ADVERTISEMENT

ಜಿಲ್ಲೆಯಲ್ಲಿ ರೈತರ ಹೋರಾಟದ ಮಾರ್ದನಿ: ಸರ್ಕಾರಗಳ ವಿರುದ್ಧ ಘೋಷಣೆ

ಟ್ರ್ಯಾಕ್ಟರ್‌–ಎತ್ತಿನ ಬಂಡಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 16:06 IST
Last Updated 26 ಜನವರಿ 2021, 16:06 IST
ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತಪರ ಸಂಘಟನೆಗಳು ಕೋಲಾರದಲ್ಲಿ ಮಂಗಳವಾರ ಎತ್ತಿನ ಬಂಡಿ ಮೆರವಣಿಗೆ ನಡೆಸಿದರು.
ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತಪರ ಸಂಘಟನೆಗಳು ಕೋಲಾರದಲ್ಲಿ ಮಂಗಳವಾರ ಎತ್ತಿನ ಬಂಡಿ ಮೆರವಣಿಗೆ ನಡೆಸಿದರು.   

ಕೋಲಾರ: ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಜಿಲ್ಲೆಯಲ್ಲಿ ಮಂಗಳವಾರ ರೈತಪರ ಸಂಘಟನೆಗಳ ಹೋರಾಟದ ಧ್ವನಿ ಮೊಳಗಿತು.

ರೈತ ಐಕ್ಯತಾ ಸಮಿತಿ ಸದಸ್ಯರು ದೆಹಲಿಯಲ್ಲಿನ ರೈತರ ಹೋರಾಟ ಬೆಂಬಲಿಸಿ ಬೆಂಗಳೂರಿನಲ್ಲಿ ಗಣರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್‌ ಪರೇಡ್‌ಗೆ ಟ್ರ್ಯಾಕ್ಟರ್‌ಗಳ ಸಮೇತ ತೆರಳಿದರು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ 50ಕ್ಕೂ ಹೆಚ್ಚು ಸದಸ್ಯರು ಕಾರು ಮತ್ತು ಬೈಕ್‌ಗಳಲ್ಲಿ ಬೆಂಗಳೂರಿಗೆ ತೆರಳಿ ಹೋರಾಟಕ್ಕೆ ಕೈಜೋಡಿಸಿದರು.

ಮತ್ತೊಂದೆಡೆ ಟ್ರ್ಯಾಕ್ಟರ್‌ಗಳಲ್ಲಿ ಬೆಂಗಳೂರಿಗೆ ಹೊರಟಿದ್ದ ರೈತ ಮುಖಂಡರಿಗೆ ಪೊಲೀಸರು ಹಲವೆಡೆ ತಡೆಯೊಡ್ಡಿದ್ದರಿಂದ ಮುಖಂಡರು ಸ್ಥಳೀಯವಾಗಿ ಹೋರಾಟ ಮಾಡಿದರು. ಹೋರಾಟಕ್ಕೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಯಿತು. ಕಾರ್ಮಿಕ ಸಂಘಟನೆಗಳು, ರಾಜಕೀಯ ಪಕ್ಷಗಳು ಹೋರಾಟ ಬೆಂಬಲಿಸಿದವು.

ADVERTISEMENT

ಜಿಲ್ಲಾ ಕೇಂದ್ರದಲ್ಲಿ ರೈತ ಮುಖಂಡರು ಹೆಗಲ ಮೇಲೆ ನೇಗಿಲು ಹೊತ್ತು ಎತ್ತಿನ ಬಂಡಿ ಮೆರವಣಿಗೆ ಮಾಡಿದರು. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಮತ್ತು ಹೆಗಲ ಮೇಲೆ ಹಸಿರು ಶಾಲು ಹೊದ್ದು ಸಾಗಿದ ಮುಖಂಡರು ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರ ಜನಾಭಿಪ್ರಾಯವಿಲ್ಲದೆ ರೈತ, ದಲಿತ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿವೆ. ಸರ್ಕಾರಗಳ ಜನ ವಿರೋಧಿ ನಡೆಯಿಂದ ಕೋಟ್ಯಂತರ ಬಡ ಕುಟುಂಬಗಳು ಬೀದಿ ಪಾಲಾಗುವ ಆತಂಕ ಎದುರಾಗಿದೆ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಉಪಾಧ್ಯಕ್ಷ ಕೆ.ನಾರಾಯಣಗೌಡ ಕಿಡಿಕಾರಿದರು.

‘ಬಂಡವಾಳಶಾಹಿಗಳ ಕೈಗೊಂಬೆಯಾಗಿರುವ ಸರ್ಕಾರಗಳು ದೇಶವನ್ನು ಬಹುರಾಷ್ಟ್ರೀಯ ಕಂಪನಿಗಳ ಹಿಡಿತಕ್ಕೆ ಕೊಟ್ಟು ಗುಲಾಮಗಿರಿಗೆ ದೂಡಲು ಹೊರಟಿವೆ. ಪ್ರಧಾನಿ ಮೋದಿಯವರು ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್‌ ಕಂಪನಿಗಳ ಅಡವಿಟ್ಟು ಆಹಾರ ಭದ್ರತೆಗೆ ಸಂಚಕಾರ ತರಲು ಹೊರಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟಕ್ಕೆ ಸ್ಪಂದಿಸಲಿ: ‘ಸರ್ಕಾರಗಳು ಬ್ರಿಟೀಷರಿಗಿಂತಲೂ ಕಡೆಯಾದ ಅಪಾಯಕಾರಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿವೆ. ಕಾರ್ಪೊರೇಟ್‌ ಕಂಪನಿಗಳ ಬೂಟು ನೆಕ್ಕಿ ಆಹಾರಕ್ಕಾಗಿ ಹೊರ ದೇಶಗಳತ್ತ ಕೈಚಾಚುವ ಪರಿಸ್ಥಿತಿ ಸೃಷ್ಟಿಸುತ್ತಿವೆ. ರೈತರನ್ನು ಬೀದಿಗೆ ತಳ್ಳಿ, ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಹಿತ ಕಾಯಲು ಹೊರಟಿವೆ’ ಎಂದು ಪ್ರತಿಭಟನಾಕಾರರು ಗುಡುಗಿದರು.

‘ಕೇಂದ್ರ ಸರ್ಕಾರ ತನ್ನ ಹಟಮಾರಿ ಧೋರಣೆ ಬಿಟ್ಟು ದೆಹಲಿಯಲ್ಲಿನ ರೈತರ ಹೋರಾಟಕ್ಕೆ ಸ್ಪಂದಿಸಬೇಕು. ಅದಾನಿ, ಅಂಬಾನಿ, ಮಿತ್ತಲ್‌ರ ತಾಳಕ್ಕೆ ತಕ್ಕಂತೆ ಕುಣಿಯುವುದನ್ನು ಬಿಟ್ಟು ಅನ್ನದಾತರ ಹಿತ ಕಾಯಬೇಕು. ರೈತ ಕುಲಕ್ಕೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಕೈಬಿಡಬೇಕು. ಹಳ್ಳಿಯಿಂದ ದಿಲ್ಲಿವರೆಗೆ ರೈತರ ಕೂಗು ಬಲಗೊಂಡಿದ್ದು, ಭವಿಷ್ಯದಲ್ಲಿ ಬಿಜೆಪಿಗೆ ದೇಶದಲ್ಲಿ ನೆಲೆ ಇಲ್ಲದಂತೆ ಮಾಡುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಸಂಚಾಲಕ ನಾಗರಾಜ್‌ಗೌಡ, ಜಿಲ್ಲಾ ಘಟಕದ ಸಂಚಾಲಕ ಕೆ.ಶ್ರೀನಿವಾಸಗೌಡ, ಪ್ರಧಾನ ಕಾರ್ಯದರ್ಶಿ ಚಾಂದ್‌ಪಾಷಾ, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.