
ಕೆಜಿಎಫ್: ಪಡಿತರ ಅಕ್ಕಿ ಸೇರಿದಂತೆ ಇನ್ನಿತರ ಧಾನ್ಯಗಳು ಫಲಾನುಭವಿಗಳಿಗೆ ಲಭ್ಯವಾಗುವಂತೆ ಸರ್ಕಾರವು ಆನ್‌ಲೈನ್ ಬಯೊಮೆಟ್ರಿಕ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದೆ. ಆದರೆ, ತಾಲ್ಲೂಕಿನಾದ್ಯಂತ ಬಯೊಮೆಟ್ರಿಕ್ ವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕಾರಣ ಪಡಿತರ ಫಲಾನುಭವಿಗಳು ಪಡಿತರ ಪಡೆಯಲು ಗಂಟೆಗಟ್ಟಲೇ ಬಿರುಬಿಸಿಲಿನಲ್ಲಿ ನಿಲ್ಲುವ ಅನಿವಾರ್ಯತೆ ಎದುರಾಯಿತು.
ಆನ್‌ಲೈನ್ ಸರ್ವರ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿರುವುದರಿಂದ ಸಮಸ್ಯೆ ಉದ್ಭವಿಸಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಬಯೊಮೆಟ್ರಿಕ್ ಪಡೆದ ತಕ್ಷಣವೇ ರೇಷನ್ ನೀಡಬೇಕು. ಆದರೆ, ಕೆಲವು ಪಡಿತರ ಅಂಗಡಿಗಳಲ್ಲಿ ಬಯೊಮೆಟ್ರಿಕ್ ಪಡೆದ ನಂತರ ಮರುದಿನ ಪಡಿತರ ಪಡೆಯುವಂತೆ ಸೂಚನೆ ನೀಡುತ್ತಿದ್ದಾರೆ. ಇದರಿಂದಾಗಿ ಬಯೊಮೆಟ್ರಿಕ್ ಪಡೆಯಲು ಒಂದು ದಿನ ಮತ್ತು ರೇಷನ್ ಪಡೆಯಲು ಮತ್ತೊಂದು ದಿನ ಪಡಿತರ ಅಂಗಡಿ ಮುಂದೆ ಬಂದು ಕಾಯುವ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಫಲಾನುಭವಿಗಳು. ಒಂದು ವೇಳೆ ಬಯೊಮೆಟ್ರಿಕ್ ನೀಡಿದ ನಂತರ ಮರುದಿನ ಪಡಿತರ ಪಡೆಯದಿದ್ದಲ್ಲಿ, ಮುಂದಿನ ತಿಂಗಳಲ್ಲಿ ಮಾತ್ರ ಪಡಿತರ ಪಡೆಯಲು ಸಾಧ್ಯ ಎಂದು ಪಡಿತರ ವಿತರಕರು ಹೇಳುತ್ತಿದ್ದಾರೆ. ಹೀಗಾಗಿ, ಎರಡು ದಿನಗಳ ಕಾಲ ಪಡಿತರದಾರರು ಅಂಗಡಿ ಮುಂದೆ ಕಾಯುತ್ತ ಕುಳಿಯಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಪಡಿತರ ಫಲಾನುಭವಿಗಳು.
ಸಾಮಾನ್ಯವಾಗಿ ಪಡಿತರ ಅಂಗಡಿಗಳ ಮುಂಭಾಗದಲ್ಲಿ ಕುಳಿತುಕೊಳ್ಳಲು ನೆರಳು ಸೇರಿದಂತೆ ಇನ್ನಿತರ ವ್ಯವಸ್ಥೆ ಇಲ್ಲ. ಬೆಳಗ್ಗೆ ಅಂಗಡಿಗೆ ಬಂದರೆ ಸಂಜೆವರೆಗೆ ಊಟ, ನೀರು ಬಿಟ್ಟು ಕಾಯಬೇಕಿದೆ. ಊಟ, ಶೌಚಾಲಯಕ್ಕೆ ಕೂಡ ಹೋಗುವಂತಿಲ್ಲ ಎಂದು ಮಸ್ಕಂ ಪಡಿತರ ಅಂಗಡಿ ಮುಂದೆ ಮುಂಜಾನೆಯಿಂದ ಕಾಯುತ್ತಿದ್ದ ಲಕ್ಷ್ಮಿದೇವಿ ಅಳಲು ತೋಡಿಕೊಂಡರು.
ಕೆಜಿಎಫ್ ನಗರದಲ್ಲಿ 49 ಹಾಗೂ ತಾಲ್ಲೂಕಿನಾದ್ಯಂತ 46 ಪಡಿತರ ಅಂಗಡಿಗಳು ಕಾರ್ಯನಿರ್ವಹಿಸುತ್ತಿದೆ. ಪಡಿತರ ವಿತರಕರು ದಾಸ್ತಾನು ಬಂದ ನಂತರ ತಿಂಗಳ ಕೊನೆವರೆಗೆ ಪಡಿತರ ಹಾಕಬೇಕು. ಆದರೆ, ಬಹುತೇಕ ಕಡೆಗಳಲ್ಲಿ ಒಂದೆರಡು ದಿನ ಮಾತ್ರ ಪಡಿತರ ಹಾಕಿ, ಬಾಗಿಲು ಹಾಕಿಕೊಂಡು ಹೋಗಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.
ಶೀಘ್ರವೇ ಸಮಸ್ಯೆ ಪರಿಹಾರ
ಆನ್‌ಲೈನ್‌ನಲ್ಲಿ ಬಯೊಮೆಟ್ರಿಕ್ ಪಡೆಯಲು ಸರ್ವರ್ ಸಮಸ್ಯೆ ಉಂಟಾಗಿದೆ. ಎಲ್ಲೆಡೆ ಈ ಸಮಸ್ಯೆ ಉದ್ಘವಿಸಿದೆ. ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಯಲಿದೆ. ಎಲ್ಲ ಪಡಿತರ ವಿತರಕರು ಕಡ್ಡಾಯವಾಗಿ 30ನೇ ತಾರೀಕಿನವರೆಗೆ ಪಡಿತರ ವಿತರಣೆ ಮಾಡಬೇಕು. ದೂರುಗಳು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.