ADVERTISEMENT

ಶ್ರೀನಿವಾಸಪುರ: ಮಡಿಲು ತುಂಬಿದ ಜಾನಪದ ಸೊಗಡು

ಆರ್.ಚೌಡರೆಡ್ಡಿ
Published 16 ಫೆಬ್ರುವರಿ 2021, 2:57 IST
Last Updated 16 ಫೆಬ್ರುವರಿ 2021, 2:57 IST
ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದ ಮನೆಯೊಂದರ ಮುಂದೆ ಕುಳಿತು ಗಬ್ಬೀಯಾಳು ಹಾಡು ಹಾಡುತ್ತಿರುವ ಜಾನಪದ ಗಾಯಕಿಯರು
ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದ ಮನೆಯೊಂದರ ಮುಂದೆ ಕುಳಿತು ಗಬ್ಬೀಯಾಳು ಹಾಡು ಹಾಡುತ್ತಿರುವ ಜಾನಪದ ಗಾಯಕಿಯರು   

ಶ್ರೀನಿವಾಸಪುರ: ಮಾವಿನ ಮಡಿಲಲ್ಲಿ ಈಗ ಗಬ್ಬೀಯಾಳು ಹಾಡುಗಳು ಗುಯ್ಗುಡುತ್ತಿವೆ. ಗ್ರಾಮೀಣ ಪ್ರದೇಶದ ಜಾನಪದ ಗಾಯಕಿಯರು ಸಗಣಿಯಲ್ಲಿ ಮಾಡಿದ ಪಿಳ್ಳಾರಿಯನ್ನು ಹೆಡಿಗೆಯಲ್ಲಿಟ್ಟುಕೊಂಡು, ಅದನ್ನು ಗೌರಿಯೆಂದು ಊಹಿಸಿಕೊಂಡು ಹಾಡುವ ಜನಪದ ಗೀತೆಗಳು ಕೇಳುಗರ ಕಿವಿಗೆ ಇಂಪಾಗಿ ಕೇಳಿಸುತ್ತವೆ.

ಗಬ್ಬೀಯಾಳು ಎಂಬುದು ಹೊಲಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಒಂದು ಪುಟ್ಟ ಗಿಡ. ಮೂಗುನತ್ತು ಗಾತ್ರದ ಹಳದಿ ಹೂಗಳಿಂದ ಕಂಗೊಳಿಸುವ ಹೂಗಳು ನೋಡುಗರ ಕಣ್ಸೆಳೆಯುತ್ತವೆ. ಆ ಹೂಗಳಿಂದ ಪಿಳ್ಳಾರಿಯನ್ನು ಸಿಂಗರಿಸಿ ಹಳ್ಳಿಗಳಲ್ಲಿ ಸಂಚರಿಸಿ, ಹಾಡುತ್ತಾ ದವಸ ಧಾನ್ಯ ಸಂಗ್ರಹಿಸಲಾಗುತ್ತದೆ. ಮೊದಲು ಬಿದಿರಿನ ಹೆಡಿಗೆಯಲ್ಲಿ ರಾಗಿಯ ಮೇಲೆ ಗೌರಿಯನ್ನು ಪೂಜಿಸಿ ಹೊತ್ತು ತರುತ್ತಿದ್ದರು. ಈಗ ಬದಲಾದ ಪರಿಸ್ಥಿತಿಯಲ್ಲಿ ದೊಡ್ಡ ಸ್ಟೀಲ್ ಬಟ್ಟಲಿನಲ್ಲಿ ಗೌರಿಯನ್ನು ತರಲಾಗುತ್ತಿದೆ.

ಆಂಧ್ರಪ್ರದೇಶದ ಗಡಿಗೆ ಅಂಟಿಕೊಂಡಿರುವುದರಿಂದ ಇಲ್ಲಿನ ಬಹುತೇಕ ಜನಪದ ಸಾಹಿತ್ಯ ತೆಲುಗು ಭಾಷೆಯಲ್ಲಿದೆ. ಇಲ್ಲಿ ಜನರು ತೆಲುಗು ಹಾಗೂ ಕನ್ನಡ ಭಾಷೆಯ ನಡುವೆ ಬೇಧ ಎಣಿಸದ ಪರಿಣಾಮವಾಗಿ, ಇಂದಿಗೂ ಇಲ್ಲಿನ ಜನಪದ ಗೀತೆಗಳಿಗೆ ಕೇಳುಗರಿದ್ದಾರೆ. ಮನೆಗಳ ಮುಂದೆ ಕೂರಿಸಿ, ಗೌರಿಗೆ ಪೂಜೆ ಮಾಡಿ, ಸ್ವಲ್ಪ ಕಾಲ ಹಾಡುಗಳನ್ನು ಕೇಳಿಸಿಕೊಂಡು, ಒಂದಿಷ್ಟು ದವಸವನ್ನು ಹೆಡಿಗೆಗೆ ಸುರಿದು ಕಳುಹಿಸುವ ರೂಢಿ ಮುಂದುವರಿದಿದೆ.

ADVERTISEMENT

ತಾಲ್ಲೂಕಿನ ದೊಡಮಲದೊಡ್ಡಿ ಗ್ರಾಮ ಗಬ್ಬೀಯಾಳು ಪದಗಳಿಗೆ ಹೆಚ್ಚು ಹೆಸರುವಾಸಿ. ಈ ಗ್ರಾಮದ ಒಂದು ಸಮುದಾಯ ನೆಲ ಸಂಸ್ಕೃತಿಯನ್ನು ಸಾರುವ ಜಾನಪದ ಗೀತೆಗ ಕಣಜವನ್ನೇ ಹೊಂದಿದೆ. ಹಾಗಾಗಿ ಈ ಗ್ರಾಮದ ಮಹಿಳೆಯರು ವಯೋಮಾನದ ಗಣನೆ ಇಲ್ಲದೆ ಗ್ರಾಮಗಳಿಗೆ ಹೋಗಿ ಹಾಡುತ್ತಾರೆ. ಪ್ರತಿ ವರ್ಷ ಇದನ್ನು ಅವರು ಒಂದು ಸಂಪ್ರದಾಯದಂತೆ ಪಾಲಿಸಿಕೊಂಡು ಬರುತ್ತಿದ್ದಾರೆ.

ತಾಲ್ಲೂಕಿನಲ್ಲಿ ‘ಯಾಲಪದಂ’ ಎಂಬ ವಿಶಿಷ್ಟವಾದ ಜಾನಪದ ಪ್ರಕಾರವೊಂದು ಇನ್ನೂ ಜೀವಂತವಾಗಿದೆ. ಸಾಮಾನ್ಯವಾಗಿ ಹುಣಸೆ ಮರದಲ್ಲಿ ಕಾಯಿ ಕೊಯ್ಲು ಮಾಡುವ ಪುರುಷರು ಏರಿದ ಧ್ವನಿಯಲ್ಲಿ ಹಾಡುಗಳನ್ನು ಹಾಡುತ್ತಾರೆ. ಕೆಲವು ಹಾಡುಗಳುಅಶ್ಲೀಲ ಎನಿಸಿದರೂ, ತಮಾಷೆಗಾಗಿ ಕೇಳಿ ಆನಂದಿಸುತ್ತಾರೆ.

ಕೋನಂಗಿ ಕುಣಿತಕ್ಕೂ ಈ ತಾಲ್ಲೂಕು ಸಾಕ್ಷಿಯಾಗಿದೆ. ಹೊದಲಿ ಗ್ರಾಮದ ದಿವಂಗತ ಹನುಮಪ್ಪ ಅವರು ಈ ಕಲೆಯಲ್ಲಿ ನಿಪುಣತೆ ಪಡೆದಿದ್ದರು. ವಕ್ರವಾದ ಕೋಲೊಂದರ ಮೇಲೆ ಕುಳಿತು, ಕೈಯಲಿ ಚಿಟಿಕೆ ಹಿಡಿದು ಸುತ್ತಲೂ ಸುತ್ತುತ್ತಾ ಹಾಡಿದರೆ, ಜನರು ನಿಂತು ನೋಡುತ್ತಿದ್ದರು. ಕಶೆಟ್ಟಿಪಲ್ಲಿ ಗ್ರಾಮದ ಮೇಲೂರಮ್ಮ ಜನಪದ ಗಾಯನದಲ್ಲಿ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ತೊಗಲುಗೊಂಬೆ ಕುಳ್ಳಾಯಪ್ಪ, ತೊಗಲು ಗೊಂಬೆ ಪ್ರದರ್ಶನ ನೀಡುವಲ್ಲಿ ಎತ್ತಿದ ಕೈ ಆಗಿದ್ದರು. ಆದರೆ ಆಂಧ್ರಪ್ರದೇಶಕ್ಕೆ ಹೋದವರು ಮತ್ತೆ ಹಿಂದಿರುಗಲಿಲ್ಲ.

ಹೀಗೆ ಮಾವಿಗೆ ಹೆಸರಾದ ಶ್ರೀನಿವಾಸಪುರ ತಾಲ್ಲೂಕು ಜಾನಪದ ಹಾಡುಗಳ ಗಾಯನಕ್ಕೂ ಹೆಸರಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಎಲ್ಲವೂ ಉಳಿದಿದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಆದರೂ ಇರುವ ಕಲಾವಿದರು ಜಾನಪದದ ಇರವನ್ನು ಸಾರುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.