ADVERTISEMENT

ಕೋಲಾರ: ಜಿಲ್ಲೆಯಲ್ಲಿ ಕಳೆಗಟ್ಟಿದ ಹೋಳಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 13:53 IST
Last Updated 18 ಮಾರ್ಚ್ 2022, 13:53 IST
ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಕೋಲಾರದ ದೊಡ್ಡಪೇಟೆಯ ಬ್ರಾಹ್ಮಣರ ಬೀದಿಯಲ್ಲಿ ಯುವಕರು ಶುಕ್ರವಾರ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು
ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಕೋಲಾರದ ದೊಡ್ಡಪೇಟೆಯ ಬ್ರಾಹ್ಮಣರ ಬೀದಿಯಲ್ಲಿ ಯುವಕರು ಶುಕ್ರವಾರ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು   

ಕೋಲಾರ: ಜಿಲ್ಲೆಯಲ್ಲಿ ಮಕ್ಕಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಶುಕ್ರವಾರ ಪರಸ್ಪರ ಬಣ್ಣ ಎರಚಿ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಿದರು.

ಗುಲಾಬಿ, ಹಸಿರು, ಕೆಂಪು, ಕೇಸರಿ, ನೀಲಿ ಹೀಗೆ ಬಗೆ ಬಗೆಯ ಬಣ್ಣದ ಓಕಳಿಯಲ್ಲಿ ಜನ ಮಿಂದೆದ್ದರು. ಮಕ್ಕಳು ಕಿರಾಣಿ ಅಂಗಡಿಗಳಲ್ಲಿ ಬಣ್ಣ ಖರೀದಿಸಿ ಓಕಳಿ ಆಡಿದರು. ಪೋಷಕರು ವಯಸ್ಸಿನ ಅಂತರ ಮರೆತು ಮಕ್ಕಳೊಂದಿಗೆ ಬೆರೆತು ಹೋಳಿ ಹಬ್ಬಕ್ಕೆ ಮೆರುಗು ನೀಡಿದರು.

ಯುವಕರ ಗುಂಪು ಸ್ನೇಹಿತರನ್ನು ಹಿಂಬಾಲಿಸಿ ಹೋಗಿ ಬಣ್ಣ ಎರಚುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಅಲ್ಲದೇ, ತಲೆಗೆ ಕೋಳಿ ಮೊಟ್ಟೆ ಹೊಡೆದು ಸಂಭ್ರಮಿಸಿದರು. ಬೈಕ್‌ಗಳಲ್ಲಿ ನಗರ ಸುತ್ತುತ್ತಾ ಕೇಕೆ ಹಾಕಿದರು. ಕೆಲವೆಡೆ ದಾರಿ ಹೋಕರಿಗೂ ಬಣ್ಣ ಹಾಕಲಾಯಿತು.

ADVERTISEMENT

ಕೋಟೆ ಬಡಾವಣೆಯಲ್ಲಿ ನಡೆದ ಸೋಮೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವು ಹೋಳಿ ಸಂಭ್ರಮವನ್ನು ಕಳೆಗಟ್ಟುವಂತೆ ಮಾಡಿತು. ಬಡಾವಣೆಗಳಲ್ಲಿ ಯುವಕರ ತಂಡಗಳು ಹೋಳಿ ಸಂಭ್ರಮದಲ್ಲಿ ತೊಡಗಿದ್ದುದು ಕಂಡುಬಂತು. ಕೆಲವೆಡೆ ದಾರಿ ಹೋಕರಿಗೆ ಬಣ್ಣ ಹಾಕಿ ತಮ್ಮೊಂದಿಗೆ ಹಬ್ಬ ಆಚರಿಸಿಕೊಳ್ಳುವಂತೆ ಮಾಡಿದರು. ಅಹಿತಕರ ಘಟನೆ ನಡೆಯದಂತೆ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.

ಸಂಸ್ಕೃತಿಯ ಪ್ರತೀಕ: ‘ಹೋಳಿ ಹಬ್ಬವು ಭಾರತೀಯ ಸಂಸ್ಕೃತಿಯ ಪ್ರತೀಕ. ಈ ಆಚರಣೆಯು ಪರಸ್ಪರ ಸೌಹಾರ್ದತೆ ಮತ್ತು ಸ್ನೇಹಮಯ ವಾತಾವರಣ ನಿರ್ಮಿಸಲು ಸಹಕಾರಿ’ ಎಂದು ಯುವಕರು ಅಭಿಪ್ರಾಯಪಟ್ಟರು.

‘ಹೋಳಿ ಹಬ್ಬದ ಆಚರಣೆಯು ಉತ್ತರ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇಲ್ಲಿಯೂ ಈ ಹಬ್ಬ ಆಚರಿಸುವ ಮೂಲಕ ದೇಶದ ಸಂಸ್ಕೃತಿ, ಪರಂಪರೆ ಉಳಿಸುವುದರ ಜತೆಗೆ ದ್ವೇಷ, ಅಸೂಹೆ ನಾಶಪಡಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.