
ಕೆಜಿಎಫ್: ಚಿನ್ನದ ಗಣಿಯ ಶಾಫ್ಟ್‌ನಿಂದ ಚಿನ್ನದ ಅದಿರು ಇರುವ ಮಣ್ಣನ್ನು ಕದಿಯುವ ಎರಡು ತಂಡಗಳ 15 ಮಂದಿಯನ್ನು ಊರಿಗಾಂ ಪೊಲೀಸರು ಬಂಧಿಸಿದ್ದಾರೆ.
ಬಿಜಿಎಂಎಲ್‌ನ ಗಿಲ್ಬರ್ಟ್ಸ್ ಶಾಫ್ಟ್ ಕಾಂಪೌಂಡಿಗೆ ಹಾಕಿದ್ದ ಮುಳ್ಳಿನ ಬೇಲಿಯನ್ನು ಕಿತ್ತು ಒಳಗೆ ಪ್ರವೇಶಿಸಿದ್ದ ತಂಡವು ಗಣಿಯೊಳಗೆ ಮಣ್ಣನ್ನು ಕೊರೆದು ಮೂಟೆಗಳಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದಾಗ ಗಣಿ ಭದ್ರತಾ ಸಿಬ್ಬಂದಿ ಆರೋಪಿಗಳನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಮೈನಿಂಗ್ ಕಾಲೊನಿಯ ಕಾರ್ತಿಕ್, ಶ್ಯಾಮ ವಿಜಯ, ವೇಲಾಂಗಣಿ, ಸೌಂದರಿ, ಸುಜಾತ, ಮೇರಿ, ರಿಚರ್ಡ್, ರಜನಿ, ಮದನ್ ಕುಮಾರ್, ಆನಂದ, ಆರೋಗ್ಯ ದಾಸ್, ಜಾರ್ಜ್, ಮೈಕೆಲ್, ಸೂರ್ಯ, ರಾಜಿ ಬಂಧಿತ ಆರೋಪಿಗಳು. ಇವರನ್ನು ವಿಚಾರಣೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಎರಡೂ ಕೃತ್ಯಗಳಲ್ಲಿ ಒಟ್ಟು 12 ಸಿಮೆಂಟ್ ಮೂಟೆಗಳಲ್ಲಿ ತುಂಬಿದ್ದ ಚಿನ್ನದ ಅದಿರಿನ ಮಣ್ಣು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಪರಿಕರಗಳನ್ನು ಊರಿಗಾಂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಚಿನ್ನದ ಗಣಿ ಕಳ್ಳತನಗಳ ಬಗ್ಗೆ ಹೆಚ್ಚಿನ ನಿಗಾ ಇರಿಸುವಂತೆ ಗಣಿ ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಪೊಲೀಸರು ಹೆಚ್ಚುವರಿ ಗಸ್ತಿಗೆ ಸೂಚಿಸಿಲಾಗಿದೆ ಎಂದು ಹೇಳಿದರು.
ಮೊಬೈಲ್ ಕಳ್ಳತನ ಪ್ರಕರಣ: ಸಿಇಐಆರ್ ಪೋರ್ಟಲ್‌ನಲ್ಲಿ ದಾಖಲಾಗಿದ್ದ ಮೊಬೈಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಸೈಬರ್ ಪೊಲೀಸರು 16 ದೂರುದಾರರ ಮೊಬೈಲ್ ಪತ್ತೆ ಹಚ್ಚಲಾಗಿದೆ. ಮೊಬೈಲ್ ಕಳೆದುಕೊಂಡವರು ಕೂಡಲೇ ತಮ್ಮ ದೂರುಗಳನ್ನು ಪೋರ್ಟಲ್‌ನಲ್ಲಿ ದಾಖಲಿಸಬೇಕು. ಇದರಿಂದಾಗಿ ಮೊಬೈಲ್ ದುರ್ಬಳಕೆ ತಪ್ಪುತ್ತದೆ ಎಂದರು.
ರಾಬರ್ಟಸನ್‌ಪೇಟೆಯ ಜ್ಯೂವೆಲರಿ ಅಂಗಡಿಗಳಲ್ಲಿ ಕಳ್ಳತನ ಮಾಡಿದ್ದ ತಂಡದ ಪ್ರಮುಖ ಸದಸ್ಯರನ್ನು ರಾಜಸ್ತಾನದಲ್ಲಿ ಬಂಧಿಸಲಾಗಿದೆ. ಪ್ರಸ್ತುತ ಇನ್‌ಸ್ಪೆಕ್ಟರ್ ನವೀನ್ ನೇತೃತ್ವದ ತಂಡ ರಾಜಸ್ತಾನದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ತಿಳಿಸಿದರು.
ಕೃಷ್ಣಾವರಂನಲ್ಲಿರುವ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಹೈವೈ ಟೋಲ್‌ನಿಂದ ನಗರಕ್ಕೆ ಬರುವ ದ್ವಾರದಲ್ಲಿ ವಿದ್ಯುತ್ ದೀಪಗಳ ಅವ್ಯವಸ್ಥೆಯಿಂದ ಅಪಘಾತಗಳು ನಡೆಯುತ್ತಿರುವ ಬಗ್ಗೆ ಈಗಾಗಲೇ ಎನ್‌ಎಚ್‌ಎಐಗೆ ದೂರು ಸಲ್ಲಿಸಲಾಗಿದೆ. ಟೋಲ್ ಗುತ್ತಿಗೆದಾರರು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಇನ್ನು ಮುಂದೆ ಯಾವುದಾದರೂ ಅಪಘಾತವಾದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಡಿ.8ರಿಂದ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಇತ್ತೀಚಿಗೆ ಬೈಕ್ ಸವಾರರು ಹೆಲ್ಮೆಟ್ ಧರಿಸಿದೆ ಇರುವುದು ಕಂಡುಬಂದಿದೆ. ಹೆಲ್ಮೆಟ್ ಧರಿಸಿದೆ ಇರುವವರ ವಿರುದ್ಧ ನೂರಾರು ಪ್ರಕರಣಗಳನ್ನು ದಾಖಲಿಸಿ ಲಕ್ಷಾಂತರ ದಂಡ ವಿಧಿಸಲಾಗಿದೆ. ಬೈಕ್ ಸವಾರರು ಪೊಲೀಸರ ಭಯಕ್ಕೆ ಹೆಲ್ಮೆಟ್ ಧರಿಸದೆ ತಮ್ಮ ಮತ್ತು ಕುಟುಂಬದವರ ಹಿತದೃಷ್ಟಿಯಿಂದ ಹೆಲ್ಮೆಟ್ ಧರಿಸಬೇಕು. ಈಚೆಗೆ ಬಂಗಾರಪೇಟೆ ಮತ್ತು ಕೆಜಿಎಫ್ ತಾಲ್ಲೂಕುಗಳಲ್ಲಿ ಮೂರು ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸದ ಬೈಕ್ ಸವಾರರು ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ. ಆದ್ದರಿಂದ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕೆಂದು ಎಸ್‌ಪಿ ಶಿವಾಂಶು ರಜಪೂತ್ ಮನವಿ ಮಾಡಿದರು.
ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಆಯಾಕಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ರಾಬರ್ಟಸನ್‌ಪೇಟೆ ಕೃಷ್ಣಾವರಂ ಆಲದ ಮರ ಗಾಂಧಿ ವೃತ್ತ ಫೈಲೈಟ್ಸ್ ಸರ್ಕಲ್ ಟೇಕಲ್ ರಸ್ತೆ ಬೂದಿ ಕೋಟೆ ಸರ್ಕಲ್ ಬಂಗಾರಪೇಟೆ ಬಸ್ ನಿಲ್ದಾಣಗಳಲ್ಲಿ ಕ್ಯಾಮೆರಾ ಅಳವಡಿಸಲಾಗುವುದು. ಹೆಲ್ಮೆಟ್ ಧರಿಸದ ಸವಾರರನ್ನು ಕ್ಯಾಮರಾ ಮೂಲಕ ಪತ್ತೆ ಹಚ್ಚಲಾಗುವುದು. ನಂತರ ನೋಂದಾಯಿತ ಮೊಬೈಲ್‌ಗೆ ಇ ಚಲನ್ ಕಳಿಸಿ ದಂಡ ವಿಧಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಪ್ರಾಯೋಗಿಕ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಶಿವಾಂಶು ರಜಪೂತ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.