ADVERTISEMENT

ಕಲಬೆರಕೆ ಹಾಲು | ಚಿಂತಾಮಣಿಗೂ ನಂಟು: ಮುಂದುವರೆದ ತನಿಖೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 6:01 IST
Last Updated 19 ಜನವರಿ 2026, 6:01 IST
ಕೆಜಿಎಫ್‌ ತಾಲ್ಲೂಕು ಬಳ್ಳಂಗೆರೆ ಗ್ರಾಮದ ತೋಟದ ಮನೆಯಲ್ಲಿ ಈಚೆಗೆ ವಶಪಡಿಸಿಕೊಂಡ ನಕಲಿ ಹಾಲು
ಕೆಜಿಎಫ್‌ ತಾಲ್ಲೂಕು ಬಳ್ಳಂಗೆರೆ ಗ್ರಾಮದ ತೋಟದ ಮನೆಯಲ್ಲಿ ಈಚೆಗೆ ವಶಪಡಿಸಿಕೊಂಡ ನಕಲಿ ಹಾಲು   

ಕೆಜಿಎಫ್‌: ನಕಲಿ ಹಾಲು ತಯಾರಿಕೆಗೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಚಿಂತಾಮಣಿ ತಾಲ್ಲೂಕಿನ ರಾಜಾರೆಡ್ಡಿ (55) ಎಂಬಾತನನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ ಒಂಬತ್ತಕ್ಕೇರಿದೆ. ಎಲ್ಲಾ ಆರೋಪಿಗಳು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.

ತಾಲ್ಲೂಕಿನ ಜನತೆಗೆ ಆತಂಕ ತಂದಿದ್ದ ನಕಲಿ ಹಾಲು ತಯಾರಿಕಾ ಜಾಲವನ್ನು ಪೊಲೀಸರು ಬೇಧಿಸಿದಾಗ, ಪ್ರಕರಣದಲ್ಲಿ ಇನ್ನೂ ಸಾಕಷ್ಟು ಮಂದಿ ಇರಬಹುದೆಂಬ ಶಂಕೆ ಇದ್ದು, ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ಶಿವಾಂಶು ರಜಪೂತ್‌ ಹೇಳಿದ್ದರು. ಈ ಹಿನ್ನೆಲೆ ಕೆಎಂಎಫ್‌ ಹಾಲು ಸರಬರಾಜು ಮಾಡುತ್ತಿದ್ದ ಹಾಲು ಸಾಗಾಣಿಕೆ ಗುತ್ತಿಗೆದಾರನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಹಾಲು ಉತ್ಪಾದನೆ ಮಾಡಲು ಪಾಮ್‌ ಆಯಿಲ್‌, ನಂದಿನಿಗೆ ಸೇರಿದ ಹಾಲಿನ ಪೌಡರ್‌ ಮತ್ತಿತರ ರಾಸಾಯನಿಕ ವಸ್ತುಗಳನ್ನು ಪೊಲೀಸರು ಈಚೆಗೆ ನಗರದ ಹೊರವಲಯದ ಬಳ್ಳಂಗೆರೆ ಗ್ರಾಮದ ತೋಟದ ಮನೆಯಲ್ಲಿ ವಶಪಡಿಸಿಕೊಂಡಿದ್ದರು. ಮಾರಾಟ ಮಾಡಲು ಸಾಧ್ಯವಾಗದ ನಂದಿನಿಗೆ ಸೇರಿದ 390 ಪಾಕೆಟ್‌ ಹಾಲಿನ ಪುಡಿ ಸಿಕ್ಕಿರುವುದರ ಹಿಂದೆ ಯಾರ್‍ಯಾರ ಕೈವಾಡ ಇದೆ ಎಂಬುವುದರ ಕುರಿತು ಪೊಲೀಸರು ತನಿಖೆಯನ್ನು ಚುರುಕು ಮಾಡಿದ್ದಾರೆ.

ADVERTISEMENT

ಪೌಡರ್‌ ಹಾಲಿಗೆ ಎಣ್ಣೆಯನ್ನು ಮಿಶ್ರಣ ಮಾಡಿ, ಒಂದು ಲೀಟರ್‌ನಿಂದ ಇಪ್ಪತ್ತು ಲೀಟರ್‌ ಹಾಲು ತಯಾರು ಮಾಡಲಾಗುತ್ತಿತ್ತು. ಇದನ್ನು ಡೇರಿಗೆ ಸಾಗಾಣಿ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಹುಡುಕುತ್ತಿದ್ದಾರೆ. ಅವರು ಯಾವ ಡೇರಿಗೆ ಹಾಲನ್ನು ಹಾಕುತ್ತಿದ್ದರು. ಅದು ಯಾವ ಹಾಲಿನ ಘಟಕಕ್ಕೆ ಹೋಗುತ್ತಿತ್ತು ಎಂಬುದರ ಕುರಿತು ತನಿಖೆ ಮುಂದುವರೆದಿದೆ.

ಈ ಮಧ್ಯೆ ನಂದಿನಿ ಹಾಲಿನ ಪುಡಿ ಒಂದೆಡೆ ಸಂಗ್ರಹವಾಗಿರುವುದು ಕೂಡ ತನಿಖೆಯ ಪ್ರಮುಖ ವಿಷಯವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಸಾದಲಿಯ ಕೆಎಂಎಫ್‌ ಘಟಕದಿಂದ ಹಾಲಿನ ಪುಡಿ ಸರಬರಾಜು ಆಗುತ್ತಿತ್ತು. ಎಲ್ಲಿಂದ ಇಷ್ಟು ಪ್ರಮಾಣದ ಹಾಲಿನ ಪುಡಿ ಕಳ್ಳತನವಾಗಿದೆ. ಇಲ್ಲವೇ ಯಾವ ಅಧಿಕಾರಿಗಳ ಕೈವಾಡ ಇದೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಅಂಗನವಾಡಿಗಳಲ್ಲಿ 3 ರಿಂದ 6 ವರ್ಷದ ಮಕ್ಕಳಿಗೆ ಪ್ರತಿನಿತ್ಯ ಹಾಲಿನ ಪುಡಿಯಿಂದ ಹಾಲು ಮಾಡಿ, ಕುಡಿಯಲು ನೀಡಲಾಗುತ್ತದೆ. ಗರ್ಭಿಣಿ ಸ್ತ್ರೀಯರಿಗಾಗಿ ಅಂಗನವಾಡಿಯಲ್ಲಿ ನೀಡಲಾಗುತ್ತದೆ. ಅಂಗನವಾಡಿಗಳಿಗೆ ಅರ್ಧ ಕೆಜಿ ಹಾಲಿನ ಪುಡಿ ನೀಡಿದರೆ, ಶಾಲೆಗಳಿಗೆ ಒಂದು ಕೆಜಿ ಹಾಲಿನಪುಡಿ ಪೊಟ್ಟಣವನ್ನು ನೀಡಲಾಗುತ್ತಿದೆ. ಪೋಷಣ್‌ ಆ್ಯಪ್‌ ಮೂಲಕ ಪ್ರತಿನಿತ್ಯ ಎಲ್ಲಾ ಪೌಷ್ಠಿಕಾಂಶಗಳು ದಾಖಲಾಗುತ್ತಿರುವುದರಿಂದ ದುರುಪಯೋಗವಾಗುವ ಸಾಧ್ಯತೆ ಕಡಿಮೆ ಎಂಬುದು ಅಧಿಕಾರಿಗಳ ಮಾತಾಗಿದೆ.

ಜೊತೆಗೆ ಅಂಗನವಾಡಿಗಳಿಗೆ ಸರಬರಾಜು ಆಗುವ ಮಿಲೆಟ್ ಲಡ್ಡು, ಪುಷ್ಟಿ ಪಾಕೆಟ್‌ ಮತ್ತು ಬೆಲ್ಲ ಕೂಡ ನಕಲಿ ಹಾಲು ತಯಾರಿಕೆ ಘಟಕದಲ್ಲಿ ದೊರೆತಿದ್ದು, ಇನ್ನಷ್ಟು ಆರೋಪಿಗಳು ಈ ಜಾಲದಲ್ಲಿ ಇದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸುತ್ತಾರೆ.

ನಕಲಿ ಹಾಲು ತಯಾರು ಮಾಡಲು ಬಳಸಲು ಆರೋಪಿಗಳು ಸಂಗ್ರಹಿಸಿದ್ದ ಪಾಮ್ ಆಯಿಲ್
ಕೆಜಿಎಫ್‌ ತಾಲ್ಲೂಕಿನ ಅಂಗನವಾಡಿಗಳಲ್ಲಿ ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ಹಾಲಿನ ಪುಡಿ ಪಾಕೆಟ್‌ ವಿತರಣೆಯಾಗಿದ್ದು ಯಾವುದೇ ಲೋಪ ಕಾಣುತ್ತಿಲ್ಲ. ಹಿರಿಯ ಅಧಿಕಾರಿಗಳಿಗೆ ಈ ಸಂಬಂಧವಾಗಿ ವರದಿ ನೀಡಲಾಗಿದೆ.
ರಾಜೇಶ್‌ ಶಿಶು ಅಭಿವೃದ್ಧಿ ಯೋಜನಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.