ADVERTISEMENT

ಮಣ್ಣಿನ ಕೊಡಕ್ಕೆ ಹೆಚ್ಚಿದ ಬೇಡಿಕೆ

ವಿ.ರಾಜಗೋಪಾಲ್
Published 12 ಏಪ್ರಿಲ್ 2021, 5:15 IST
Last Updated 12 ಏಪ್ರಿಲ್ 2021, 5:15 IST
ಕೊಡಗಳ ಮಾರಾಟದಲ್ಲಿ ನಿರತರಾಗಿರುವ ಮೋಟಮ್ಮ
ಕೊಡಗಳ ಮಾರಾಟದಲ್ಲಿ ನಿರತರಾಗಿರುವ ಮೋಟಮ್ಮ   

ಮಾಲೂರು: ಬಿಸಿಲಿನ ತಾಪ ಹೆಚ್ಚಿದಂತೆ ಮಣ್ಣಿನ ಕೊಡಕ್ಕೆ ಬೇಡಿಕೆ ಹೆಚ್ಚಾಗಿದ್ದು, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಜನತೆ ಕುಡಿಯುವ ನೀರು ಸಂಗ್ರಹಿಸಲು ಮಣ್ಣಿನ ಕೊಡಗಳ ಖರೀದಿಯತ್ತ ಮುಖ ಮಾಡಿದ್ದಾರೆ.

ಅನಾದಿಕಾಲದಿಂದಲೂ ಬಳಕೆಯಾಗುತ್ತಿರುವ ಬಡವರ ಫ್ರಿಡ್ಜ್‌ಗೆ (ಮಣ್ಣಿನ ಕೊಡ) ಮತ್ತೆ ಬೇಡಿಕೆ ಕುದುರಿದೆ. ಫೈಬರ್‌ ಫ್ರಿಡ್ಜ್‌, ಕೂಲರ್‌ಗಳ ನಡುವೆಯೂ ತನ್ನ ಬೇಡಿಕೆ ಉಳಿಸಿಕೊಂಡಿದೆ. ಬಿರುಬೇಸಿಗೆಯಲ್ಲಿ ನೀರು ಕಾಯಿಸಬೇಕಾಗಿಲ್ಲ. ವಾತಾವರಣದ ತಾಪಮಾನಕ್ಕೆ ಬೆಚ್ಚಗಾಗುತ್ತದೆ. ಬಾಯಾರಿದಾಗ ಬಿಸಿನೀರು ರುಚಿಸುವುದಿಲ್ಲ. ಹಾಗಾಗಿ ಪ್ರತಿಯೊಬ್ಬರು ತಣ್ಣನೆಯ ನೀರು ಕುಡಿಯಲು ಬಯಸುತ್ತಾರೆ.

ಮಡಿಕೆ ಬೇಸಿಗೆಯಲ್ಲಿ ನೀರನ್ನು ತಣ್ಣಗೆ ಇಡಬಲ್ಲ ಸಾಂಪ್ರದಾಯಿಕ ಸಾಧನ. ಒಮ್ಮೆ ಖರೀದಿಸಿದರೆ ಸಾಕು ಅದು ಇರುವಷ್ಟು ದಿನ ನೀರನ್ನು ತಣ್ಣಗೆ ಇಡುತ್ತದೆ. ಹಿಂದೆ ಕುಂಬಾರಿಕೆ ನಡೆಯುತ್ತಿತ್ತು. ಆಗ ಮನೆಗೆ ಅಗತ್ಯವಿರುವ ಮಡಿಕೆಗಳನ್ನು ಕುಂಬಾರರಿಂದ ನೇರವಾಗಿ ಖರೀದಿಸಿ ತಂದು ಬಳಸಲಾಗುತ್ತಿತ್ತು. ಬದಲಾದ ಪರಿಸ್ಥಿತಿಯಲ್ಲಿ ಕುಂಬಾರಿಕೆ ವೃತ್ತಿ ಮಹತ್ವ ಕಳೆದುಕೊಂಡಿದೆ. ಆದರೂ, ಬೇಸಿಗೆಯಲ್ಲಿ ಕೊಡಗಳ ಬೇಡಿಕೆ ಕಡಿಮೆಯಾಗುವುದಿಲ್ಲ.

ADVERTISEMENT

ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಜನ ವಿವಿಧ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಅದರಲ್ಲೂ ಮಡಿಕೆಗಳನ್ನು ಖರೀದಿಸುತ್ತಿದ್ದಾರೆ. ಬೇಸಿಗೆ ಬೇಗೆ ಹೆಚ್ಚಿರುವುದರಿಂದ ಮಡಿಕೆ ಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ.

ಬೆಲೆಯೂ ಹೆಚ್ಚೆಂಬ ಮಾತು ಕೇಳಿಬರುತ್ತಿದ್ದರೂ ಸಂತೆ ಹಾಗೂ ಮಾರುಕಟ್ಟೆಯಲ್ಲಿ ಮಾರಾಟ ಜೋರಾಗಿದೆ. ಕೊರೊನಾ ಭೀತಿಯಲ್ಲೂ ನಾಗರಿಕರು ಬಿಸಿಲಿನ ತಾಪ ನೀಗಿಸಿಕೊಳ್ಳಲು ಕೊಡಗಳ ಮೊರೆ ಹೋಗಿದ್ದಾರೆ. ಇದರಿಂದ ಕುಂಬಾರರ ವ್ಯಾಪಾರವೂ ಗರಿಗೆದರಿದೆ. ಈ ಹಿಂದೆ ಕಪ್ಪುಬಣ್ಣದ ಕೊಡಗಳನ್ನು ಮಾರಾಟ ಮಾಡಲಾಗುತ್ತಿತ್ತು. ಈಗ ಕೆಂಪು ಬಣ್ಣದ ಕೊಡಗಳು ಬಂದಿವೆ. ಕೊಡಕ್ಕೆ ನಲ್ಲಿ ಅಳವಡಿಸಲಾಗಿದೆ. ಹೂಜಿಗಳು ಸಹ ಲಭ್ಯ. ಕಲಾತ್ಮಕ ಕೊಡಗಳಿಗಾದರೆ ದುಪ್ಪಟ ಬೆಲೆ ತರಬೇಕಾಗುತ್ತದೆ. ಬೇಸಿಗೆ ಮುಗಿಯುವವರೆಗೂ ಮಣ್ಣಿನ ಕೊಡಗಳಿಗೆ ಬೇಡಿಕೆ ಇರುತ್ತದೆ.

‘ಬೇಸಿಗೆಯಲ್ಲಿ ಮಾತ್ರ ಮಡಿಕೆಗಳಿಗೆ ಬೇಡಿಕೆ ಬರುತ್ತದೆ. ಉಳಿದಂತೆ ಮೊಹರಂ ಹಬ್ಬ ಹಾಗೂ ಜಾತ್ರೆಗಳಲ್ಲಿ ಮಾರಾಟವಾಗುತ್ತವೆ. ಹಿಂದೆ ನಾವು ಮನೆಗಳಲ್ಲಿಯೇ ಮಡಿಕೆ ಮಾಡುತ್ತಿದ್ದೆವು. ಆದರೆ, ಈಗ ಬೇರೆ ಊರುಗಳಿಂದ ತಂದು ಮಾರಾಟ ಮಾಡುತ್ತಿದ್ದೇವೆ. ಒಂದು ಮಡಿಕೆಗೆ ₹ 150ರಿಂದ ₹ 170 ಇದೆ. ನಲ್ಲಿ ಅಳವಡಿಸಿರುವ ಮಡಿಕೆಯನ್ನು ₹ 250ರಿಂದ ₹ 300 ದರದಲ್ಲಿ ಮಾರಾಟ ಮಾಡುತ್ತಿದ್ದೇವೆ’ ಎನ್ನುತ್ತಾರೆಮಡಿಕೆ ವ್ಯಾಪಾರಿ ರಾಜಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.