
ಕೆಜಿಎಫ್: ತಾಲ್ಲೂಕಿನ ಚರ್ಚ್ ಮತ್ತು ದೇವಾಲಯಗಳಲ್ಲಿ ಹೊಸ ವರ್ಷಕ್ಕೆ ಸಾವಿರಾರು ಮಂದಿ ಭಕ್ತರು ದೇವರ ದರ್ಶನ ಪಡೆದರು.
ಬುಧವಾರ ರಾತ್ರಿ ನಗರದ ವಿವಿಧ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದ ಕ್ರೈಸ್ತ ಸಮುದಾಯದವರು ಹನ್ನೆರಡು ಗಂಟೆ ಮುಗಿಯುತ್ತಿದ್ದಂತೆಯೇ ಹೊಸ ವರ್ಷಕ್ಕೆ ಸ್ವಾಗತ ಕೋರಿದರು. ಯುವಕರು ನಗರದ ಬೀದಿಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಎಂ.ಜಿ.ಮಾರುಕಟ್ಟೆಯಲ್ಲಿ ವರ್ತಕರು ಲಡ್ಡು ವಿತರಿಸಿ ಹೊಸ ವರ್ಷವನ್ನು ಬರ ಮಾಡಿಕೊಂಡರು. ಜೊತೆಗೆ ಎಂ.ಜಿ.ಮಾರುಕಟ್ಟೆಯಲ್ಲಿ ವ್ಯಾಪಾರ ಬಿರುಸಾಗಿ ನಡೆಯಿತು. ಮಾಂಸದಂಗಡಿಗಳ ಮುಂದೆ ಜನ ಜಮಾಯಿಸಿದ್ದರು.
ಎಲ್ಲಾ ಸಮುದಾಯದವರು ಹೊಸ ಬಟ್ಟೆ ಧರಿಸಿ ದೇವಾಲಯಗಳಿಗೆ ಹೋಗಿ ದರ್ಶನ ಪಡೆದರು. ತಾಲ್ಲೂಕಿನ ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಸಾವಿರಾರು ಭಕ್ತರು ಸ್ವಾಮಿಯ ದರ್ಶನ ಪಡೆದರು. ಇಡೀ ದೇವಾಲಯವನ್ನು ಹೂಗಳಿಂದ ಅಲಂಕರಿಸಲಾಗಿತ್ತು. ನಗರದ ಪ್ರಸನ್ನ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಕೂಡ ಭಕ್ತರ ದಂಡು ಹರಿದುಬಂದಿತ್ತು.
ಶಾಸಕಿ ಎಂ.ರೂಪಕಲಾ ನಗರದ ಹಲವಾರು ಚರ್ಚ್‌ಗಳಿಗೆ ಭೇಟಿ ನೀಡಿ ಆಲಯಗಳ ಮುಖ್ಯಸ್ಥರನ್ನು ಸನ್ಮಾನಿಸಿದರು. ಡಿವೈಎಸ್ಪಿ ಲಕ್ಷ್ಮಯ್ಯ, ಕೆಡಿಎ ಆಯುಕ್ತ ಧರ್ಮೇಂದ್ರ ಸೇರಿದಂತೆ ಹಲವು ಅಧಿಕಾರಿಗಳು ಶಾಸಕಿಯನ್ನು ಭೇಟಿ ಮಾಡಿ ಹೊಸ ವರ್ಷದ ಶುಭಾಶಯ ಕೋರಿದರು.
ಇಡೀ ರಾತ್ರಿ ಪೊಲೀಸರು ಮಾಡಿದ್ದ ಕಟ್ಟುನಿಟ್ಟಿನ ಬಂದೋಬಸ್ತಿನ ಪರಿಣಾಮ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.