ADVERTISEMENT

ಭ್ರಮೆ ಬಿಟ್ಟು ಕನಸು, ಗುರಿ ಬೆನ್ನಟ್ಟಿ ಗೆಲ್ಲಿ: ಜಿಲ್ಲಾಧಿಕಾರಿ ಎಂ.ಆರ್.ರವಿ

ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿ ಚಾಲನೆ, ನೂರಾರು ವಿದ್ಯಾರ್ಥಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 3:09 IST
Last Updated 10 ಆಗಸ್ಟ್ 2025, 3:09 IST
ಕೋಲಾರದಲ್ಲಿ ಶನಿವಾರ ನಡೆದ ಸ್ಪರ್ಧಾತ್ಮಕ ಪರೀಕಾ ತರಬೇತಿಯ ಉಚಿತ ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿ ಎಂ.ಆರ್‌.ರವಿ ಚಾಲನೆ ನೀಡಿದರು. ಡಿ.ದೇವರಾಜ್‌, ನಿಖಿಲ್‌ ಬಿ., ರಾಘವೇಂದ್ರರಾವ್‌, ಕೆ.ವಿ.ಶಂಕರಪ್ಪ, ಎಂ.ಉದಯಕುಮಾರ್‌, ಅರಿವು ಶಿವಪ್ಪ, ಡಾ.ಅರವಿಂದ, ಪಂಡಿತ್‌ ಮುನಿವೆಂಕಟಪ್ಪ, ವಿ.ಮುನಿರಾಜು ಪಾಲ್ಗೊಂಡಿದ್ದರು
ಕೋಲಾರದಲ್ಲಿ ಶನಿವಾರ ನಡೆದ ಸ್ಪರ್ಧಾತ್ಮಕ ಪರೀಕಾ ತರಬೇತಿಯ ಉಚಿತ ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿ ಎಂ.ಆರ್‌.ರವಿ ಚಾಲನೆ ನೀಡಿದರು. ಡಿ.ದೇವರಾಜ್‌, ನಿಖಿಲ್‌ ಬಿ., ರಾಘವೇಂದ್ರರಾವ್‌, ಕೆ.ವಿ.ಶಂಕರಪ್ಪ, ಎಂ.ಉದಯಕುಮಾರ್‌, ಅರಿವು ಶಿವಪ್ಪ, ಡಾ.ಅರವಿಂದ, ಪಂಡಿತ್‌ ಮುನಿವೆಂಕಟಪ್ಪ, ವಿ.ಮುನಿರಾಜು ಪಾಲ್ಗೊಂಡಿದ್ದರು   

ಕೋಲಾರ: ‘ಅಧಿಕಾರ ಅನುಭವಿಸಬಹುದು ಹಾಗೂ ಹಣ ಮಾಡಬಹುದೆಂಬ ಕೆಟ್ಟ ಆಲೋಚನೆ, ಉದ್ದೇಶ ಇಟ್ಟುಕೊಂಡು ಯಾವುದೇ ಕಾರಣಕ್ಕೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಡಿ. ಹಣ ಗಳಿಸಲು ಬೇರೆ ಹಲವಾರು ಮಾರ್ಗಗಳಿವೆ. ಹಣ, ಅಧಿಕಾರ ಬಿಟ್ಟು ಗುರಿ, ಕನಸುಗಳನ್ನು ಬೆನ್ನಟ್ಟಿ ಗೆಲ್ಲುವ ಸಂಕಲ್ಪದೊಂದಿಗೆ ಅಧ್ಯಯನ ಮಾಡಿ’ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಕಿವಿಮಾತು ಹೇಳಿದರು.

ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಐಪಿಎಸ್‌ ಅಧಿಕಾರಿ ಡಿ.ದೇವರಾಜ್‌ ಅವರ ಡಿಎಂಆರ್‌ ಸಂಸ್ಥೆ ಶನಿವಾರ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕಾ ತರಬೇತಿಯ ಉಚಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ತಾನು ಹಳ್ಳಿಯವ, ಬಡತನವಿದೆ. ಸಣ್ಣ ಜಾತಿ,‌‌ ನಮ್ಮಂಥವರಿಗೆ ಆಗಲ್ಲ‌ ಎಂಬ ಮನೋಭಾವ ಬಿಟ್ಟುಬಿಡಿ.‌ ಎಷ್ಟು ಗಂಟೆ‌ ಓದಿದ್ದೀರಿ‌ ಎಂಬುದು ಮುಖ್ಯವಲ್ಲ; ಏನು ಓದಿದ್ದೀರಿ ಎಂಬುದು ಮುಖ್ಯ. ವ್ಯವಧಾನ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ವಿಶ್ವವಿದ್ಯಾಲಯ ಪರೀಕ್ಷೆಗಿಂತ ಯುಪಿಎಸ್‌ಸಿ ಪರೀಕ್ಷೆ ಸಂಪೂರ್ಣ ‌ಭಿನ್ನವಾಗಿರುತ್ತದೆ. ಓದು, ಬರಹದ ಪ್ಯಾಷನ್ ಬೆಳೆಸಿಕೊಳ್ಳಿ. ಇಚ್ಛಾ ಶಕ್ತಿ, ಬದ್ಧತೆ,‌ ತ್ಯಾಗ, ನಿಷ್ಠೆ, ಶಿಸ್ತು, ಸಿದ್ಧತೆ ಇರಬೇಕು. ಕೀಳರಿಮೆ,‌ ಹಿಂಜರಿಕೆ‌ ಬೇಡ.‌ ಪರೀಕ್ಷೆ ‌ಬರೆಯಲು ಜೀನಿಯಸ್ ‌ಆಗಿರಬೇಕು ಎಂಬ ತಪ್ಪು ಕಲ್ಪನೆಯೂ ‌ಬೇಡ. ದಿನಪತ್ರಿಕೆ ನಿತ್ಯ ಓದಿ’ ಎಂದು ಸಲಹೆ ನೀಡಿದರು.

‘ಡಿಸಿಪಿ ದೇವರಾಜ್ ತಮ್ಮ ಊರಿನ ಯುವಕರಿಗಾಗಿ ಏನಾದರೂ ಮಾಡಬೇಕೆಂದು ಸಂಸ್ಥೆ ಕಟ್ಟಿ ಆದರ್ಶಪ್ರಾಯರಾಗಿದ್ದಾರೆ. ತಮ್ಮ ಜನ್ಮ ಭೂಮಿಯ ಋಣ ತೀರಿಸಿಕೊಳ್ಳಲು ಪೋಷಕರ ಹೆಸರಿನಲ್ಲಿ ಈ ಸಂಸ್ಥೆ ಪ್ರಾರಂಭಿಸಿ ಅನೇಕ ಪ್ರತಿಭೆಗಳನ್ನು ದೇಶಕ್ಕೆ, ರಾಜ್ಯಕ್ಕೆ ಕೊಡುಗೆಯಾಗಿ ನೀಡುತ್ತಿರುವುದು ಅಭಿನಂದನಾರ್ಹ’ ಎಂದರು.

ಬೆಂಗಳೂರಿನ ಪೂರ್ವ ಡಿಸಿಪಿ ಡಿ.ದೇವರಾಜ್ ಮಾತನಾಡಿ, ‌‘ಸಂಸ್ಥೆ ಸ್ಥಾಪನೆ ಹಿಂದೆ ಯಾರ ವೈಯಕ್ತಿಕ ಆಸೆ, ಆಕಾಂಕ್ಷೆ ಇಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು, ತರಬೇತಿ ಪಡೆಯಲು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಬೆಂಗಳೂರು ದುಬಾರಿಯಾಗಿದೆ. ಪ್ರಯಾಣ, ಊಟ, ವಸತಿ ಕಷ್ಟ. ಹಲವರಿಗೆ ಪೋಷಕರ ಹೆಸರಿನಲ್ಲಿ ಡಿಎಂಆರ್ ಸಂಸ್ಥೆಯನ್ನು ಕೋಲಾರದಲ್ಲಿ ಸ್ಥಾಪಿಸಲಾಗಿದೆ. ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದವರು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ಸುಗಟೂರಿನ ಧರಣಿ ಮೊದಲ ಪ್ರಯತ್ನದಲ್ಲಿ ಯುಪಿಎಸ್‌ಸಿ ಸಂದರ್ಶನ ಎದುರಿಸಿ ಬಂದಿದ್ದಾರೆ‌’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮಾತನಾಡಿ, ‘ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯು ಟಿ–20 ಪಂದ್ಯವಲ್ಲ; ಟೆಸ್ಟ್ ಪಂದ್ಯ ಇದ್ದಂತೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇದಕ್ಕೆ ಸಹನೆ, ಸಮಯ ನಿರ್ವಹಣೆ ಬಹಳ ಮುಖ್ಯ’ ಎಂದರು.

ಯಾರೂ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಲು ಸಾಧ್ಯವಿಲ್ಲ. ಪ್ರತಿ ದಿನ ಓದಿದಬೇಕು. ಅದಕ್ಕೆ ಮನೋಭಾವ ಬಹಳ ಮಹತ್ವದ್ದು.‌ ಜೊತೆಗೆ ಸಿದ್ಧತೆ, ಯೋಜನೆಗೆ ಹೆಚ್ಚು ಒತ್ತು ‌ನೀಡಬೇಕು. ಪರೀಕ್ಷೆಯನ್ನು ‌ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ರಾವ್, ಕೋಲಾರದ ಜನತೆಗಾಗಿ ಡಿಎಂಆರ್ ಸಂಸ್ಥೆ ಕಟ್ಟಿದ ಡಿಸಿಪಿ ದೇವರಾಜ್ ಅವರ ಸಾಮಾಜಿಕ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಐಎಎಸ್ ಪರೀಕ್ಷೆಯಲ್ಲಿ 522 ರ‍್ಯಾಂಕ್‌ ಪಡೆದ ಮಧು, ಎಸ್‍ಐ ಹುದ್ದೆಗೆ ಆಯ್ಕೆಯಾದ ಜಯಸೂರ್ಯ, ಕಿರಣ್ ಹಾಗೂ ನಗರದ ಬಾಲಕಿಯರ ಸರ್ಕಾರಿ ಜೂನಿಯರ್‌ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು.

ವಕೀಲ ಕೆ.ವಿ.ಶಂಕರಪ್ಪ, ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷ ಎಂ.ಉದಯ ಕುಮಾರ್, ಪತ್ರಕರ್ತ ವಿ.ಮುನಿರಾಜು, ಜಿಲ್ಲಾ ಸಹಕಾರ ಒಕ್ಕೂಟದ ಮೂರಂಡಹಳ್ಳಿ ಇ.ಗೋಪಾಲಪ್ಪ, ವಂಶೋದಯ ಅಸ್ಪತ್ರೆಯ ಡಾ.ಅರವಿಂದ್, ಡಾ.ಶಂಕರ್, ಡಾ.ಬೀರೇಗೌಡ, ವೇದಾ, ಕೃಷಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪರಮೇಶ್ವರ್, ಸಹ ಪ್ರಾಧ್ಯಾಪಕ ಅರಿವು ಶಿವಪ್ಪ, ಮುಖಂಡ ಪಂಡಿತ್ ಮುನಿವೆಂಕಟಪ್ಪ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.‌

ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು

ದಿನಪತ್ರಿಕೆ ಓದಿನಿಂದ ಯಶಸ್ಸು

‘ದಿನಪತ್ರಿಕೆಗಳಲ್ಲಿ ವಿಶ್ವದ ಎಲ್ಲಾ ಜ್ಞಾನ ಸಿಗುತ್ತದೆ. ಹೀಗಾಗಿ ನಿತ್ಯ ಪತ್ರಿಕೆಗಳನ್ನು ಓದುವುದರಿಂದ ಯಶಸ್ಸು ಸಿಗುತ್ತದೆ. ಕೇವಲ ಏಳೆಂಟು ರೂಪಾಯಿ ನೀಡಿ ಓದಿದರೆ ವಿದೇಶ ದೇಶ ವಾಣಿಜ್ಯ ಕ್ರೀಡೆ ವಿಜ್ಞಾನ… ಹೀಗೆ ಹಲವು ವಿಚಾರಗಳಲ್ಲಿ ಜ್ಞಾನ ಸಂಪಾದಿಸಬಹುದು. ಸಂಪಾದಕೀಯ ಓದುವುದರಿಂದ ಜ್ಞಾನ ವಿಸ್ತಾರವಾಗುತ್ತದೆ. ಓದಿದ್ದನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ‌. ಸಲಹೆ ನೀಡಿದರು. ಪೋಷಕರು ತಮ್ಮ ಮಕ್ಕಳಿಗೆ ಪುಸ್ತಕ ದಿನಪತ್ರಿಕೆ ಕೊಡಿಸುವುದರಿಂದ ಜ್ಞಾನದಕೋಟೆ ಕಟ್ಟಿಕೊಳ್ಳಲು ಸಹಾಯವಾಗುತ್ತದೆ. ಜ್ಞಾನದ ಕೋಟೆಯನ್ನು ಯಾರಿಂದಲೂ ಬೇಧಿಸಲು ಸಾಧ್ಯವಿಲ್ಲ ಎಂದರು.

ಚಿನ್ನ ಬಂಗಾರ ಎಂದವರಿಗೆ ಮರುಳಾಗಬೇಡಿ

‘ಮಕ್ಕಳು ಪೋಷಕರ ಬಗ್ಗೆ ‌ಹೆಚ್ಚು ಕಾಳಜಿ‌ ವಹಿಸಬೇಕು. ತಮಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ತಂದೆ‌ ತಾಯಿಯನ್ನು ಯಾವತ್ತೂ ಮರೆಯಬೇಡಿ. ಈಗ ಯಾರೋ ಸಿಕ್ಕಿ ‌ಚಿನ್ನ‌ ಬಂಗಾರ ಎಂದು ಪ್ರೀತಿಸಲು ಬಂದರೆ‌ ಮರುಳಾಗಬೇಡಿ. ಅವರಿಗೆ ಪೋಷಕರನ್ನು ಕಡೆಗಣಿಸಬೇಡಿ. ಪೋಷಕರು ಎಂದೂ ತಮ್ಮನ್ನು ಕಡೆಗಣಿಸಲ್ಲ.‌ ಪೋಷಕರಿಗೆ ಸದಾ ಚಿರ ಋಣಿಯಾಗಿರಬೇಕು’ ಎಂದು ನಿಖಿಲ್‌ ಕಿವಿಮಾತು ಹೇಳಿದರು.

ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು. ಟೀಕೆ ಟಿಪ್ಪಣಿಗಳಿಗೆ ಕಿವಿಗೊಡದೆ ಸಕಾರಾತ್ಮಕ ಮನೋಭಾವ ಚಿಂತನೆಗಳೊಂದಿಗೆ ಸಿದ್ಧತೆ ನಡೆಸಿದರೆ ಯಾವುದೇ ಸಾಧನೆ ಮಾಡಲು ಸಾಧ್ಯ.
-ಡಿ.ದೇವರಾಜ್‌, ಐಪಿಎಸ್‌ ಅಧಿಕಾರಿ
ಐಎಎಸ್ ಐಪಿಎಸ್ ಅಧಿಕಾರಿಯಾದರೆ ಏನೇನೋ ಮಾಡಿಬಿಡಬಹುದು‌ ಎಂಬ ಭ್ರಮೆ ಬೇಡ. ಬಹಳ ನಿರೀಕ್ಷೆ‌ ಇಟ್ಟುಕೊಂಡು ಸಿದ್ಧತೆ ನಡೆಸಬೇಡಿ. ಯಾರೂ ರೆಡ್ ‌ಕಾರ್ಪೆಟ್ ಹಾಕಲ್ಲ. ಭ್ರಮೆಗಳಿಂದ ಆಚೆ ಬನ್ನಿ.
-ಎಂ.ಆರ್‌.ರವಿ, ಜಿಲ್ಲಾಧಿಕಾರಿ
ದೇವರಾಜ್ ಅವರ ಶೈಲಿ ನೋಡಿ ಪೊಲೀಸ್ ಆಗಬೇಕು ಎಂಬ ಆಸೆ ಬಂತು. ಐಪಿಎಸ್ ಆದ ನಂತರ‌ ದೇವರಾಜ್ ಅವರನ್ನು ಭೇಟಿ ಆಗಿದ್ದೆ. ಈಗ ಅವರ ಊರಿನಲ್ಲೇ ಎಸ್ಪಿ ಆಗಿದ್ದೇನೆ.
-ನಿಖಿಲ್‌ ಬಿ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.