ADVERTISEMENT

ಸಿ.ಎಂ, ಡಿಸಿಎಂ ರಾಜೀನಾಮೆಗೆ ಒತ್ತಾಯ: ಬಿಜೆಪಿ ಪ್ರತಿಭಟನೆ

ಆರ್‌ಸಿಬಿ ಸಂಭ್ರಮಾಚರಣೆ ವೇಳೆ 11 ಜನರ ಸಾವು

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 14:16 IST
Last Updated 18 ಜೂನ್ 2025, 14:16 IST
ಕೆಜಿಎಫ್‌ ರಾಬರ್ಟ್‌ಸನ್‌ಪೇಟೆಯಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು
ಕೆಜಿಎಫ್‌ ರಾಬರ್ಟ್‌ಸನ್‌ಪೇಟೆಯಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು   

ಕೆಜಿಎಫ್‌: ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್, ಸಮರ್ಪಕ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಹೀಗಾಗಿ, ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ರಾಬರ್ಟ್‌ಸನ್‌ಪೇಟೆಯಲ್ಲಿ ಪ್ರತಿಭಟನೆ ಬುಧವಾರ ನಡೆಸಿದರು. 

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಗ್ರಾಮೀಣ ಘಟಕದ ಅಧ್ಯಕ್ಷ ಲಕ್ಷ್ಮಿನಾರಾಯಣ ಶರ್ಮ, ‘ಐಪಿಎಲ್‌ನಲ್ಲಿ ಆರ್‌ಸಿಬಿ ಜಯ ಸಾಧಿಸಿದ ಕಾರಣಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಸಂಭ್ರಮಾರಣೆ ವೇಳೆ ಸರ್ಕಾರದ ಬೇಜವಾಬ್ದಾರಿಯಿಂದಲೇ ಕಾಲ್ತುಳಿತ ಸಂಭವಿಸಿತ್ತು. ಇದರಿಂದಾಗಿಯೇ, 11 ಜನರು ಮೃತಪಟ್ಟು, ಹಲವು ಅಮಾಯಕರು ಗಾಯಗೊಂಡಿದ್ದರು. ಈ ದುರಂತಕ್ಕೆ ಕಾರಣರಾದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅಧಿಕಾರದಲ್ಲಿ ಇರಲು ಯೋಗ್ಯರಲ್ಲ. ಅವರು ಅಧಿಕಾರದಲ್ಲಿ ಮುಂದುವರಿಯಬಾರದು’ ಎಂದು ಆಗ್ರಹಿಸಿದರು. 

ಇಂತಹ ದುರಾಡಳಿತದ ತಡೆಗಾಗಿ ಹೋರಾಟ ಅನಿವಾರ್ಯವಾಗಿದೆ. ಈ ಹೋರಾಟಕ್ಕೆ ಜನರು ಸಹಕಾರ ನೀಡಬೇಕು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರು ತಾವು ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ದೂರಿದರು. 

ADVERTISEMENT

ನಗರ ಘಟಕದ ಅಧ್ಯಕ್ಷ ಸುರೇಶ್‌ ಮಾತನಾಡಿ, ಐಪಿಎಲ್‌ ಅವಘಡಕ್ಕೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳೇ ಕಾರಣ ಎಂದು ಎಲ್ಲರೂ ಹೇಳುತ್ತಿದ್ದಾರೆ. ಅವರು ನೈತಿಕತೆ ಹೊತ್ತು ಕೂಡಲೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಲಂಚಾವತಾರ ತಾಂಡವವಾಡುತ್ತಿದೆ. ಅಧಿಕಾರದಲ್ಲಿರುವವರು ರಾಜ್ಯವನ್ನು ಅಧೋಗತಿಗೆ ತಂದಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಸೂಕ್ತ ನಿರ್ಧಾರ ತೆಗೆದುಕೊಳ್ಳಲು ವಿಫಲವಾಗಿ, ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ತೊಲಗುವವರೆಗೆ ಬಿಜೆಪಿಯಿಂದ ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ವೈ. ಸಂಪಂಗಿ ಹೇಳಿದರು. 

ಪ್ರತಿಭಟನೆಯಲ್ಲಿ ಬಾಲಕೃಷ್ಣ, ಪಾಂಡ್ಯನ್‌, ನಾಗೇಂದ್ರ, ಸುನಿಲ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.