ADVERTISEMENT

ಮುಖಗವಸು ವಿತರಿಸಿದ ಕಾಂಗ್ರೆಸ್ ಮುಖಂಡರು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 14:24 IST
Last Updated 18 ಮಾರ್ಚ್ 2020, 14:24 IST
ಕೋವಿಡ್‌–19 ಭೀತಿ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮುಖಂಡರು ಕೋಲಾರದಲ್ಲಿ ಬುಧವಾರ ಸಾರ್ವಜನಿಕರಿಗೆ ಮುಖಗವಸು ವಿತರಿಸಿದರು.
ಕೋವಿಡ್‌–19 ಭೀತಿ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮುಖಂಡರು ಕೋಲಾರದಲ್ಲಿ ಬುಧವಾರ ಸಾರ್ವಜನಿಕರಿಗೆ ಮುಖಗವಸು ವಿತರಿಸಿದರು.   

ಕೋಲಾರ: ಕೋವಿಡ್‌–19 ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಇಲ್ಲಿ ಬುಧವಾರ ಉಚಿತವಾಗಿ ಮುಖಗವಸು ವಿತರಿಸಲಾಯಿತು.

ನಗರದ ಕಾಲೇಜು ವೃತ್ತ, ಹಳೇ ಬಸ್ ನಿಲ್ದಾಣ, ಮೆಕ್ಕೆ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ದೊಡ್ಡಪೇಟೆ ಸೇರಿದಂತೆ ಹೆಚ್ಚಿನ ಜನಸಂದಣಿ ಇರುವ ಸ್ಥಳಗಳು ಹಾಗೂ ವಾಣಿಜ್ಯ ಪ್ರದೇಶದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಜನರಿಗೆ ಮುಖಗವಸು ನೀಡಿ ರೋಗ ತಡೆಗೆ ಜಾಗೃತಿ ಮೂಡಿಸಿದರು.

‘ಬಿಜೆಪಿಯು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲಾ ಜನರನ್ನು ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಕಾಡುತ್ತವೆ. ಕೊರೊನಾ ಸೋಂಕು ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಫಲವಾಗಿವೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ದೂರಿದರು.

ADVERTISEMENT

‘ಕೊರೊನಾ ಸೋಂಕಿನಿಂದಾಗಿ ಜಿಲ್ಲೆಯ ಜನ ಸಾಕಷ್ಟು ಆತಂಕಗೊಂಡಿದ್ದಾರೆ. ಜನರ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಪಕ್ಷವು ಉಚಿತವಾಗಿ 5 ಸಾವಿರ ಮುಖಗವಸು ವಿತರಿಸುತ್ತಿದೆ. ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಆದ ಕಾರಣ ಜನ ಸೋಂಕು ತಡೆಗೆ ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಜನರು ಸೋಂಕಿಗೆ ಭಯಪಡುವ ಅಗತ್ಯವಿಲ್ಲ. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಬೇಕು. ಅಕ್ಕಪಕ್ಕದ ಮನೆಗಳಲ್ಲಿ ಯಾರಿಗಾದರೂ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದರೆ ವೈದ್ಯರಿಗೆ ಮಾಹಿತಿ ಕೊಡಬೇಕು. ಹೆಚ್ಚಿನ ಜನಸಂದಣಿ ಇರುವ ಸ್ಥಳಗಳಿಗೆ ಹೋಗಬಾರದು. ರೋಗ ತಡೆಗೆ ಸಂಘಟಿತ ಪ್ರಯತ್ನ ನಡೆಸಬೇಕು’ ಎಂದು ಸಲಹೆ ನೀಡಿದರು.

‘ಮೊದಲು ಹಂತದಲ್ಲಿ ಜಿಲ್ಲಾ ಕೇಂದ್ರದಲ್ಲಿ ಮುಖಗವಸು ವಿತರಿಸಲಾಗಿದೆ. ಎರಡನೇ ಹಂತದಲ್ಲಿ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲೂ ಮುಖಗವಸು ವಿತರಣೆ ಮಾಡುತ್ತೇವೆ. ಸಾರ್ವಜನಿಕರು ಮನೆಯಿಂದ ಹೊರ ಬಂದಾಗ ಕಡ್ಡಾಯವಾಗಿ ಮುಖಗವಸು ಧರಿಸಬೇಕು’ ಎಂದು ಮನವಿ ಮಾಡಿದರು.

ಮಾಜಿ ಸಚಿವ ನಿಸಾರ್ ಅಹಮ್ಮದ್‌, ನಗರಸಭೆ ಸದಸ್ಯ ಪ್ರಸಾದ್ ಬಾಬು, ಪಕ್ಷದ ಮುಖಂಡರಾದ ಜೋಗ್‍ಮಲ್, ವೆಂಕಟಪತೆಪ್ಪ, ಕುಮಾರ್, ಜಯದೇವ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.