ADVERTISEMENT

ಕೇಂದ್ರ ಸರ್ಕಾರದ ಆತ್ಮವಂಚನೆಯ ಬಜೆಟ್‌

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ವಕ್ತಾರ .ಮಂಜುನಾಥ್ ಟೀಕೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 15:57 IST
Last Updated 12 ಫೆಬ್ರುವರಿ 2021, 15:57 IST

ಕೋಲಾರ: ‘ಕೇಂದ್ರ ಸರ್ಕಾರ ಆತ್ಮವಂಚನೆಯ ಬಜೆಟ್‌ ಮಂಡಿಸಿದ್ದು, ಆಯವ್ಯಯದಿಂದ ಜನಸಾಮಾನ್ಯರಿಗೆ ಹಾಗೂ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ. ಈ ಜನವಿರೋಧಿ ಬಜೆಟ್‌ ವಿರುದ್ಧ ಪಕ್ಷವು ಹೋರಾಟ ನಡೆಸಲಿದೆ’ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಎಲ್.ಎ.ಮಂಜುನಾಥ್ ಹೇಳಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬಜೆಟ್‌ನಲ್ಲಿ ಕರ್ನಾಟಕಕ್ಕೆ ಕೇವಲ ₹ 14 ಸಾವಿರ ಕೋಟಿ ನೀಡಲಾಗಿದೆ. ಆದರೆ, ತಮಿಳುನಾಡು ಸೇರಿದಂತೆ ವಿಧಾನಸಭಾ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಸಿಂಹಪಾಲು ನೀಡಲಾಗಿದೆ. ಕೇಂದ್ರವು ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿದೆ’ ಎಂದು ಆರೋಪಿಸಿದರು.

‘ದೇಶದಲ್ಲಿ ಕಳೆದ 6 ದಶಕಗಳಿಂದ ಆಡಳಿತ ನಡೆಸಿದ್ದ ಕಾಂಗ್ರೆಸ್ ₹ 52 ಲಕ್ಷ ಕೋಟಿ ಮಾತ್ರ ಸಾಲ ಮಾಡಿತ್ತು. ಆದರೆ, ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಏಳೆಂಟು ವರ್ಷದಲ್ಲೇ ₹ 104 ಕೋಟಿ ಸಾಲ ಮಾಡಿದೆ. ಬಿಜೆಪಿಯು ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ’ ಎಂದು ಟೀಕಿಸಿದರು.

ADVERTISEMENT

‘ಬ್ಯಾಂಕ್‌ಗಳಲ್ಲಿರುವ ಜನರ ಉಳಿತಾಯದ ಹಣಕ್ಕೂ ಕೈ ಇಟ್ಟಿರುವ ಕೇಂದ್ರ ಸರ್ಕಾರ ಎಲ್ಲಾ ಕ್ಷೇತ್ರಗಳನ್ನ ಖಾಸಗೀಕರಣಗೊಳಿಸಿ ದೇಶವನ್ನು ಮಾರಾಟ ಮಾಡಲು ಹೊರಟಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಸದ್ಯದಲ್ಲೇ ₹ 100ರ ಗಡಿ ದಾಟಲಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರ ಬದುಕು ಬರ್ಬರವಾಗಿದೆ. ಇದಕ್ಕೆ ಕೇಂದ್ರದ ದುರಾಡಳಿತವೇ ಕಾರಣ’ ಎಂದು ಕಿಡಿಕಾರಿದರು.

‘ಕೇಂದ್ರವು ದೇಶದ ಜನರನ್ನು ಮೂರ್ಖರಾಗಿ ಮಾಡಲು ಹೊರಟಿದೆ. ಆದರೆ, ಇದು ಕಾಲಕ್ಕೂ ಸಾಧ್ಯವಿಲ್ಲ. ಬಿಜೆಪಿಯ ದುರಾಡಳಿತ ಜನರಿಗೆ ಅರ್ಥವಾಗಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ಹೇಳಿದರು.

ಜನಪರ ಕಾಳಜಿಯಿಲ್ಲ: ‘2ನೇ ಅವಧಿಗೆ ಪ್ರಧಾನಿಯಾಗಿರುವ ಮೋದಿ ಅವರು ಜನ ಹಿತಕ್ಕಾಗಿ ಆಡಳಿತ ನಡೆಸುತ್ತಿಲ್ಲ. ಬದಲಿಗೆ ಬಂಡವಾಳಶಾಹಿಗಳು, ಬಹುರಾಷ್ಟ್ರೀಯ ಕಂಪನಿಗಳು ಹಿತ ಕಾಯಲು ಹೊರಟಿದ್ದಾರೆ. ಅವರಿಗೆ ಜನಸಾಮಾನ್ಯರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ’ ಎಂದು ರಾಜ್ಯ ಮಾವು ಅಭಿವೃದ್ಧಿ ನಿಮಗದ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಲೇವಡಿ ಮಾಡಿದರು.

‘ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಗಂಭೀರತೆ ಅರಿಯದೆ ರೈತರನ್ನು ನಕಲಿಗಳೆಂದು ಜರಿಯುವುದು ಸರಿಯಲ್ಲ. ಮೋದಿ ಅಪ್ರಬುದ್ಧ ರಾಜಕಾರಣಿ. ಅವರ ಸರ್ವಾಧಿಕಾರಿ ಧೋರಣೆ ಸರಿಯಲ್ಲ. ಅವರ ಆಡಳಿತದಲ್ಲಿ ದೇಶದ ಅಭಿವೃದ್ಧಿ ಕುಂಠಿತಗೊಂಡಿದೆ’ ಎಂದು ಟೀಕಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಕುಮಾರ್, ಕಾಂಗ್ರೆಸ್ ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಪ್ರಸಾದ್‌ಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.