ADVERTISEMENT

ಬಂಗಾರಪೇಟೆ: ಕೆರೆಗಳಲ್ಲಿ ಅಕ್ರಮ ಮಣ್ಣು ಸಾಗಣೆ ಅವ್ಯಾಹತ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 4:29 IST
Last Updated 21 ಜುಲೈ 2025, 4:29 IST
ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಗ್ರಾಮದಲ್ಲಿ ರಾಮಚಂದ್ರ ರಾಯರ ಕೆರೆಯಲ್ಲಿ ಅಕ್ರಮವಾಗಿ ಬಾರಿ ವಾಹನಗಳಿಂದ ಮಣ್ಣು ತೆಗೆಯುತ್ತಿರುವುದು
ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಗ್ರಾಮದಲ್ಲಿ ರಾಮಚಂದ್ರ ರಾಯರ ಕೆರೆಯಲ್ಲಿ ಅಕ್ರಮವಾಗಿ ಬಾರಿ ವಾಹನಗಳಿಂದ ಮಣ್ಣು ತೆಗೆಯುತ್ತಿರುವುದು   

ಬಂಗಾರಪೇಟೆ: ಕೆರೆಗಳಲ್ಲಿ ಅಕ್ರಮವಾಗಿ ಮಣ್ಣು ಸಾಗಿಸುವುದು ಪರಿಸರಕ್ಕೆ ಹಾನಿಕಾರಕ. ಕೆರೆಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗುವುದಲ್ಲದೆ ನೀರು ಸಂಗ್ರಹ ಸಾಮರ್ಥ್ಯ ಕಡಿಮೆ ಆಗಲಿದೆ. ಕೆರೆಗಳಲ್ಲಿ ಅಕ್ರಮವಾಗಿ ಮಣ್ಣು ದಂಧೆ ನಡೆಯುತ್ತಿರುವ ಬಗ್ಗೆ ದೂರು ನೀಡಿದರು ಅಧಿಕಾರಿಗಳು ನಿರ್ಲಕ್ಷ್ಯದಿಂದಾಗಿ ಕೆರೆ ಸ್ವರೂಪ ಕಳೆದುಕೊಳ್ಳುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪ. 

ತಾಲ್ಲೂಕಿನ ಬೂದಿಕೋಟೆ ರಾಮಚಂದ್ರ ರಾಯರಕೆರೆ (ದೊರಕೆರೆ) ಹಾಗೂ ತಾಲ್ಲೂಕಿನ ಇತರ ಕೆರೆಗಳಲ್ಲಿ ಅಧಿಕಾರಿಗಳ ಅನುಮತಿ ಇಲ್ಲದೆ ಕೆರೆಗಳಿಂದ ಮಣ್ಣು ತೆಗೆದು ಇಟ್ಟಿಗೆ ಕಾರ್ಖಾನೆ, ಖಾಸಗಿ ಲೇಔಟ್‌ ನಿರ್ಮಾಣ ಮತ್ತು ತೋಟಗಳಿಗೆ ಸಾಗಿಸಲಾಗುತ್ತಿದೆ. ಕೇರಳ ರಾಜ್ಯಕ್ಕೆ ಮಣ್ಣು ಮಾರಾಟ ಮಾಡುತ್ತಿದ್ದು ಅಧಿಕಾರಿಗಳು ಜಾಣ ಮೌನ ಪ್ರದರ್ಶಿಸುತ್ತಿದ್ದಾರೆ.

ಕೆಲವರು ಹಣಕ್ಕಾಗಿ ಕೆರೆಗಳಲ್ಲಿ ಮಣ್ಣು ತೆಗೆದು ಮಾರಾಟ ಮಾಡುವ ದಂಧೆ ನಡೆಸುತ್ತಿದ್ದಾರೆ. ಇದು ಪರಿಸರಕ್ಕೆ ಹಾನಿಕರ ಮಾತ್ರವಲ್ಲದೆ ಕೆರೆಗಳ ನಾಶಕ್ಕೆ ಕಾರಣವಾಗಿದೆ. ಈ ಅಕ್ರಮ ಚಟುವಟಿಕೆ ತಡೆಯಲು ಅಧಿಕಾರಿಗಳು ಕಠಿಣ ಕ್ರಮಕೈಗೊಳ್ಳಬೇಕು ಮತ್ತು ಅಕ್ರಮವಾಗಿ ಮಣ್ಣು ಸಾಗಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ADVERTISEMENT

ಕೆರೆಗಳು ಗ್ರಾಮೀಣ ಭಾಗದ ಜನರ ಜೀವನಾಡಿ. ಆದರೆ, ಮಣ್ಣು ಅವೈಜ್ಞಾನಿಕವಾಗಿ ಕೆರೆಗಳಿಂದ ತೆಗೆಯಲಾಗುತ್ತಿದೆ. ಹೆಚ್ಚಿನ ಆಳದವರೆಗೂ ಮಣ್ಣು ತೆಗೆದಿರುವುದರಿಂದ ಮೂಕ ಪ್ರಾಣಿಗಳು ಹಾಗೂ ಜಾನುವಾರು ಕೆರೆಗಳಲ್ಲಿ ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ನೀರು ಕುಡಿಯಲು ಕೆರೆಗೆ ಇಳಿದರೆ ಪ್ರಾಣಿಗಳು ಸಾವಿಗೆ ಸಿಲುಕುವ ಸಾಧ್ಯತೆ ಇದೆ. ಮಕ್ಕಳು, ಯುವಕರು ಯಾರಾದರೂ ಕೆರೆ ಪಾಲಾದರೆ ಅವರ ಶವ ಹುಡುಕಲು ಕಷ್ಟವಾಗುತ್ತದೆ ಎಂದರು.

ಮಣ್ಣನ್ನು ಸಾಗಿಸಿ ಮಾರಾಟ ಮಾಡುವ ದಂಧೆ ಅವ್ಯಾಹತವಾಗಿ ನಡೆದಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿ, ಸಿಬ್ಬಂದಿ ಇದನ್ನು ತಡೆಯಲು ಯಾವುದೇ ಕ್ರಮಕೈಗೊಳ್ಳದೆ ಕಂಡೂ ಕಾಣದಂತೆ ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ. ಈ ಅಕ್ರಮ ಚಟುವಟಿಕೆ ತಡೆಯಲು ಅಧಿಕಾರಿಗಳು ಕಠಿಣ ಕ್ರಮಕೈಗೊಳ್ಳಬೇಕು ಮತ್ತು ಅಕ್ರಮವಾಗಿ ಮಣ್ಣು ಸಾಗಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಗ್ರಾಮದಲ್ಲಿ ರಾಮಚಂದ್ರ ರಾಯರ ಕೆರೆಯಲ್ಲಿ ಅಕ್ರಮವಾಗಿ ಬಾರಿ ವಾಹನಗಳಿಂದ ಮಣ್ಣು ತೆಗೆಯುತ್ತಿರುವುದು

ಮಣ್ಣು ತೆಗೆಯಲು ಇರುವ ನಿಯಮಗಳೇನು?: ಕಂದಾಯ ಇಲಾಖೆ ನಿಯಮಗಳ ಪ್ರಕಾರ ಕೆರೆಗಳಲ್ಲಿ ನಾಲ್ಕು ಅಡಿಗಿಂತಲೂ ಹೆಚ್ಚು ಆಳವಾಗಿ ಹಾಗೂ ನೇರವಾಗಿ ಮಣ್ಣು ತೆಗೆಯುವಂತಿಲ್ಲ. ಸರ್ಕಾರ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಅನುಮತಿ ಹಾಗೂ ಪರವಾನಗಿ ಪಡೆಯದೆ ಮಣ್ಣು ತೆಗೆಯುವಂತಿಲ್ಲ. ಜೆಸಿಬಿಯಂತಹ ಭಾರಿ ಯಂತ್ರಗಳನ್ನು ಕೆರೆಗಳಿಗೆ ಇಳಿಸುವಂತಿಲ್ಲ. ಇಷ್ಟೆಲ್ಲ ನಿಯಮಗಳಿದ್ದರೂ ಕೆಲ ಪ್ರಭಾವಿಗಳಿಂದ ಅವ್ಯಾಹತವಾಗಿ ಮಣ್ಣು ದಂಧೆ ನಡೆಯುತ್ತಿದೆ. ಕೆರೆಗಳಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವುದು ಒಂದು ಗಂಭೀರ ಸಮಸ್ಯೆಯಾಗಿದೆ. ಇದು ಪರಿಸರಕ್ಕೆ ಹಾನಿ ಮಾಡುವುದಲ್ಲದೆ ಅಂತರ್ಜಲ ಮಟ್ಟ ಕಡಿಮೆ ಮಾಡುತ್ತದೆ ಮತ್ತು ನೀರಿನ ಮೂಲ ಹಾಳು ಮಾಡುತ್ತದೆ ಎನ್ನುತ್ತಾರೆ ದಲಿತ ಸಮಾಜ ಸೇನೆ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್‌.

ಕೆರೆಯಲ್ಲಿ ಮಣ್ಣು ತೆಗೆಯುವ ದಂಧೆ ತಡೆಯಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಕ್ರಮ ಮಣ್ಣು ತೆಗೆಯುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹುಣಸನಹಳ್ಳಿ
ಎನ್.ವೆಂಕಟೇಶ್ ದಲಿತ ರೈತ ಸೇನೆ ರಾಜ್ಯಾಧ್ಯಕ್ಷ
ಅಕ್ರಮ ಮಣ್ಣು ತೆಗೆಯುವಿಕೆಯು ನೀರಿನ ಕೊರತೆಗೆ ಕಾರಣವಾಗಬಹುದು ಹಾಗೂ ಜಲ ಮೂಲಗಳ ನಾಶವಾಗುತ್ತದೆ
ಕೆಸರನಹಳ್ಳಿ ಆನಂದ್
ಕೆರೆಗಳಲ್ಲಿ ಅಕ್ರಮ ಮಣ್ಣು ದಂಧೆ ತಡೆಯಲು ಗ್ರಾಮಸ್ಥರು ಮತ್ತು ಪರಿಸರ ಪ್ರೇಮಿಗಳು ಜಾಗೃತರಾಗಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬೇಕು
ನಾರಾಯಣಗೌಡ ರೈತ ಸಂಘದ ಉಪಾಧ್ಯಕ್ಷ
ವಾರಾಂತ್ಯದ ಯಾವುದೇ ಅಧಿಕಾರಿಗಳು ಪರಿಶೀಲನೆಗೆ ಬರುವುದಿಲ್ಲ ಎಂದು ಕೆರೆಗಳಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವುದನ್ನು ರೂಢಿಯಲ್ಲಿದೆ. ಇದನ್ನು ತಡೆಯುವ ಕೆಲಸ ಆಗಬೇಕು
ಮುನಿಕೃಷ್ಣಪ್ಪ ರೈತ ಸಂಘದ ಅಧ್ಯಕ್ಷ
ಕೆರೆಗಳಲ್ಲಿ ಅನುಮತಿ ಇಲ್ಲದೆ ಕಾನೂನು ಬಾಹಿರವಾಗಿ ಮಣ್ಣು ತೆಗೆಯುವವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು
ಎಸ್.ವೆಂಕಟೇಶಪ್ಪ ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.