ADVERTISEMENT

ಟಿ.ಚನ್ನಯ್ಯ ಸಂತೆ ಮೈದಾನದಲ್ಲಿ ಮೂಲಸೌಕರ್ಯ ಮರೀಚಿಕೆ: ವ್ಯಾಪಾರಿಗಳಿಗೆ ನಿತ್ಯನರಕ

ಸಮಸ್ಯೆಗಳ ಸರಮಾಲೆ: ನಗರಸಭೆಯ ಜಾಣಕುರುಡು

ಜೆ.ಆರ್.ಗಿರೀಶ್
Published 28 ಏಪ್ರಿಲ್ 2019, 19:30 IST
Last Updated 28 ಏಪ್ರಿಲ್ 2019, 19:30 IST
ಕೋಲಾರದ ಟಿ.ಚನ್ನಯ್ಯ ಸಂತೆ ಮೈದಾನ ಆವರಣವು ಮಳೆ ನೀರಿನಿಂದ ರಾಡಿಯಾಗಿರುವುದು.
ಕೋಲಾರದ ಟಿ.ಚನ್ನಯ್ಯ ಸಂತೆ ಮೈದಾನ ಆವರಣವು ಮಳೆ ನೀರಿನಿಂದ ರಾಡಿಯಾಗಿರುವುದು.   

ಕೋಲಾರ: ತುಂತುರು ಮಳೆ ಬಂದರೂ ಕೆಸರು ಗದ್ದೆಯಾಗುವ ನಗರದ ಟಿ.ಚನ್ನಯ್ಯ ಸಂತೆ ಮೈದಾನದಲ್ಲಿನ ವ್ಯಾಪಾರಿಗಳ ಬವಣೆ ಹೇಳತೀರದು. ರಸ್ತೆ, ವಿದ್ಯುತ್‌, ಕಟ್ಟಡ, ಶೌಚಾಲಯ ಹೀಗೆ ಪಟ್ಟಿ ಮಾಡಿದರೆ ಸಮಸ್ಯೆಗಳ ಸರಮಾಲೆಯೇ ಇಲ್ಲಿದ್ದು, ಮಾರುಕಟ್ಟೆಯು ವ್ಯಾಪಾರಿಗಳಿಗೆ ನಿತ್ಯ ನರಕವಾಗಿದೆ.

ನಗರದ ಹೃದಯ ಭಾಗದಲ್ಲಿರುವ ಸಂತೆ ಮೈದಾನವು ಸುಮಾರು 300 ವರ್ತಕರ ಕುಟುಂಬಗಳಿಗೆ ಅನ್ನದ ಮಾರ್ಗ ಕಲ್ಪಿಸಿದೆ. 1939ರಲ್ಲಿ ಆರಂಭವಾದ ಈ ಸಂತೆ ಮೈದಾನದಲ್ಲಿ 50 ಮಳಿಗೆಗಳಿವೆ. ಈ ಮಳಿಗೆಗಳಲ್ಲಿ ತರಕಾರಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದಾರೆ. ಮತ್ತೆ ಕೆಲ ವ್ಯಾಪಾರಿಗಳು ತಾತ್ಕಾಲಿಕ ನೆರಳಿನ ವ್ಯವಸ್ಥೆ ಮಾಡಿಕೊಂಡು ಹಾಗೂ ತಳ್ಳು ಗಾಡಿ ಇಟ್ಟುಕೊಂಡು ವಹಿವಾಟು ನಡೆಸುತ್ತಿದ್ದಾರೆ.

ವಾರದ ಏಳೂ ದಿನವು ಸಂತೆ ಮೈದಾನದಲ್ಲಿ ತರಕಾರಿ, ಸೊಪ್ಪು, ಹಣ್ಣು, ಮೀನು, ತೆಂಗಿನಕಾಯಿ ವಹಿವಾಟು ನಡೆಯುತ್ತದೆ. ಅಲ್ಲದೇ, ವಾರಕ್ಕೊಮ್ಮೆ ಗುರುವಾರ ವಿಶೇಷ ಸಂತೆ ಇರುತ್ತದೆ. ಸಂತೆಯು ನಗರದ ಕೇಂದ್ರ ಭಾಗದಲ್ಲಿರುವುದರಿಂದ ನಗರವಾಸಿಗಳಿಗೆ ತರಕಾರಿ, ಹಣ್ಣು ಹಂಪಲು ಖರೀದಿಸಲು ಅನುಕೂಲಕರವಾಗಿದೆ.

ADVERTISEMENT

ನಗರಸಭೆಯು ಈ ಸಂತೆ ಮೈದಾನದ ನಿರ್ವಹಣೆಯ ಜವಾಬ್ದಾರಿ ಹೊತ್ತಿದೆ. ಖಾಸಗಿ ಗುತ್ತಿಗೆದಾರರು ಹರಾಜು ಮೂಲಕ ನಗರಸಭೆಯಿಂದ ಅನುಮತಿ ಪಡೆದು ಸಂತೆ ಮೈದಾನದಲ್ಲಿನ ವರ್ತಕರಿಂದ ಸುಂಕ ವಸೂಲಿ ಮಾಡುತ್ತಾರೆ.

ಇಲ್ಲಿನ ಬಹುಪಾಲು ಮಳಿಗೆಗಳು ತುಂಬಾ ಹಳೆಯವಾಗಿದ್ದು, ಸಂಪೂರ್ಣ ಶಿಥಿಲಗೊಂಡಿವೆ. ತುಂತುರು ಮಳೆ ಬಂದರೂ ಮಳಿಗೆಗಳು ಸೋರುತ್ತಿದ್ದು, ವ್ಯಾಪಾರಿಗಳಿಗೆ ವಹಿವಾಟು ನಡೆಸುವುದೇ ಕಷ್ಟವಾಗಿದೆ. ಸಂತೆಯೊಳಗಿನ ರಸ್ತೆ ಕಚ್ಚಾ ರಸ್ತೆಯಾಗಿರುವ ಕಾರಣ ಮಳೆಗಾಲದಲ್ಲಿ ಸಂಪೂರ್ಣ ರಾಡಿಯಾಗುತ್ತದೆ. ಸಂತೆಗೆ ಬರುವ ಗ್ರಾಹಕರು ಈ ರಾಡಿ ರಸ್ತೆಯಲ್ಲಿ ಜಾರಿ ಬೀಳುವುದು ಸಾಮಾನ್ಯವಾಗಿದೆ.

ಮಳೆಗಾಲದಲ್ಲಿ ರಸ್ತೆ ಸಮಸ್ಯೆ ತೀವ್ರಗೊಳ್ಳುವುದರಿಂದ ಗ್ರಾಹಕರ ಸಂಖ್ಯೆ ಕುಸಿದು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ಸಂತೆ ಮೈದಾನದಲ್ಲಿ ನೀರಿನ ಸೌಲಭ್ಯವಿಲ್ಲದ ಕಾರಣ ವರ್ತಕರು ಹಣ ಕೊಟ್ಟು ನೀರು ಖರೀದಿಸುವ ಪರಿಸ್ಥಿತಿ ಇದೆ. ನಗರಸಭೆಯು ಸಂತೆಯಲ್ಲಿ ನೆರಳಿನ ವ್ಯವಸ್ಥೆ ಮಾಡದ ಕಾರಣ ವರ್ತಕರೇ ಟಾರ್ಪಲ್‌ ಕಟ್ಟಿಕೊಂಡು ವಹಿವಾಟು ನಡೆಸುತ್ತಿದ್ದಾರೆ.

ಪಾರ್ಕಿಂಗ್‌ ಸಮಸ್ಯೆ

ವ್ಯಾಪಾರಿಗಳ ಹಾಗೂ ಗ್ರಾಹಕರ ವಾಹನಗಳ ನಿಲುಗಡೆಗೆ ಸಂತೆಯೊಳಗೆ ಪ್ರತ್ಯೇಕ ಸ್ಥಳವಿಲ್ಲ. ಹೀಗಾಗಿ ಗ್ರಾಹಕರು ಸಂತೆ ಮುಂಭಾಗದ ಎಂ.ಬಿ.ರಸ್ತೆಯ ಅಕ್ಕಪಕ್ಕ ವಾಹನ ನಿಲುಗಡೆ ಮಾಡುವುದರಿಂದ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಹಬ್ಬ ಹಾಗೂ ಕೆಲ ವಿಶೇಷ ಸಂದರ್ಭಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿರುವ ಕಾರಣ ವಾಹನ ನಿಲುಗಡೆಗೆ ಸ್ಥಳವೇ ಸಿಗುವುದಿಲ್ಲ.

ಶೌಚಾಲಯ ಸಮಸ್ಯೆ

ಸಂತೆ ಆವರಣದಲ್ಲಿ ಶೌಚಾಲಯವಿದ್ದರೂ ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಹೀಗಾಗಿ ವ್ಯಾಪಾರಿಗಳು ಹಾಗೂ ವರ್ತಕರು ಅದರೊಳಗೆ ಹೋಗಲು ಹಿಂದೇಟು ಹಾಕುತ್ತಾರೆ. ಶೌಚಾಲಯದಲ್ಲಿ ಮಲ ಮೂತ್ರ ವಿಸರ್ಜನೆಗೆ ಹಣ ವಸೂಲಿ ಮಾಡಲಾಗುತ್ತಿದೆ. ಆದರೆ, ನಿಯಮಿತವಾಗಿ ಶೌಚಾಲಯ ಸ್ವಚ್ಛಗೊಳಿಸದ ಕಾರಣ ಗಬ್ಬೆದ್ದು ನಾರುತ್ತಿದೆ. ಮತ್ತೊಂದೆಡೆ ಶೌಚಾಲಯದಲ್ಲೂ ನೀರಿನ ಸಮಸ್ಯೆಯಿದೆ.

ಕಸದ ದುರ್ನಾತ

ಸಂತೆಯ ಯಾವುದೇ ಮಳಿಗೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ. ಸಂತೆ ಆವರಣದಲ್ಲಿ ತ್ಯಾಜ್ಯ ಸಂಗ್ರಹಣೆಗೆ ಕಸದ ತೊಟ್ಟಿ ನಿರ್ಮಿಸಿಲ್ಲ ಅಥವಾ ಡಬ್ಬಿಗಳನ್ನು ಅಳವಡಿಸಿಲ್ಲ. ವರ್ತಕರು ಕೊಳೆತ ತರಕಾರಿಗಳನ್ನು ಸಂತೆ ಮೈದಾನದ ತಡೆಗೋಡೆ ಬಳಿ ಹಾಗೂ ಮಳಿಗೆಗಳ ಅಕ್ಕಪಕ್ಕ ವಿಲೇವಾರಿ ಮಾಡುತ್ತಿದ್ದಾರೆ.

ತಡೆಗೋಡೆ ಪಕ್ಕ ರಾಶಿಯಾಗಿ ಬಿದ್ದಿರುವ ತರಕಾರಿ ತ್ಯಾಜ್ಯಕ್ಕೆ ಮಳೆ ನೀರು ಸೇರಿ ತ್ಯಾಜ್ಯ ಸ್ಥಳದಲ್ಲೇ ಕೊಳೆಯುತ್ತಿದೆ. ಇದರಿಂದ ದುರ್ನಾತ ಹೆಚ್ಚಿದ್ದು, ಸುತ್ತಮುತ್ತಲ ಪ್ರದೇಶ ಕೊಳೆಗೇರಿಯಂತಾಗಿದೆ. ಗ್ರಾಹಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ.

ಮೂಲಸೌಕರ್ಯ ಸಮಸ್ಯೆ ಪರಿಹರಿಸುವಂತೆ ವರ್ತಕರು ಹಲವು ಬಾರಿ ಮನವಿ ಸಲ್ಲಿಸಿದ್ದರೂ ನಗರಸಭೆ ಆಡಳಿತ ಯಂತ್ರ ಮೌನಕ್ಕೆ ಶರಣಾಗಿದೆ. ನಗರಸಭೆಯ ನಿರ್ಲಕ್ಷ್ಯದಿಂದ ವರ್ತಕರು ಹಾಗೂ ಗ್ರಾಹಕರು ಹೈರಾಣಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.