ADVERTISEMENT

ಮಾರುಕಟ್ಟೆ ಹರಾಜು ಮತ್ತೆ ಮುಂದಕ್ಕೆ

ಕೆಜಿಎಫ್‌: ಕೋವಿಡ್‌ ಕಾರಣ, ವರ್ತಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 9:14 IST
Last Updated 22 ಜುಲೈ 2020, 9:14 IST
ಕೆಜಿಎಫ್‌ ರಾಬರ್ಟಸನ್‌ ಪೇಟೆಯ ಎಂ.ಜಿ. ಮಾರುಕಟ್ಟೆಯ ಪ್ರವೇಶ ದ್ವಾರದ ನೋಟ
ಕೆಜಿಎಫ್‌ ರಾಬರ್ಟಸನ್‌ ಪೇಟೆಯ ಎಂ.ಜಿ. ಮಾರುಕಟ್ಟೆಯ ಪ್ರವೇಶ ದ್ವಾರದ ನೋಟ   

ಕೆಜಿಎಫ್: ರಾಬರ್ಟ್‌ಸನ್ ಪೇಟೆ ನಗರಸಭೆಗೆ ಸೇರಿದ ಅಂಗಡಿಗಳನ್ನು 12 ವರ್ಷ ಅವಧಿಗೆ ಹರಾಜು ಹಾಕುವ ಪ್ರಕ್ರಿಯೆಯನ್ನು ಮಂಗಳವಾರ ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು.

ರಾಬರ್ಟಸನ್‌ ಪೇಟೆಯ ಎಂ.ಜಿ. ಮಾರುಕಟ್ಟೆಯ 1,441 ಅಂಗಡಿ, ಆಂಡರಸನ್‌ ಪೇಟೆ ಮಾರುಕಟ್ಟೆಯಲ್ಲಿರುವ 207 ಅಂಗಡಿ, ಸ್ಯಾನಿಟರಿ ಬೋರ್ಡ್ ಸಮೀಪದ 27 ಅಂಗಡಿ, ನಗರಸಭೆ ಮೈದಾನದ ಬಳಿ 22 ಅಂಗಡಿ ಸೇರಿದಂತೆ ಒಟ್ಟು 1,697 ಅಂಗಡಿಗಳ ಇ– ಹರಾಜಿಗೆ ಪ್ರಕಟಣೆ ಹೊರಡಿಸಲಾಗಿತ್ತು. ಜುಲೈ 20ರಿಂದಲೇ ಇ– ಹರಾಜು ಶುರುವಾಗಿದ್ದರೂ, ಸೋಮವಾರ ಹರಾಜಿನ ಪೇಜ್ ತೆರೆಯಲಿಲ್ಲ. ಆದ್ದರಿಂದ ಯಾರೂ ಹರಾಜಿನಲ್ಲಿ ಭಾಗವಹಿಸಲಿಲ್ಲ. ಈ ಮಧ್ಯೆ ಸಂಸದ ಎಸ್. ಮುನಿಸ್ವಾಮಿ ಸೋಮವಾರ ವರ್ತಕರ ಪರವಾಗಿ ಪೌರಾಡಳಿತ ಸಚಿವ ನಾರಾಯಣಗೌಡ ಅವರನ್ನು ಭೇಟಿ ಮಾಡಿ, ಕೋವಿಡ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರಿಗೆ ತೊಂದರೆಯಾಗಿದೆ. ಆದ್ದರಿಂದ ಹರಾಜು ಪ್ರಕ್ರಿಯೆ ರದ್ದುಮಾಡಬೇಕೆಂದು ಮನವಿ ಮಾಡಿದ್ದರು.

ಎಂ.ಜಿ.ಮಾರುಕಟ್ಟೆಯ ವರ್ತಕರ ಸಂಘದಿಂದ ಜಿಲ್ಲಾಧಿಕಾರಿಗೆ ಸಹ ಮನವಿ ಸಲ್ಲಿಸಲಾಗಿತ್ತು. ಎಂ.ಜಿ.ಮಾರುಕಟ್ಟೆಯಲ್ಲಿ ಸ್ವಂತ ಹಣದಿಂದ ಕಟ್ಟಡ ನಿರ್ಮಾಣ ಮಾಡಿಕೊಂಡು ಸಕಾಲದಲ್ಲಿ ಬಾಡಿಗೆಯನ್ನು ನಗರಸಭೆಗೆ ಪಾವತಿ ಮಾಡಲಾಗುತ್ತಿದೆ. ಲಾಕ್‌ಡೌನ್‌ ಅವಧಿಯಲ್ಲಿ ವ್ಯಾಪಾರ ವಹಿವಾಟು ಇಲ್ಲದೆ ವರ್ತಕರು ಕಷ್ಟದಲ್ಲಿದ್ದಾರೆ. ಹಾಗಾಗಿ ಹರಾಜಿನಲ್ಲಿ
ಭಾಗವಹಿಸಲು ಆರ್ಥಿಕವಾಗಿ ಸಬಲರಾಗಿಲ್ಲ. ಆದ್ದರಿಂದ ಒಂದು ವರ್ಷ ಹರಾಜು ಪ್ರಕ್ರಿಯೆ ಮುಂದೂಡಬೇಕೆಂದು ಕೋರಿದ್ದರು.

ADVERTISEMENT

ನಗರಸಭೆಗೆ ಸೇರಿದ ವಾಣಿಜ್ಯ ಸಂಕೀರ್ಣ ಅತ್ಯಂತ ಹೆಚ್ಚು ಅಂಗಡಿ ಹೊಂದಿದ್ದರೂ, ಬಾಡಿಗೆ ಮಾತ್ರ ತೀರಾ ಕಡಿಮೆ ಬರುತ್ತಿತ್ತು. ಹಲವಾರು ಅಂಗಡಿಗಳು ಇನ್ನೂ ₹ 100ರ ಆಸುಪಾಸಿನಲ್ಲಿ ಬಾಡಿಗೆ ಪಾವತಿಸುತ್ತಿದ್ದವು. ಲಕ್ಷಾಂತರ ರೂಪಾಯಿ ನಿತ್ಯ ವ್ಯಾಪಾರ ಮಾಡುತ್ತಿದ್ದ ಅಂಗಡಿ ಮಾಲೀಕರು ತಮ್ಮ ಅಂಗಡಿಯ ಮುಂದಿನ ಜಾಗವನ್ನು ಸಹ ದಿನ ಬಾಡಿಗೆ ಮೇಲೆ ನೀಡಿ ಲಾಭ ಸಂಪಾದನೆ ಮಾಡುತ್ತಿದ್ದರು. ಇಷ್ಟು ದೊಡ್ಡ ಸಂಕೀರ್ಣದಿಂದ ಬಾಡಿಗೆ ತೀರಾ ಕಡಿಮೆ ಬರುತ್ತಿದ್ದ ಹಿನ್ನೆಲೆಯಲ್ಲಿ ಬಾಡಿಗೆ ಹೆಚ್ಚಿಸಲು ನಗರಸಭೆ ಹಲವು ಬಾರಿ ಪ್ರಯತ್ನಿಸಿತ್ತು. ಆದರೆ ಹಲವರು ನಗರಸಭೆ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು.

ಸ್ಥಳೀಯ ನ್ಯಾಯಾಲಯ ದೀರ್ಘ ಕಾಲದ ವಿಚಾರಣೆ ನಡೆಸಿ, ನಗರಸಭೆಗೆ ಎಂ.ಜಿ. ಮಾರುಕಟ್ಟೆಯಿಂದ ಎರಡು ದಶಕದಲ್ಲಿ ₹ 104 ಕೋಟಿಗೂ ಹೆಚ್ಚಿನ ನಷ್ಟವಾಗಿದೆ. ಆದ್ದರಿಂದ ಹರಾಜು ಪ್ರಕ್ರಿಯೆ ನಡೆಸಬೇಕು ಎಂದು ಆದೇಶಿಸಿತ್ತು. ನಂತರ ಪ್ರಕರಣ ಹೈಕೋರ್ಟ್‌ ಮೆಟ್ಟಿಲು ಏರಿತ್ತು. ಜಿಲ್ಲಾಧಿಕಾರಿ ಸಂಧಾನದಿಂದ ವರ್ತಕರು ಹೈಕೋರ್ಟ್‌ನಿಂದ ವ್ಯಾಜ್ಯ ಹಿಂಪಡೆದಿದ್ದರು. ಮುಂದಿನ ಹನ್ನೆರಡು ವರ್ಷ ಹೆಚ್ಚಿನ ಬಾಡಿಗೆಯಲ್ಲಿ ಈಗಿರುವ ವರ್ತಕರೇ ತಮ್ಮ ಅಂಗಡಿಗಳನ್ನು ನಡೆಸಿಕೊಂಡು ಹೋಗಬೇಕು. ನಂತರ ಯಾವುದೇ ತಕರಾರು ಇಲ್ಲದೆ ಕಟ್ಟಡವನ್ನು ತೆರವು ಮಾಡುವುದಾಗಿ ವರ್ತಕರು ಒಪ್ಪಿದ್ದರು.

ಆದರೆ ಕೋಲಾರದ ನಗರಸಭೆ ವ್ಯಾಪ್ತಿಯಲ್ಲಿ ಈಚೆಗೆ ನಡೆದ ಅಂಗಡಿ ಹರಾಜು ಪ್ರಕ್ರಿಯೆಯಲ್ಲಿ ₹ 2 ಕೋಟಿಗೂ ಹೆಚ್ಚಿನ ಆದಾಯ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪುನಃ ಅಂಗಡಿಗಳನ್ನು 12 ವರ್ಷ ಅವಧಿಗೆ ಹರಾಜು ಹಾಕಲು ತೀರ್ಮಾನಿಸಿತ್ತು. ಹರಾಜು ಪ್ರಕ್ರಿಯೆ ಶುರುವಾಗಿದ್ದರಿಂದ ಆತಂಕಗೊಂಡಿದ್ದ ಸಾವಿರಾರು ವರ್ತಕರು ಈಗ ನಿಟ್ಟುಸಿರು ಬಿಟ್ಟಿದ್ದಾರೆ.

ಮುಂದೂಡುತ್ತಲೇ ಇರುವ ಹರಾಜು

ನಗರಸಭೆಗೆ ಸೇರಿದ ಎಲ್ಲ ಅಂಗಡಿಗಳನ್ನು ಹರಾಜು ಮಾಡಲು 2015ರ ಸೆಪ್ಟೆಂಬರ್‌ನಲ್ಲಿ ಮೂರು ಬಾರಿ ದಿನಾಂಕ ನಿಗದಿ ಮಾಡಲಾಗಿತ್ತು. ಮೂರು ಬಾರಿಯೂ ರಾಜಕೀಯ ಒತ್ತಡದಿಂದ ಮುಂದಕ್ಕೆ ಹಾಕಲಾಗಿತ್ತು. ಈಗ ಪುನಃ ಹರಾಜು ಪ್ರಕ್ರಿಯೆ ಮುಂದೂಡಿರುವುದರಿಂದ ಯಾವಾಗ ನಡೆಯುತ್ತದೆ ಎಂಬ ಅನಿಶ್ಚಿತತೆ ಮೂಡಿದೆ.

ಕೊರೊನಾ ಆತಂಕ

ಬಸ್ ನಿಲ್ದಾಣದ ಬಳಿಯ ನಗರಸಭೆಗೆ ಸೇರಿದ್ದ ಅಂಗಡಿಗಳನ್ನು ಹರಾಜು ಮಾಡಿದಾಗ, ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಬಿಡ್ ಬರಲಿಲ್ಲ. ಈಗ ಕೊರೊನಾ ಸಮಯವಾಗಿದ್ದರಿಂದ ಜನರ ಕೈಯಲ್ಲಿ ಹಣ ಇಲ್ಲ. ಹೆಚ್ಚಿನ ಪ್ರಮಾಣದಲ್ಲಿ ಅಂಗಡಿಗಳು ಬಾಡಿಗೆ ಹೋಗದೆ ಇರಬಹುದು ಎಂಬ ಕಾರಣಕ್ಕೆ ಹರಾಜು ಪ್ರಕ್ರಿಯೆ ಮುಂದೂಡಲಾಗಿದೆ ಎಂದು ನಗರಸಭೆ ಆಯುಕ್ತ ಸಿ.ರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.