ADVERTISEMENT

ಮಹಾ ನಗರಪಾಲಿಕೆ ಮಾದರಿ ತೆರಿಗೆ ವಸೂಲಿಗೆ ಸಹಕರಿಸಿ

ಜಿ.ಪಂ ಸಿಇಒ ಎಚ್.ವಿ.ದರ್ಶನ್ ಸೂಚನೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 13:44 IST
Last Updated 31 ಜನವರಿ 2020, 13:44 IST
ಕೋಲಾರದ ಜಿ.ಪಂ ಸಭಾಗಂಣದಲ್ಲಿ ಶುಕ್ರವಾರ ನಡೆದ ಪಿಡಿಒಗಳ ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ವಿ.ದರ್ಶನ್ ಮಾತನಾಡಿದರು.
ಕೋಲಾರದ ಜಿ.ಪಂ ಸಭಾಗಂಣದಲ್ಲಿ ಶುಕ್ರವಾರ ನಡೆದ ಪಿಡಿಒಗಳ ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ವಿ.ದರ್ಶನ್ ಮಾತನಾಡಿದರು.   

ಕೋಲಾರ: ‘ತುಮಕೂರು ಮಹಾ ನಗರ ಪಾಲಿಕೆಯ ತೆರಿಗೆ ವಸೂಲಿ ವಿಧಾನವನ್ನು ಜಿಲ್ಲೆಯಲ್ಲಿ ಅಳವಡಿಸಲು ಚಿಂತಿಸಿದ್ದು, ಪಂಚಾಯಿತಿ ಅಧಿಕಾರಿಗಳು ಇದಕ್ಕೆ ಸಹಕಾರ ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ವಿ.ದರ್ಶನ್ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘20 ವರ್ಷಗಳ ಅವಧಿಯಷ್ಟು ತೆರಿಗೆ ಕಟ್ಟಿರುವ ಮಾಹಿತಿಯನ್ನು ಅಂತರ್ಜಾಲದಲ್ಲಿ ನಮೂದು ಮಾಡಿದ್ದಾರೆ. ಪಿಡಿಒಗಳು ಗೂಗಲ್‌ನಲ್ಲಿ ಮಾಹಿತಿ ಪಡೆದುಕೊಳ್ಳಬೇಕು’ ಎಂದು ಹೇಳಿದರು.

‘ಜಿಲ್ಲೆಯ ೧೫೬ ಗ್ರಾ.ಪಂಗಳ ಪೈಕಿ 70 ಗ್ರಾ.ಪಂಗಳು ತೆರಿಗೆ ವಸೂಲಿಯಲ್ಲಿ ಹಿಂದೆಯಿದೆ. ನೀಡಿರುವ ಕಾಲಮಿತಿಹೊಳಗೆ ತೆರಿಗೆ ವಸೂಲಿ ಮಾಡದಿದ್ದರೆ ಪಿಡಿಒಗಳಿಗೆ ನೋಟಿಸ್ ನೀಡಲಾಗುತ್ತದೆ. ಶೇ.೫೦ರಷ್ಟು ತೆರಿಗೆ ವಸೂಲಿಯಾಗದಿದ್ದರೆ ಬಡ್ತಿಗೂ ತೊಂದರೆಯಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಕಂದಾಯ ಕಟ್ಟಿಸಿಕೊಳ್ಳಲು ಗ್ರಾಮ ಲೆಕ್ಕಾಧಿಕಾರಿಗಳು ಸೋಂಬೇರಿತನ ತೋರುತ್ತಿದ್ದಾರೆ ಎಂದು ಕೆಲ ಪಿಡಿಒಗಳು ಸಭೆಯ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ದರ್ಶನ್, ‘ಗ್ರಾಮ ಲೆಕ್ಕಾಧಿಕಾರಿಗಳ ಸಮಸ್ಯೆ ಇದ್ದರೆ ಸ್ತ್ರೀ ಸಂಘಗಳ ಮುಖೇನ ವಸೂಲಿ ಮಾಡಿ, ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ, ಹಿಂಬರಹ ನೀಡಿ ಕೆಲಸದಿಂದ ತೆಗೆದು, ಬೇರೆ ಕೆಲಸಕ್ಕೆ ನಿಯೋಜನೆ ಮಾಡಲಾಗುವುದು’ ಎಂದು ತಾಕೀತು ಮಾಡಿದರು.

‘ಬಂಗಾರಪೇಟೆ ಆಲಂಬಾಡಿ ಜ್ಯೋತೆನಹಳ್ಳಿಯ ೧೫ಕುಟುಂಬಗಳು ಶೌಚಾಲಯಕ್ಕೆ ಹೊರಗಡೆ ಹೋಗುತ್ತಿದ್ದಾರೆ. ನಿಮ್ಮ ಬೇಜವಾಬ್ದಾರಿ ತನದಿಂದ ಶೌಚಾಲಯ ನಿರ್ಮಾಣ ಮಾಡದೆ ಜಿ.ಪಂಗೆ ಕಳಂಕ ತರಲು ಮುಂದಾಗಿದಿರೇನು’ ಎಂದು ಪಿಡಿಒ ಗಂಗೋಜಿರಾವ್ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಆರೋಗ್ಯ ಇಲಾಖೆಯಿಂದ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ವಿತರಣೆಗೆ ಪಿಡಿಒಗಳು ಕೈಗೋಡಿಸಬೇಕು. ನರೇಗಾದಡಿ ಕಾರ್ಮಿಕರಿಗೆ ಕೆಲಸ ನಿಗಧಿಪಡಿಸಬೇಕು. ಇಲ್ಲದಿದ್ದರೆ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳು ತೊಂದರೆ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಹಣಕಾಸು ಶೈಕ್ಷಣಿಕ ವರ್ಷದ ಹಂತದಲ್ಲಿ ಇದ್ದೇವೆ. ಸಮರ್ಪಕವಾಗಿ ಕೆಲಸ ಮಾಡದೆ ಇರುವವರ ಬಗ್ಗೆ ಮಾಹಿತಿ ನೀಡಿದರೆ ವೇತನ ತಡೆ ಹಿಡಿಯಬಹುದು. ಆದರನ್ನೂ ದಾರಿ ಬಾರದಿದ್ದರೆ ನೋಟಿಸ್ ನೀಡಿ ಕೆಲಸದಿಂದ ಅಮಾನತ್ತು ಮಾಡಲಾಗುವುದು, ಈ ಬಗ್ಗೆ ಅವರ ಗಮನಕ್ಕೆ ತನ್ನಿ’ ಎಂದು ಜಿ.ಪಂ ಉಪ ಕಾರ್ಯದರ್ಶಿ ಸಂಜೀವಪ್ಪ ಸಲಹೆ ನೀಡಿದರು.

ಜಿ.ಪಂ ಯೋಜನಾಧಿಕಾರಿ ಮುನಿಕೃಷ್ಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.