ADVERTISEMENT

ಅಬಕಾರಿ ಲಂಚಕ್ಕಿಂತ ದಾಖಲೇ ಬೇಕೇ? ಎಚ್‌.ಡಿ.ಕುಮಾರಸ್ವಾಮಿ

ಶೇ 40 ಕಮಿಷನ್‌ ಆರೋಪ ಮಾಡಿದಾಗ ದಾಖಲೆ ನೀಡಿದ್ದರೇ?

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 20:21 IST
Last Updated 7 ಫೆಬ್ರುವರಿ 2026, 20:21 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಕೋಲಾರ: ‘ಅಬಕಾರಿ ಇಲಾಖೆಯಲ್ಲಿ ದುಡ್ಡು ತೆಗೆದುಕೊಂಡಿರುವುದಕ್ಕೆ ಈಗ ದಾಖಲೆ ಇದೆ. ₹25 ಲಕ್ಷ ತೆಗೆದು ಕೊಂಡು ಸಿಕ್ಕಿಬಿದ್ದಿದ್ದಾರೆ, ಮಂತ್ರಿ ಹೆಸರೂ ಬಂದಿದೆ. ಇದಕ್ಕಿಂತ ದಾಖಲೇ ಬೇಕೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಏನೇ ಆರೋಪ ಮಾಡಿದರೂ ದಾಖಲೆ ಕೊಡಿ ಎಂದು ಕಾಂಗ್ರೆಸ್‌ ಸರ್ಕಾರದವರು ಕೇಳುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಶೇ 40 ಕಮಿಷನ್‌ ಎಂದು ಆರೋಪಿಸಿದಾಗ ಯಾವ ದಾಖಲೆ ಕೊಟ್ಟಿದ್ದರು?’ ಎಂದು ಹರಿಹಾಯ್ದರು.

‘ಹೊಸದಾಗಿ 500ಕ್ಕೂ ಅಧಿಕ ಮದ್ಯದಂಗಡಿ ಹರಾಜು ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದ ದಿನವೇ ಇದು ದುಡ್ಡು ಹೊಡೆಯುವ ಕಾರ್ಯಕ್ರಮ ಎಂಬುದಾಗಿ ನಾನು ಹೇಳಿದ್ದೆ’ ಎಂದರು.

ADVERTISEMENT

‘ಈ ಸರ್ಕಾರದ ಮಂತ್ರಿಗಳು ಎಷ್ಟು ಕೆರೆ ನುಂಗಿದ್ದಾರೆ? ಯಾರು ಭೂಮಿ ಲಪಟಾಯಿಸಿದ್ದಾರೆ ಎಂಬುದಕ್ಕೆ ಟನ್‌ಗಟ್ಟಲೆ ದಾಖಲೆ ಕೊಡಬಲ್ಲೆ. ಅದು ಉಪಯೋಗಕ್ಕೆ ಬರಲ್ಲ. ಹಿಂದೆ ಹೋರಾಟ ನಡೆಸಿ ಹಲವಾರು ದಾಖಲೆ ಕೊಟ್ಟಿದ್ದೆ. ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ ಎಂಬ ಬೇಸರವಿದೆ ಎಂದರು. 

‘ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಶ್ರೀನಿವಾಸಪುರದಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಳ್ಳದಿದ್ದರೆ ಅದಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳಿದ್ದರೆ ಏಕೆ ಹೆದರಬೇಕು? ನಾನು ನೋಟಿಸ್ ಕೊಡಿಸಿದ್ದೇನೆ ಎಂದು ಏಕೆ ದೂರುತ್ತಿದ್ದಾರೆ?’ ಎಂದು ಹರಿಹಾಯ್ದರು.

‘ಬಿಡದಿಯಲ್ಲಿ ನಾನು ಬೆವರು ಸುರಿಸಿ ಭೂಮಿ ಖರೀದಿಸಿದ್ದೇನೆ. ಅದಕ್ಕೂ ಎಸ್‌ಐಟಿ ರಚಿಸಿ ಹಿಂಸೆ ಕೊಟ್ಟರು. ಇವರ ರೀತಿ ಹಗಲು ದರೋಡೆ ಮಾಡಿ ನಾನು ಜಮೀನು ಖರೀದಿಸಿದ್ದು ಅಲ್ಲ’ ಎಂದರು.

‘ರಾಜ್ಯದ ಯಾವುದೇ ಸಚಿವರು ನನ್ನನ್ನು ಅಭಿವೃದ್ಧಿ ಕೆಲಸದ ಸಂಬಂಧ ಭೇಟಿ ಮಾಡಿ ಚರ್ಚಿಸಿಲ್ಲ. ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಭೇಟಿಯಾಗಿ ಅವರ ರಾಜ್ಯದ ಬೇಡಿಕೆಗಳ ಮನವಿ ಕೊಟ್ಟು ಹೋಗುತ್ತಿದ್ದಾರೆ. ಆದರೆ, ಇವರು ಆ ಪದ್ಧತಿಯನ್ನೇ ಇಟ್ಟುಕೊಂಡಿಲ್ಲ’ ಎಂದು ಟೀಕಾ ಪ್ರಹಾರ ನಡೆಸಿದರು.

‘ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು ತರುವ ಬಗ್ಗೆ ಶೀಘ್ರದಲ್ಲಿಯೇ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ’ ಎಂದು ಹೇಳಿದರು.

ಸೀಟು ಹಂಚಿಕೆ ಮಾತುಕತೆ ನಡೆದಿಲ್ಲ

‘ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿ ಸಂಬಂಧ ಸ್ಥಳೀಯವಾಗಿ ಯಾರೇ ಚರ್ಚೆ ಮಾಡಿದರೂ ಅದು ಅಂತಿಮ ಅಲ್ಲ. ಮಂಡ್ಯ ಹಾಸನ ಸೇರಿದಂತೆ ರಾಜ್ಯದ ಯಾವುದೇ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಸೀಟು ಕುರಿತು ಮಾತುಕತೆ ಆಗಿಲ್ಲ. ಚುನಾವಣೆ ಬಂದಾಗ ಹೈಕಮಾಂಡ್‌ ಮಟ್ಟದಲ್ಲಿ ಬಿಜೆಪಿಯೊಂದಿಗೆ ಮಾತುಕತೆ ಮೂಲಕ ತೀರ್ಮಾನ ಕೈಗೊಳ್ಳುತ್ತೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧೆ ಸಂಬಂಧ ಎಚ್‌.ಡಿ.ದೇವೇಗೌಡರ ಮಾತಿನ ಅರ್ಥವೇ ಬೇರೆ. ಭ್ರಷ್ಟ ರಾಜ್ಯ ಸರ್ಕಾರ ತೆಗೆದು ಹಾಕುವುದು ನಮ್ಮ ಮೊದಲ ಆದ್ಯತೆ ಆಗಿದೆ. ಜಿಲ್ಲಾ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆ ಗೆಲ್ಲುವತ್ತ ಹರಿಸುತ್ತಿದ್ದೇವೆ’ ಎಂದು ಕುಮಾರಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.