಆಗಮಿಸಿ ದೇವರ ದರ್ಶನ ಪಡೆದರು. ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಜಿಲ್ಲೆಯಾದ್ಯಂತ ಭಾನುವಾರ ಮತ್ತು ಸೋಮವಾರ ಶ್ರದ್ಧಾ ಭಕ್ತಿಯಿಂದ ಆಯುಧ ಪೂಜೆ ಆಚರಿಸಲಾಯಿತು. ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಜನರು ಕೃಷಿ ಉಪಕರಣಗಳ ಜತೆಗೆ ವಾಹನಗಳನ್ನು ಪೂಜಿಸಿದರು.

ಗ್ರಾಮೀಣ ಭಾಗದಲ್ಲಿ ಮುಂಜಾನೆಯಿಂದಲೇ ಸ್ವಚ್ಛತೆ ಮತ್ತು ಪೂಜೆ ಪ್ರಕ್ರಿಯೆ ಆರಂಭಗೊಂಡಿದ್ದವು. ಮನೆ ಆವರಣವನ್ನು ಸ್ವಚ್ಛಗೊಳಿಸಿದ ಗೃಹಿಣಿಯರು ಸಗಣಿ ಸಾರಿಸಿ, ಬಣ್ಣ ಬಣ್ಣದ ರಂಗೋಲಿ ಬಿಡಿಸಿದ್ದರು. ಮನೆಯಲ್ಲಿ ದೇವರ ಮೂರ್ತಿ ಮತ್ತು ಭಾವಚಿತ್ರಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ನಗರದ ವಾಣಿಜ್ಯ ಮಳಿಗೆಗಳಲ್ಲಿ ಪೂಜೆ ಸಲ್ಲಿಸಲಾಯಿತು. ರೈತರು ಪಂಪ್‌ಸೆಟ್‌, ಟ್ರ್ಯಾಕ್ಟರ್‌ ಹಾಗೂ ಕೃಷಿ ಉಪಕರಣಗಳಿಗೆ ಪೂಜೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.