ADVERTISEMENT

ಸಿದ್ದರಾಮಯ್ಯನವರ ಕುರ್ಚಿಗೆ ಕೈಹಾಕಿದರೆ ಕಾಂಗ್ರೆಸ್ ಸ್ಮಶಾನಕ್ಕೆ: ವರ್ತೂರು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 13:03 IST
Last Updated 8 ನವೆಂಬರ್ 2025, 13:03 IST
ಮಾಜಿ ಸಚಿವ ವರ್ತೂರು ಪ್ರಕಾಶ್
ಮಾಜಿ ಸಚಿವ ವರ್ತೂರು ಪ್ರಕಾಶ್   

ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಗೆ ಹೈಕಮಾಂಡ್ ಏನಾದರೂ ಕೈ ಹಾಕಿದರೆ ಕಾಂಗ್ರೆಸ್ ಸ್ಮಶಾನ ಸೇರುತ್ತದೆ, ಆ ಪಕ್ಷದ ಕಥೆ ಮುಗಿಯುತ್ತದೆ ಎಂದು ಮಾಜಿ‌ ಸಚಿವ ಬಿಜೆಪಿಯ ವರ್ತೂರು ಪ್ರಕಾಶ್ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, 25 ಲಕ್ಷ ಕುರುಬರು ಕಾಂಗ್ರೆಸ್‌ ಸರ್ಕಾರಕ್ಕೆ ಘೇರಾವ್ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಮಗೆ ಪಕ್ಷ ಮುಖ್ಯವಲ್ಲ; ಜಾತಿ ಮುಖ್ಯ. ಕೆಲ ದಿನಗಳಿಂದ ರಾಜ್ಯ ಸರ್ಕಾರದ ರಾಜಕೀಯ ಬೆಳವಣಿಗೆಗಳ ಬಗ್ಗೆ ನಾನಾ ಚರ್ಚೆಗಳಾಗುತ್ತಿವೆ. ಕಾಂಗ್ರೆಸ್‌ನ ಒಂದು ಗುಂಪು, ಬಿಜೆಪಿಯ ಒಂದು ಗುಂಪು ಈ ವಿಚಾರದ ಬಗ್ಗೆ ಮಾತನಾಡುತ್ತಿವೆ. ಏನಾದರೂ ಸಿದ್ದರಾಮಯ್ಯ ತಂಟೆಗೆ ಬಂದರೆ ಅವರ ಪರ ಅಹಿಂದ ವರ್ಗ ಒಗ್ಗಟ್ಟಾಗಿ ನಿಲ್ಲಲಿದೆ ಎಂದರು.

ADVERTISEMENT

ಸಿದ್ದರಾಮಯ್ಯ ಇಡೀ ಕುರುಬ ಸಮಾಜದ ಪ್ರಮುಖ ನಾಯಕ, ಅಹಿಂದ ವರ್ಗದ ಮುಖಂಡ. ಸಮಾಜ ಬೆಳೆಯಲು ಒಗ್ಗಟ್ಟು ಅಗತ್ಯ. ಒಗ್ಗಟ್ಟು ಇರುವ ಕಾರಣ ನಮ್ಮನ್ನು ಮುಟ್ಟಲು ಭಯಪಡುತ್ತಾರೆ. ಇಲ್ಲದಿದ್ದರೆ ಸಮಾಜ ಮುಗಿಸುತ್ತಾರೆ ಎಂದು ತಿಳಿಸಿದರು.

ಅಂಥ ಸಂದರ್ಭ ಬರಲ್ಲ: ವರ್ತೂರು ಪ್ರಕಾಶ್‌ ಹೇಳಿಕೆಗೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌, ‘ವರ್ತೂರು ಪ್ರಕಾಶ್ ಹೇಳಿದ ರೀತಿ ಸಂದರ್ಭ ಖಂಡಿತ ಬರುವುದಿಲ್ಲ. ನಮಗೆ ಹೈಕಮಾಂಡ್ ಇದೆ. ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಆಗಿ ಡಿ.ಕೆ.ಶಿವಕುಮಾರ್‌ ಇರುತ್ತಾರೆ. ಇವರಿಬ್ಬರು ಸಹೋದರರಂತೆ ಇದ್ದು ಯಾವುದೇ ಒಡಕು ಇಲ್ಲ’ ಎಂದರು.