ADVERTISEMENT

ಮುಳಬಾಗಿಲು: ತೋಟದ ಬೆಳೆಗೆ ದೃಷ್ಟಿ ತಾಗದಿರಲು ಅಶ್ಲೀಲ ಚಿತ್ರದ ಬ್ಯಾನರ್ ಕಾವಲು!

​ಪ್ರಜಾವಾಣಿ ವಾರ್ತೆ
Published 27 ಜನವರಿ 2025, 12:42 IST
Last Updated 27 ಜನವರಿ 2025, 12:42 IST
ಮುಳಬಾಗಿಲು ಮತ್ತು ತಾಯಲೂರು ರಸ್ತೆಯ ಆಲೂಗಡ್ಡೆ ತೋಟವೊಂದರಲ್ಲಿ ಜನರ ದೃಷ್ಟಿ ಬೀಳದೆ ಇರಲಿ ಎಂದು ಅಳವಡಿಸಲಾದ ಬ್ಯಾನರ್ 
ಮುಳಬಾಗಿಲು ಮತ್ತು ತಾಯಲೂರು ರಸ್ತೆಯ ಆಲೂಗಡ್ಡೆ ತೋಟವೊಂದರಲ್ಲಿ ಜನರ ದೃಷ್ಟಿ ಬೀಳದೆ ಇರಲಿ ಎಂದು ಅಳವಡಿಸಲಾದ ಬ್ಯಾನರ್    

ಮುಳಬಾಗಿಲು: ತಾಲ್ಲೂಕಿನ ತಾಯಲೂರು ರಸ್ತೆಯಲ್ಲಿ ಕೆಲವು ರೈತರು ತಮ್ಮ ತೋಟದಲ್ಲಿ ಸಮೃದ್ಧವಾಗಿ ಬೆಳೆದ ಬೆಳೆಗಳಿಗೆ ದೃಷ್ಟಿ ತಾಗದೆ ಇರಲಿ ಎಂದು ಅರೆಬರೆ ಬಟ್ಟೆ ಹಾಕಿದ ಸಿನಿಮಾ ತಾರೆಯರ ಭಾವಚಿತ್ರ ಇರುವ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ. ಇದು ಈ ರಸ್ತೆಯಲ್ಲಿ ಸಂಚರಿಸುವ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂದು ಮಹಿಳೆಯರು ದೂರಿದ್ದಾರೆ. 

ತಾಯಲೂರು ಕಡೆಗೆ ಹೋಗುವ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಕೆಲವು ರೈತರು ಆಲೂಗಡ್ಡೆ ಬೆಳೆಯನ್ನು ಸಮೃದ್ಧವಾಗಿ ಬೆಳೆದಿದ್ದು, ದಾರಿಯಲ್ಲಿ ಓಡಾಡುವವರ ದೃಷ್ಟಿ ಬೆಳೆ ಮೇಲೆ ಬೀಳದೆ, ಬ್ಯಾನರ್ ಮೇಲೆ ಬೀಳುವಂತೆ ಸಿನಿತಾರೆಯರು ಸೇರಿದಂತೆ ಇನ್ನಿತರ ಆಕರ್ಷಕ ಚಿತ್ರಗಳನ್ನು ಅಳವಡಿಸಿದ್ದಾರೆ. ಇದರಲ್ಲಿ ಕೆಲವು ಅರೆಬರೆ ಬಟ್ಟೆ ತೊಟ್ಟ ಅರೆಗ್ನ ಚಿತ್ರಗಳಿದ್ದು, ಅವುಗಳು ಕುಟುಂಬ ಸಹಿತರಾಗಿ ರಸ್ತೆಯಲ್ಲಿ ಸಂಚರಿಸುವ ಜನಸಾಮಾನ್ಯರಿಗೆ ಇರಿಸುಮುರಿಸು ಉಂಟು ಮಾಡುತ್ತಿವೆ. ಕೆಲವರು ಈ ಬ್ಯಾನರ್‌ಗಳನ್ನು ನೋಡಲಾಗದೆ, ತಲೆ ನೆಲಕ್ಕಿಟ್ಟು ಓಡಾಡುವಂತಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ರೈತರು ತಮ್ಮ ಬೆಳೆಗಳ ಮೇಲೆ ಯಾರ ಕಣ್ಣು ಬೀಳದಂತೆ (ದೃಷ್ಟಿ ಬೀಳದಂತೆ) ಮಡಿಕೆಯ ಮೇಲೆ ಮನುಷ್ಯ ಹಾಗೂ ದೆವ್ವ, ಭೂತ, ಪಿಶಾಚಿಗಳ ಚಿತ್ರಗಳನ್ನು ಅಳವಡಿಸುತ್ತಿದ್ದದ್ದು ಸಾಮಾನ್ಯ ಸಂಗತಿ. ಆದರೆ, ಇಲ್ಲಿನ ಕೆಲವು ರೈತರು ಏಕಾಏಕಿ ಸಿನಿಮಾ, ಫ್ಯಾಷನ್, ಕ್ರೀಡಾ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುವ ಅರೆಬರೆ ನಗ್ನ ದೆಹದ ಚಿತ್ರಗಳನ್ನು ಅಳವಡಿಸಿರುವುದು ಬೇಸರದ ಸಂಗತಿಯಾಗಿದೆ ಎನ್ನುತ್ತಾರೆ ಜನಸಾಮಾನ್ಯರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.