ಕೋಲಾರ: ‘ಕೊರೊನಾ ಸೋಂಕಿನ ಹರಡುವಿಕೆ ವೇಗ ನೋಡಿದರೆ ನನಗೂ ಭಯವಾಗುತ್ತಿದೆ’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಆತಂಕ ವ್ಯಕ್ತಪಡಿಸಿದರು.
ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಿಂದಿನ ವರ್ಷ ಮೊದಲ ಹಂತದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಾಗ ನನಗೆ ಭಯವೇ ಇರಲಿಲ್ಲ. ಆಗ ನಾನು ಮಾಸ್ಕ್ ಸಹ ಹಾಕುತ್ತಿರಲಿಲ್ಲ. ಆದರೆ, ಈಗ ಕೋವಿಡ್ 2ನೇ ಅಲೆಯ ಆರ್ಭಟ ನೋಡಿದರೆ ಮನೆಯಿಂದ ಹೊರ ಬರಲು ಭಯವಾಗುತ್ತದೆ’ ಎಂದರು.
‘ಕೋವಿಡ್ ಭೀತಿ ಕಾರಣಕ್ಕೆ ಕಳೆದ ಕೆಲ ದಿನಗಳಿಂದ ಮನೆಯಲ್ಲಿಯೇ ಇದ್ದೇನೆ. ಇಡೀ ಸಮಾಜಕ್ಕೆ ಹೆದರಿಕೆ ಆಗಿದೆ. ಜನ ಸರ್ಕಾರದ ಮಾರ್ಗಸೂಚಿ ಪ್ರಕಾರ ನಡೆದುಕೊಳ್ಳಬೇಕು. ಮನುಷ್ಯನ ಜೀವ ಉಳಿಯಬೇಕೆಂಬ ಪ್ರಜ್ಞೆ ಎಲ್ಲರಿಗೂ ಇರಬೇಕು’ ಎಂದು ಕಿವಿಮಾತು ಹೇಳಿದರು.
‘ಕಂಟೈನ್‌ಮೆಂಟ್ ವಲಯಗಳಲ್ಲಿನ ವ್ಯಕ್ತಿಗಳು ವಿನಾಕಾರಣ ಹೊರಬಂದು ಓಡಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ನೆರೆಹೊರೆಯವರ ಜೀವ ಮುಖ್ಯವೆಂಬ ಪರಿಜ್ಞಾನ ಇರಬೇಕು. ಕಂಟೈನ್‌ಮೆಂಟ್ ವಲಯಗಳಲ್ಲಿನ ವ್ಯಕ್ತಿಗಳು ದಯ ಮಾಡಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಇಡೀ ದೇಶಕ್ಕೆ ಕಷ್ಟ ಬಂದಿದೆ, ನಾವೆಲ್ಲಾ ಸಣ್ಣತನ ಬಿಟ್ಟು ಜವಾಬ್ದಾರಿಯುತವಾಗಿ ವರ್ತಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.