ADVERTISEMENT

ಕೋಲಾರ: ಅ.30ಕ್ಕೆ ₹ 2,500 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಸಿ.ಎಂ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 6:44 IST
Last Updated 4 ಸೆಪ್ಟೆಂಬರ್ 2025, 6:44 IST
<div class="paragraphs"><p>ಬೆಂಗಳೂರಿನಲ್ಲಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಜೊತೆ ಬುಧವಾರ ನಡೆದ ಸಭೆಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಪಾಲ್ಗೊಂಡಿದ್ದರು.</p></div>

ಬೆಂಗಳೂರಿನಲ್ಲಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಜೊತೆ ಬುಧವಾರ ನಡೆದ ಸಭೆಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಪಾಲ್ಗೊಂಡಿದ್ದರು.

   

ಕೋಲಾರ: ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ₹ 2,500 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅ.30ರಂದು ಮಾಲೂರಿಗೆ ಭೇಟಿ ನೀಡಲಿದ್ದಾರೆ.

ಈ ಸಂಬಂಧ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಶಾಸಕ ಕೆ.ವೈ.ನಂಜೇಗೌಡ ಬುಧವಾರ ಭೇಟಿಯಾಗಿ ಚರ್ಚಿಸಿದರು. ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಕಚೇರಿಯಿಂದ ಜಿಲ್ಲಾಡಳಿತಕ್ಕೆ ಮಾಹಿತಿ ರವಾನೆ ಕೂಡ ಆಗಿದೆ.

ADVERTISEMENT

ಈ ಮಧ್ಯೆ, ನಂಜೇಗೌಡರು ಮಾಲೂರು ಕೈಗಾರಿಕಾ ಪ್ರದೇಶದಲ್ಲಿರುವ ವೆರ್ಗಾ ಅಟ್ಯಾಚ್‌ಮೆಂಟ್ ಕಂಪನಿ ವಿಚಾರವಾಗಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಜೊತೆ ಸಭೆ ನಡೆಸಿದರು. ಈ ಸಭೆಯಲ್ಲಿ ಕಂಪನಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು.

‘ಕೆಲಸದಿಂದ ತೆಗೆದಿರುವ 81 ಕಾಯಂ ನೌಕರರನ್ನು ವಾಪಸ್‌ ಕೆಲಸಕ್ಕೆ ಸೇರಿಸಿಕೊಳ್ಳಬೇಕೆಂದು ಕಂಪನಿಗೆ ಸೂಚನೆ ನೀಡಿದ್ದೇವೆ. ಸಭೆಗೆ ಕಂಪನಿಯ ಮಾಲೀಕರು ಬಂದಿರಲಿಲ್ಲ. ಮಾಲೀಕರ ಜೊತೆ ಮಾತನಾಡಿ ಕ್ರಮ ವಹಿಸುವುದಾಗಿ ಎಚ್‌ಆರ್‌ ಅಧಿಕಾರಿ ಹೇಳಿದ್ದಾರೆ. ನಾವು ಈ ಸಂಬಂಧ ಬೇಗನೇ ನಿರ್ಧಾರ ತಿಳಿಸುವಂತೆ ಹೇಳಿದ್ದೇವೆ’ ಎಂದು ನಂಜೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾಲೂರು ಭೇಟಿಗೆ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದು, ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ನಾಲ್ಕುಪಥದ ಹೆದ್ದಾರಿ, ಫ್ಲೈಓವರ್‌ ನಿರ್ಮಾಣ ಸೇರಿದಂತೆ ಸುಮಾರು ₹ 2,500 ಕೋಟಿ ಮೊತ್ತದ ಕಾಮಗಾರಿಗಳಿಗೆ ಅಂದು ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ’ ಎಂದರು.

‘ಅಂದು ಕ್ಷೇತ್ರದಲ್ಲಿ ಹಕ್ಕು ಪತ್ರ ವಿತರಣೆ ಮಾಡುವ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಮಾಲೂರು ನಗರದಲ್ಲಿ ನಿವೇಶನ ರಹಿತ 1 ಸಾವಿರ ಮಂದಿಯನ್ನು ಗುರುತಿಸಲಾಗಿದೆ. 28 ಗ್ರಾಮ ಪಂಚಾಯಿತಿಗಳಿದ್ದು, 8 ಸಾವಿರ ಜನರಿಗೆ ನಿವೇಶನ ಹಕ್ಕುಪತ್ರ ವಿತರಿಸಲಾಗುವುದು. ಇ–ಖಾತಾ ಅಭಿಯಾನ ಹಮ್ಮಿಕೊಳ್ಳಲಾಗುವುದು. ಫಲಾನುಭವಿಗಳಿಗೆ ಸೌಲಭ್ಯ ವಿತರಣೆಯೂ ನಡೆಯಲಿದೆ’ ಎಂದು ವಿವರಿಸಿದರು.

‘ಬಸ್‌ ನಿಲ್ದಾಣ, ಆಸ್ಪತ್ರೆ, ರಸ್ತೆ, ಮಾಲೂರು ಕೆರೆ, ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್ ವಸತಿ ಶಾಲೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಲೋಕಾರ್ಪಣೆ ಹಮ್ಮಿಕೊಳ್ಳಲಾಗಿದೆ’ ಎಂದರು.

ಕೋಲಾರ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಕೂಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.