ಎಸ್.ಎನ್.ನಾರಾಯಣಸ್ವಾಮಿ ಮತ್ತು ರೂಪಕಲಾ ಶಶಿಧರ್
ಕೋಲಾರ: ಮುಂದಿನ ತಿಂಗಳು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಲಿದ್ದು, ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಚರ್ಚೆಗಳ ನಡುವೆಯೇ ಎಲ್ಲರ ಚಿತ್ತ ಜಿಲ್ಲೆಯ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಹಾಗೂ ರೂಪಕಲಾ ಶಶಿಧರ್ ಅವರತ್ತ ಹರಿದಿದೆ.
ಬಹುಕಾಲದ ಬೇಡಿಕೆಯಾಗಿರುವ ಕೋಲಾರ ಜಿಲ್ಲೆಯವರಿಗೇ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆಗೆ ಪುಷ್ಟಿ ಸಿಕ್ಕಿದೆ. ಸದ್ಯ ಇಬ್ಬರು ಸಚಿವರ ರಾಜೀನಾಮೆಯಿಂದ ಎರಡು ಸ್ಥಾನ ಖಾಲಿ ಇವೆ. ಅಲ್ಲದೆ ಕೆಲ ಸಚಿವರ ಕಾರ್ಯ ವೈಖರಿ ಬಗ್ಗೆ ಹೈಕಮಾಂಡ್ ಅಸಮಾಧಾನ ಹೊಂದಿದ್ದು, ಕೈಬಿಡುವ ಸಾಧ್ಯತೆ ಇದೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ನ ನಾಲ್ವರು ಶಾಸಕರಿದ್ದಾರೆ. ಆದಾಗ್ಯೂ ಹೊರಗಿನವರಿಗೆ (ಬೈರತಿ ಸುರೇಶ್) ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಲಾಗಿದೆ. ಉಸ್ತುವಾರಿಯು ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವಕ್ಕೆ ಸೀಮಿತವಾಗಿದ್ದಾರೆ. ಅಗತ್ಯವಿದ್ದಾಗ ಜನರ ಕೈಗೆ ಸಿಗುತ್ತಿಲ್ಲ, ಕುಂದುಕೊರತೆ ಆಲಿಸುತ್ತಿಲ್ಲ ಎಂಬುದಾಗಿ ಸಂಘ ಸಂಸ್ಥೆಗಳು ಪದೇಪದೇ ಆರೋಪ ಮಾಡುತ್ತಿವೆ.
ಹೀಗಾಗಿ, ಸ್ಥಳೀಯರಿಗೆ ಸ್ಥಾನ ನೀಡಬೇಕೆಂಬ ಕೂಗು ಬಹಳ ಹಿಂದಿನಿಂದಲೂ ಇದೆ.
ಈಗ ಸಚಿವ ಸ್ಥಾನ ಪಡೆಯಲು ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹಾಗೂ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಸ್ಪರ್ಧೆಯಲ್ಲಿದ್ದಾರೆ. ಸದ್ಯ ಇಬ್ಬರೂ ನಿಗಮ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸರ್ಕಾರ ರಚನೆಯಾದಾಗಲೇ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ನಾರಾಯಣಸ್ವಾಮಿ ಬಹಳ ಪ್ರಯತ್ನ ಹಾಕಿದ್ದರು. ಆದರೆ, ಆಗ ಸಾಧ್ಯವಾಗಿರಲಿಲ್ಲ. ದಲಿತ ಸಮುದಾಯದ ತಾವು ಸತತ ಮೂರು ಬಾರಿ ಶಾಸಕರಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿ ಕೂಡ. ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಅವಕಾಶ ನೀಡುವುದಾಗಿ ಹೈಕಮಾಂಡ್ ಭರವಸೆ ನೀಡಿದೆ ಎಂಬುದಾಗಿ ಅವರು ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಈ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಈಚೆಗೆ ಜಿಲ್ಲಾ ಹಾಲು ಒಕ್ಕೂಟದ (ಕೋಮುಲ್) ನಿರ್ದೇಶಕರೂ ಆಗಿರುವ ಅವರು ಒಕ್ಕೂಟದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು ಇಟ್ಟಿದ್ದರು. ಆದರೆ, ಸ್ವಪಕ್ಷೀಯ ಶಾಸಕ ಮಾಲೂರಿನ ಕೆ.ವೈ.ನಂಜೇಗೌಡ ಪಟ್ಟು ಬಿಡಲಿಲ್ಲ. ಈ ವಿಚಾರ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅಂಗಳ ತಲುಪಿತ್ತು. ಕೊನೆಯಲ್ಲಿ ವರಿಷ್ಠರ ಮಾತು ಕೇಳಿ ನಾರಾಯಣಸ್ವಾಮಿ ಒಂದು ಹೆಜ್ಜೆ ಹಿಂದೆ ಸರಿದಿದ್ದರು.
ಈಗ ಅವರು ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಬಹಳ ಪ್ರಯತ್ನ ಹಾಕುತ್ತಿದ್ದಾರೆ. ಪದೇಪದೇ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗುತ್ತಿದ್ದಾರೆ.
ಇತ್ತ ರೂಪಕಲಾ ಕೂಡ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಮೌನವಾಗಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಸತತ ಎರಡು ಸಲ ಗೆದ್ದಿರುವ ಅವರು ಮಹಿಳಾ ಕೋಟಾದಲ್ಲಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್ ನ ಮಹಿಳಾ ಶಾಸಕಿಯರಲ್ಲಿ ಸದ್ಯ ಲಕ್ಷ್ಮಿ ಹೆಬ್ಬಾಳ್ಕರ್ ಮಾತ್ರ ಸಚಿವರಾಗಿದ್ದಾರೆ.
ತಂದೆ ಕೆ.ಎಚ್.ಮುನಿಯಪ್ಪ ಅವರು ಸಚಿವರಾಗಿರುವುದರಿಂದ ಮಗಳಿಗೂ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸ್ಥಾನ ಕಲ್ಪಿಸುವುದು ಅನುಮಾನ. ಆದರೆ, ಸ್ವತಃ ಮುನಿಯಪ್ಪ ಹೇಳಿದಂತೆ ಎರಡೂವರೆ ವರ್ಷದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ರೂಪಕಲಾ ಅವರಿಗೆ ಅವಕಾಶ ಬಹುತೇಕ ನಿಚ್ಚಳ ಎನ್ನಬಹುದು.
ಇನ್ಜು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ತಮ್ಮ ಸಮುದಾಯದಿಂದ ಇಡೀ ದೇಶದಲ್ಲಿ ಇರುವುದು ತಾವೊಬ್ಬರೇ ಶಾಸಕ ಎಂಬುದಾಗಿ ಅವರು ಹೇಳಿಕೊಳ್ಳುತ್ತಿದ್ದಾರೆ. ಇನ್ನು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಆಗಲಿ, ಮುಖ್ಯಮಂತ್ರಿ ಆಗಲಿ ಯಾವುದೇ ಸುಳಿವು ನೀಡಿಲ್ಲ. ಆದರೂ ಪಕ್ಷದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಮಾತು ಉಳಿಸಿಕೊಳ್ಳುವರೇ ಮುನಿಯಪ್ಪ?
ಕಾಂಗ್ರೆಸ್ ಸರ್ಕಾರ ಎರಡೂವರೆ ಪೂರೈಸಿದ ಬಳಿಕ ತಮ್ಮನ್ನು ಸೇರಿದಂತೆ ಹಿರಿಯ ಸಚಿವರು ರಾಜೀನಾಮೆ ನೀಡಿ ಉಳಿದವರಿಗೆ ಅವಕಾಶ ಮಾಡಿಕೊಡಬೇಕೆಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಬಹಳ ಹಿಂದೆಯೇ ಹೇಳಿದ್ದರು. ಮುಂದಿನ ತಿಂಗಳು ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ಆಗಲಿದೆ. ಹೀಗಾಗಿ ಮುನಿಯಪ್ಪ ತಮ್ಮ ಮಾತು ಉಳಿಸಿಕೊಳ್ಳುವರೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ನೆಲೆಸಿದೆ.
ಕಾಂಗ್ರೆಸ್ ಬೀದಿಜಗಳ ಮುಳುವಾಗುವುದೇ?
ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಎರಡು ಬಣವಾಗಿ ನಡೆಯುತ್ತಿರುವ ಬೀದಿಜಗಳ ಸಚಿವ ಸ್ಥಾನಕ್ಕೆ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಘಟಬಂಧನ್ ನಲ್ಲಿ (ಕೆ.ಆರ್.ರಮೇಶ್ ಕುಮಾರ್ ಬಣ) ಗುರುತಿಸಿಕೊಂಡಿರುವ ಶಾಸಕರಾದ ಕೆ.ವೈ.ನಂಜೇಗೌಡ ಕೊತ್ತೂರು ಮಂಜುನಾಥ್ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಹಾಗೂ ಕೆ.ಎಚ್. ಮುನಿಯಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ರೂಪಕಲಾ ಪರಸ್ಪರ ಅಂತರ ಕಾಯ್ದುಕೊಂಡಿದ್ದಾರೆ. ಹಲವಾರು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಅದರಲ್ಲೂ ನಂಜೇಗೌಡ ವಿರುದ್ಧ ನಾರಾಯಣಸ್ವಾಮಿ ಮುಗಿಬಿದ್ದಿದ್ದಾರೆ. ಈ ವಿಚಾರ ಹೈಕಮಾಂಡ್‌ಗೂ ಗೊತ್ತಿದೆ. ಹೀಗಾಗಿ ಸಚಿವ ಸ್ಥಾನ ಸಿಗುವ ವಿಚಾರ ಕಗ್ಗಂಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.