ADVERTISEMENT

ರೈತ ಹುತಾತ್ಮ ದಿನಾಚರಣೆ: ತರಕಾರಿ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 15:18 IST
Last Updated 21 ಜುಲೈ 2020, 15:18 IST
ರೈತ ಹುತಾತ್ಮ ದಿನಾಚರಣೆ ಅಂಗವಾಗಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಮಂಗಳವಾರ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ತರಕಾರಿ ಹಂಚಿದರು.
ರೈತ ಹುತಾತ್ಮ ದಿನಾಚರಣೆ ಅಂಗವಾಗಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಮಂಗಳವಾರ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ತರಕಾರಿ ಹಂಚಿದರು.   

ಕೋಲಾರ: ಇಲ್ಲಿ ಮಂಗಳವಾರ ತಾಲ್ಲೂಕು ಕಚೇರಿ ಎದುರು ಸಾರ್ವಜನಿಕರಿಗೆ ತರಕಾರಿ ಹಂಚಿ ರೈತ ಹುತಾತ್ಮ ದಿನ ಆಚರಿಸಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ರೈತ ವಿರೋಧಿ ಕಾನೂನುಗಳನ್ನು ಕೈಬಿಡುವಂತೆ ಆಗ್ರಹಿಸಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕವಾದರೂ ರೈತರಿಗೆ ಸಂಕಷ್ಟ ತಪ್ಪಿಲ್ಲ. ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ. ಬೇಡಿಕೆಗಳ ಈಡೇರಿಕೆಗೆ ನ್ಯಾಯಯುತವಾಗಿ ಹೋರಾಟ ನಡೆಸುವ ರೈತರ ಮೇಲೆ ಸರ್ಕಾರಗಳು ಪೊಲೀಸ್‌ ಗೋಲಿಬಾರ್‌ನ ಅಸ್ತ್ರ ಬಳಸುತ್ತವೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಕಳವಳ ವ್ಯಕ್ತಪಡಿಸಿದರು.

‘ನರಗುಂದದಲ್ಲಿ 1980ರಲ್ಲಿ ನಡೆದ ಪೊಲೀಸ್‌ ಗೋಲಿಬಾರ್‌ನಲ್ಲಿ 147 ರೈತರು ಹುತಾತ್ಮರಾದರು. ಆ ದಿನವು ರೈತರಲ್ಲಿ ಆತ್ಮಸ್ಥೈರ್ಯ ತುಂಬಿ ಹೋರಾಟದ ಕಿಚ್ಚು ಹೊತ್ತಿಸಿತು. ಅಂದಿನ ಹೋರಾಟವೇ ಇಂದಿಗೂ ರೈತರಿಗೆ ಸ್ಫೂರ್ತಿಯಾಗಿದೆ. ಆಳುವ ಸರ್ಕಾರಗಳು ರೈತರಿಗೆ ಮಾರುಕಟ್ಟೆ ವ್ಯವಸ್ಥೆ, ಬೆಂಬಲ ಬೆಲೆ, ನೀಡುವುದನ್ನು ಮರೆತು ರೈತ ವಿರೋಧಿ ಧೋರಣೆ ತಳೆದಿವೆ’ ಎಂದು ಕಿಡಿಕಾರಿದರು.

ADVERTISEMENT

‘ರಾಜ್ಯದಲ್ಲಿ 87 ಲಕ್ಷ ರೈತ ಕುಟುಂಬಗಳಿವೆ. ಈ ಪೈಕಿ ಪ್ರತಿ ಕುಟುಂಬವು ಸರಾಸರಿ 3 ಎಕರೆ ಜಮೀನು ಹೊಂದಿದ್ದು. 4 ಕೋಟಿ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಇದೀಗ ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ರೈತ ಕುಲವನ್ನು ನಾಶ ಮಾಡಲು ಹೊರಟಿದೆ’ ಎಂದು ಸಂಘಟನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ ದೂರಿದರು.

‘ರೈತರು ಬೀದಿ ಪಾಲಾಗಿ ಕಾರ್ಪೊರೇಟ್‌ ಕಂಪನಿಗಳ ಬಾಗಿಲು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಆಹಾರ ಸ್ವಾವಲಂಬನೆ ನಾಶವಾಗಿ ಹಸಿವು ತಾಂಡವವಾಡುತ್ತಿದೆ. ಸರ್ಕಾರಗಳಿಗೆ ರೈತರ ಬಗ್ಗೆ ಕಾಳಜಿಯಿಲ್ಲ. ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯದಿದಿದ್ದರೆ ರೈತರನ್ನು ಸಂಘಟಿಸಿ ಕೃಷಿ ಭೂಮಿ ಉಳಿವಿಗಾಗಿ ಬಾರ್‌ಕೋಲ್‌ ಚಳವಳಿ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಕೈಗೊಂಬೆ: ‘ಅಧಿಕಾರಿಗಳು ಜನಪ್ರತಿನಿಧಿಗಳ ಕೈಗೊಂಬೆಗಳಾಗಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ರೈತರ ಮೇಲೆ ಶೋಷಣೆಯಾಗುತ್ತಿದೆ. ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ, ರಸಗೊಬ್ಬರ ಸಿಗುತ್ತಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ದೇಶದ ಜನ ಅನ್ನಕ್ಕಾಗಿ ಹೊರ ದೇಶಗಳತ್ತ ಕೈ ಚಾಚುವ ಸನ್ನಿವೇಶ ಸೃಷ್ಟಿಯಾಗುತ್ತದೆ’ ಎಂದು ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್‌ ಆತಂಕ ವ್ಯಕ್ತಪಡಿಸಿದರು.

ಸಂಘಟನೆ ಸದಸ್ಯರಾದ ನಾಗರಾಜ್‌ಗೌಡ, ಹರಿಕುಮಾರ್, ಮಂಜುನಾಥ್, ಫಾರೂಕ್‌ ಪಾಷಾ, ತಿಮ್ಮಣ್ಣ, ನಾಗೇಶ್, ವೆಂಕಟೇಶಪ್ಪ, ಹನುಮಯ್ಯ, ನವೀನ್, ಗಣೇಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.