
ಮುಳಬಾಗಿಲು: ಕೊತ್ತಂಬರಿ ಸೊಪ್ಪಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆ ಹೆಚ್ಚಳವಾಗುತ್ತಿದೆ. ಹಾಗಾಗಿ ಕೊತ್ತಂಬರಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.
ಮಾರುಕಟ್ಟೆಯಲ್ಲಿ 50 ಕಟ್ಟುಗಳ ಒಂದು ಮೂಟೆ ₹400 ರಿಂದ ₹500ಕ್ಕೆ ಮಾರಾಟವಾಗುತ್ತಿದ್ದರೆ, ಸ್ಥಳೀಯ ವ್ಯಾಪಾರಿಗಳು ಹಾಗೂ ತರಕಾರಿ ಅಂಗಡಿಯವರು ಒಂದು ಕಟ್ಟನ್ನು ₹30 ರಿಂದ ₹40ಕ್ಕೆ ಮಾರಾಟ ಮಾಡುತ್ತಿದ್ದಾರೆ.
ಇತ್ತೀಚೆಗೆ ಸತತವಾಗಿ ಸುರಿದ ಮಳೆಯಿಂದಾಗಿ ಕೊತ್ತಂಬರಿ ಸೊಪ್ಪಿನ ತೋಟಗಳು ಅತಿಯಾದ ತೇವಾಂಶದಿಂದ ನಾಶವಾಗಿವೆ. ಜೊತೆಗೆ ಕೆಲವು ತೋಟಗಳು ಮಳೆ ನೀರಿನಲ್ಲಿ ಸಂಪೂರ್ಣ ಮುಳಗಿವೆ. ಹಾಗಾಗಿ ಕೊತ್ತಂಬರಿ ಸೊಪ್ಪಿಗೆ ಬೆಲೆ ಹೆಚ್ಚಳವಾಗಿದೆ.
ತಾಲ್ಲೂಕಿನಲ್ಲಿ ಕೆಲವರು ಕೊತ್ತಂಬರಿ ಸೊಪ್ಪನ್ನು ಬೆಳೆದಿದ್ದು, ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ವ್ಯಾಪಾರಿಗಳು ರೈತರ ತೋಟಕ್ಕೆ ಬಂದು ನೇರವಾಗಿ ಖರೀದಿಸುತ್ತಾರೆ. ರೈತರು ಬೆಲೆ ಹೆಚ್ಚಳದಿಂದ ಬೆಳೆಯನ್ನು ಇನ್ನೂ ಜೋಪಾನ ಮಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.