ADVERTISEMENT

ಆಲಿಕಲ್ಲು ಮಳೆ: ಮಾವು, ಟೊಮೆಟೊ, ದ್ರಾಕ್ಷಿಗೆ ಹಾನಿ

ತುಮಕೂರು ತಾಲ್ಲೂಕಿನ ಹೆಬ್ಬೂರಿನಲ್ಲಿ 6.5 ಸೆಂ.ಮೀ ಮಳೆ l ಶ್ರೀನಿವಾಸಪುರದಲ್ಲೂ ಮಳೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 22:43 IST
Last Updated 17 ಮಾರ್ಚ್ 2023, 22:43 IST
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಚಿಕ್ಕತಮ್ಮನಹಳ್ಳಿಯಲ್ಲಿ ಮಳೆಯಿಂದ ನೆಲಕಚ್ಚಿರುವ ತರಕಾರಿ ಬೆಳೆಗಳು
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಚಿಕ್ಕತಮ್ಮನಹಳ್ಳಿಯಲ್ಲಿ ಮಳೆಯಿಂದ ನೆಲಕಚ್ಚಿರುವ ತರಕಾರಿ ಬೆಳೆಗಳು   

ಶ್ರೀನಿವಾಸಪುರ (ಕೋಲಾರ ಜಿಲ್ಲೆ): ತಾಲ್ಲೂಕಿನಲ್ಲಿ ಗುರುವಾರ ಸಂಜೆ ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಗೆ ಮಾವು, ಟೊಮೆಟೊ, ಕ್ಯಾಪ್ಸಿಕಂ, ಪಪ್ಪಾಯಿ ಬೆಳೆ ನಷ್ಟಕ್ಕೀಡಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಕಸಬಾ ಹೋಬಳಿ ಸೇರಿದಂತೆ ತಾಲ್ಲೂಕಿನ ಯಲ್ದೂರು, ರೋಣೂರು, ಸೋಮಯಾಲಹಳ್ಳಿ, ಪೆಗಳಪಲ್ಲಿ, ನಾರಾಯಣಪುರ, ಪಾತಮುತ್ತಕಪಲ್ಲಿ ಗ್ರಾಮದ ಸುತ್ತಮುತ್ತ ಭಾರಿ ಮಳೆ ಸುರಿದಿದೆ. ಆಲಿಕಲ್ಲು ಸಹಿತ ಸುರಿದ ಮಳೆಗೆ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.

‘ತಾಲ್ಲೂಕಿನ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಲಿಕಲ್ಲು ಬಿದ್ದಿರುವುದು ಇದೇ ಮೊದಲು. ನೆಲವೆಲ್ಲಾ ಆಲಿಕಲ್ಲಿನಿಂದ ತುಂಬಿಹೋಗಿತ್ತು. ಮಳೆಯೊಂದಿಗೆ ಬೀಸಿದ ಬಿರುಗಾಳಿ ಹಾಗೂ ಆಲಿಕಲ್ಲಿನ ಹೊಡೆತಕ್ಕೆ ಸಿಕ್ಕಿದ ಯಾವುದೇ ಬೆಳೆ ಉಳಿದಿಲ್ಲ. ರೈತರಿಗೆ ಕೋಟ್ಯಂತರ ರೂಪಾಯಿ ಬೆಳೆ ನಷ್ಟ ಉಂಟಾಗಿದೆ’ ಎಂದು ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

6.5 ಸೆಂ.ಮೀ ಮಳೆ (ತುಮಕೂರು ವರದಿ): ತಾಲ್ಲೂಕಿನ ಹೆಬ್ಬೂರಿನಲ್ಲಿ 6.5 ಸೆಂ.ಮೀ ಮಳೆ ಬಿದ್ದಿದೆ. ತುಮಕೂರು ತಾಲ್ಲೂಕು, ಗುಬ್ಬಿ, ಕುಣಿಗಲ್, ತಿಪಟೂರು, ತುರುವೇಕೆರೆ, ಮಧುಗಿರಿ, ಶಿರಾ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಮಳೆ ಸುರಿದಿದೆ. ಈ ವರ್ಷದ ಮೊದಲ ಮಳೆಯ ಸಿಂಚನಕ್ಕೆ ಜನರು ಹರ್ಷಗೊಂಡರು.

ದ್ರಾಕ್ಷಿ ಬೆಳೆಗೆ ಹಾನಿ (ಚಿಕ್ಕಬಳ್ಳಾಪುರ ವರದಿ): ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಬೆಳೆ ನಷ್ಟವಾಗಿದೆ. ಈ ತಾಲ್ಲೂಕಿನ ಚಿಕ್ಕತಮ್ಮನಹಳ್ಳಿ, ನಡುವನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ದ್ರಾಕ್ಷಿ ಸೇರಿದಂತೆ ತರಕಾರಿ ಬೆಳೆಗಳಿಗೆ ಹಾನಿಯಾಗಿದೆ. ನಡುವನಹಳ್ಳಿ ಗ್ರಾಮದಲ್ಲಿ ರೈತ ‌ಚಂದ್ರಶೇಖರ್ ಅವರ ಫಸಲಿಗೆ ಬಂದಿದ್ದ 15 ಎಕರೆ ದ್ರಾಕ್ಷಿ ತೋಟ ಹಾನಿಗೀಡಾಗಿದೆ. ಚಿಕ್ಕತಮ್ಮನಹಳ್ಳಿಯಲ್ಲಿ ಆಲೂಗಡ್ಡೆ, ಬೀನ್ಸ್, ಸೌತೆಕಾಯಿ, ಹಿಪ್ಪುನೇರಳೆ ಸೊಪ್ಪು ನಾಶವಾಗಿದೆ.

ಜಿಲ್ಲೆಯ ಗೌರಿಬಿದನೂರು, ಚಿಂತಾಮಣಿ, ಬಾಗೇಪಲ್ಲಿ, ಶಿಡ್ಲಘಟ್ಟ, ಬಾಗೇಪಲ್ಲಿ ತಾಲ್ಲೂಕಿನಲ್ಲಿಯೂ ಉತ್ತಮ ಮಳೆಯಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.