ಕೋಲಾರ: ಕೋಲಾರ ಜಿಲ್ಲಾ ಹಾಲು ಒಕ್ಕೂಟದ (ಕೋಮುಲ್) ಅಧ್ಯಕ್ಷ ಸ್ಥಾನದ ಚುನಾವಣೆಗೆ ಕೇವಲ ಮೂರು ದಿನಗಳು ಬಾಕಿ ಇದ್ದು, ಅಧ್ಯಕ್ಷ ಸ್ಥಾನದ ವಿಚಾರ ಜಿಲ್ಲಾ ಕಾಂಗ್ರೆಸ್‌ನ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಿದೆ. ಈ ಜಗಳ ‘ಕೈ’ ವರಿಷ್ಠರಿಗೆ ಸಂಕಟ ತಂದೊಡ್ಡಿದೆ.
ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಮೇಲುಗೈ ಸಾಧಿಸಿದ್ದು, ಅಧ್ಯಕ್ಷ ಗಾದಿ ಹಿಡಿಯಲು ಮುಂದಾಗಿದ್ದಾರೆ. ಜುಲೈ 5ರಂದು ಈ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ದೊಡ್ಡಮಟ್ಟದಲ್ಲಿ ಲಾಬಿ ಆರಂಭಿಸಿದ್ದಾರೆ. ಪರಸ್ಪರ ವಾಗ್ದಾಳಿ ನಡೆಸುತ್ತಾ, ವರಿಷ್ಠರಿಗೆ ದೂರು ನೀಡುತ್ತಿದ್ದಾರೆ.
ಅಧ್ಯಕ್ಷ ಸ್ಥಾನ ಗಿಟ್ಟಿಸಲು ಎಸ್.ಎನ್.ನಾರಾಯಣಸ್ವಾಮಿ ದೊಡ್ಡಮಟ್ಟದಲ್ಲಿ ಪ್ರಯತ್ನ ನಡೆಸುತ್ತಿರುವ ಬೆನ್ನಲೇ, ಕೆ.ವೈ.ನಂಜೇಗೌಡ ಹೊಸ ದಾಳ ಉರುಳಿಸಿದ್ದಾರೆ.
ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಅಧ್ಯಕ್ಷ ಸ್ಥಾನ ನೀಡಿದರೆ ಕೋಮುಲ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಅವರು ಕಾಂಗ್ರೆಸ್ ವರಿಷ್ಠರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ ಎಂಬುದು ಗೊತ್ತಾಗಿದೆ.
ಕೋಮುಲ್ ಅಧ್ಯಕ್ಷರಾಗಿ ಈಗಾಗಲೇ ಐದು ವರ್ಷ ಕಾರ್ಯನಿರ್ವಹಿಸಿರುವ ನಂಜೇಗೌಡ, ಈ ಬಾರಿ ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವುದಾಗಿ ಹಲವಾರು ಬಾರಿ ಹೇಳಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಜೊತೆ ಚರ್ಚೆ ನಡೆದಿದ್ದು, ಭರವಸೆ ಕೂಡ ಸಿಕ್ಕಿದೆ ಎಂದಿದ್ದಾರೆ.
ಆದರೆ, ಬಮೂಲ್ ಅಧ್ಯಕ್ಷರಾಗಿರುವ ಡಿ.ಕೆ.ಸುರೇಶ್, ಕೆಎಂಎಫ್ ಮಾಜಿ ಅಧ್ಯಕ್ಷ ಹಾಗೂ ಶಾಸಕ ಭೀಮಾ ನಾಯ್ಕ್ ಕೂಡ ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ, ನಂಜೇಗೌಡರ ಹಾದಿ ಅಷ್ಟು ಸುಲಭವಾಗಿಲ್ಲ.
ಇದೇ ಕಾರಣಕ್ಕೆ ಅವರು ಮಂಗಳವಾರ ಬೆಂಗಳೂರಿನಲ್ಲಿ ಕೆಎಂಎಫ್ ಅಧ್ಯಕ್ಷ ಸ್ಥಾನದ ವಿಚಾರ ಮತ್ತೆ ಪ್ರಸ್ತಾಪಿಸಿದ್ದಾರೆ. ಆ ಅವಕಾಶ ಮಾಡಿಕೊಟ್ಟರೆ ಕೋಮುಲ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಸ್.ಎನ್.ನಾರಾಯಣಸ್ವಾಮಿ ಅವರ ಹಾದಿಗೆ ಅಡ್ಡಬರುವುದಿಲ್ಲ ಎಂಬುದಾಗಿ ಹೇಳಿರುವುದನ್ನು ಮೂಲಗಳು ತಿಳಿಸಿವೆ. ಈ ಮೂಲಕ ಅವರು ಒತ್ತಡದ ತಂತ್ರಗಾರಿಗೆ ರೂಪಿಸುತ್ತಿದ್ದಾರೆ. ಕೆಎಂಎಫ್ ಅಧ್ಯಕ್ಷ ಸ್ಥಾನ ಸಿಗುವುದು ಅಸಾಧ್ಯವಾದರೆ ಕೋಮುಲ್ ಅಧ್ಯಕ್ಷ ಸ್ಥಾನಕ್ಕೆ ತಮಗೆ ಅವಕಾಶ ಮಾಡಿಕೊಡಬೇಕೆಂದೂ ಪಟ್ಟು ಹಿಡಿದಿದ್ದಾರೆ. ಒಟ್ಟು 13 ಚುನಾಯಿತ ನಿರ್ದೇಶಕರ ಪೈಕಿ ತಮ್ಮ ಬೆಂಬಲಿಗ 7 ನಿರ್ದೇಶಕರು ಗೆದ್ದಿರುವುದನ್ನು ಹೇಳಿದ್ದಾರೆ. ನಾರಾಯಣಸ್ವಾಮಿ ಕಾಂಗ್ರೆಸ್ ಬೆಂಬಲಿತರ ವಿರುದ್ಧವೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು ಎಂದು ದೂರಿದ್ದಾರೆ.
ಈಗಾಗಲೇ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಸುರೇಶ್ ಕೂಡ ಆಕಾಂಕ್ಷಿಯಾಗಿರುವ ಕಾರಣ ಕಾಂಗ್ರೆಸ್ ವರಿಷ್ಠರು ಅಡಗತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ. ಸ್ಪಷ್ಟವಾಗಿ ಭರವಸೆ ನೀಡುವ ಪರಿಸ್ಥಿತಿಯಲ್ಲಿ ಅವರು ಇಲ್ಲ. ಬದಲಾಗಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
ಇತ್ತ ಮೊದಲ ಬಾರಿ ಕೋಮುಲ್‌ಗೆ ನಿರ್ದೇಶಕರಾಗಿ ಆಯ್ಕೆಯಾಗಿರುವ ಎಸ್.ಎನ್.ನಾರಾಯಣಸ್ವಾಮಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿ ಕೋಮುಲ್ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹಕ್ಕು ಮಂಡಿಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಜೊತೆಯೂ ಜಿಲ್ಲಾ ಕಾಂಗ್ರೆಸ್‌ನ ವಿದ್ಯಮಾನ ಹಾಗೂ ಕೋಮುಲ್ ಚುನಾವಣೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಸಚಿವ ಸ್ಥಾನದ ಭರವಸೆ ಸಿಕ್ಕರೆ ಕೋಮುಲ್ ರೇಸ್‌ನಿಂದ ಹಿಂದೆ ಸರಿಯುವ ಬಗ್ಗೆಯೂ ಮಾತನಾಡಿದ್ದಾರೆ ಎಂಬುದು ಗೊತ್ತಾಗಿದೆ.
ಜಿಲ್ಲೆಯ ಕಾಂಗ್ರೆಸ್‌ನ ಕೆಲ ಶಾಸಕರ ಗುಂಪುಗಾರಿಕೆ ನಡೆಸಿ ತಮ್ಮನ್ನು ದೂರುವಿಡುತ್ತಿದ್ದಾರೆ. ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರ ದಾರಿ ತಪ್ಪಿಸುತ್ತಿದ್ದಾರೆ ಎಂದು ರಮೇಶ್ ಕುಮಾರ್ ಬಣ (ಘಟಬಂಧನ್) ವಿರುದ್ಧ ದೂರು ನೀಡಿದ್ದಾರೆ.
ಅಲ್ಲದೇ, ನಾರಾಯಣಸ್ವಾಮಿ ಅವರಿಗೆಪಟ್ಟಕಟ್ಟಬೇಕೆಂದು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದವರು ದೊಡ್ಡ ಕೂಗು ಎಬ್ಬಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರನ್ನು ಸುತ್ತುವರಿದು ತಮ್ಮ ಬೇಡಿಕೆ ಇಟ್ಟಿದ್ದಾರೆ.
ನಂಜೇಗೌಡರು ಕೆಎಂಎಫ್ ಕಡೆಗೋ ಹೋಗುತ್ತಾರೋ ಇಲ್ಲವೇ ಇಲ್ಲೇ ಕೋಮುಲ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಕಣಕ್ಕಿಳಿಯುತ್ತಾರೋ, ಎಸ್.ಎನ್.ನಾರಾಯಣಸ್ವಾಮಿ ಅವರ ಸ್ಪರ್ಧೆಗೆ ಕೈ ವರಿಷ್ಠರು ಹಸಿರು ನಿಶಾನೆ ತೋರುತ್ತಾರೋ ಎಂಬುದು ಸಹಕಾರ ವಲಯದಲ್ಲಿ ಕುತೂಹಲ ಮೂಡಿಸಿದೆ.
‘ಕೆಎಂಎಫ್ ಅಧ್ಯಕ್ಷ ಸ್ಥಾನ ವಿಚಾರದ ಬಗ್ಗೆ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚೆ ನಡೆಸಿದ್ದೇನೆ. ಭೀಮಾ ನಾಯ್ನ್ ನಂತರ ಅವಕಾಶ ಮಾಡಿಕೊಡುವುದಾಗಿ ಹಿಂದೆಯೇ ಹೇಳಿದ್ದರು. ಕೆಎಂಎಫ್ ಅಧ್ಯಕ್ಷ ಸ್ಥಾನ ಮಾತ್ರವಲ್ಲ; ಕಾಂಗ್ರೆಸ್‌ನಲ್ಲಿ ಇನ್ನೂ ಹಲವಾರು ಅವಕಾಶಗಳು ಸಿಗಲಿವೆ. ಡಿ.ಕೆ.ಸುರೇಶ್ ದೊಡ್ಡ ನಾಯಕರು. ಅವರು ಸಚಿವ ರಾಜ್ಯಸಭೆ ಸದಸ್ಯರಾಗಬಹುದು. ಅವರ ವಿರುದ್ಧ ಹೋಗುವವರು ನಾವಲ್ಲ. ನಾವು ಕೇಳುವುದು ಕೆಎಂಎಫ್ ನಿಗಮ ಮಂಡಳಿ ಸ್ಥಾನ ಅಷ್ಟೆ’ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದ್ದಾರೆ.
ಕೋಮುಲ್ ಅಧ್ಯಕ್ಷ ಸ್ಥಾನದ ಚುನಾವಣೆಯು ಜುಲೈ 5ರಂದು ಒಕ್ಕೂಟದ ಮುಖ್ಯ ಕಚೇರಿಯ ಆಡಳಿತ ಮಂಡಳಿ ಸಭಾಂಗಣದಲ್ಲಿ ಚುನಾವಣಾಧಿಕಾರಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್ ನೇತೃತ್ವದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ ನಾಮಪತ್ರ ಸಲ್ಲಿಕೆ ಪರಿಶೀಲನೆ ವಾಪಸ್ ಪಡೆಯುವ ಪ್ರಕ್ರಿಯೆ ನಡೆಯಲಿದೆ. ಮಧ್ಯಾಹ್ನ 2.30ರಿಂದ 3.30ರವರೆಗೆ ಮತದಾನ ನಡೆಯಲಿದೆ. ನಂತರ ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಆಗಲಿದೆ.
ಕೋಮುಲ್‌ನಲ್ಲಿ ಚುನಾಯಿತ 13 ನಿರ್ದೇಶಕರು ಹಾಗೂ ಸರ್ಕಾರದ 5 ಪ್ರತಿನಿಧಿಗಳು ಸೇರಿ 18 ಸ್ಥಾನ ಇವೆ. ಹೀಗಾಗಿ ಅಧ್ಯಕ್ಷ ಸ್ಥಾನ ಗೆಲ್ಲಲು 10 ನಿರ್ದೇಶಕರ ಬೆಂಬಲ ಬೇಕಾಗುತ್ತದೆ. ಹಾಗೆ ನೋಡಿದರೆ 9 ನಿರ್ದೇಶಕ ಸ್ಥಾನಗಳನ್ನು ಈಗಾಗಲೇ ಗೆದ್ದಿರುವ ಕಾಂಗ್ರೆಸ್ ಬೆಂಬಲಿತರು ಮುಂಚೂಣಿಯಲ್ಲಿದ್ದಾರೆ. ಜೊತೆಗೆ ಒಬ್ಬ ನಾಮನಿರ್ದೇಶಕರನ್ನೂ ನೇಮಕ ಮಾಡಲಾಗಿದೆ.
ಕೋಮುಲ್ ಅಧ್ಯಕ್ಷ ಸ್ಥಾನದ ಬಿಕ್ಕಟ್ಟು ಜೋರಾದ ನಡುವೆಯೇ ಎಸ್.ಎನ್.ನಾರಾಯಣಸ್ವಾಮಿ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಬೆಳವಣಿಗೆಗಳನ್ನು ಚರ್ಚಿಸಿದ್ದಾರೆ. ಈ ಭೇಟಿ ಸಹಜವಾಗಿಯೇ ಕುತೂಹಲ ಮೂಡಿಸಿದೆ. ಅವರ ಜೊತೆಗೆ ಕೋಲಾರ ಜಿಲ್ಲೆಯ ಮುನಿಯಪ್ಪ ಬಣದ ಮುಖಂಡರು ಇದ್ದರು. ಅಲ್ಲದೇ ನಾರಾಯಣಸ್ವಾಮಿ ಹಾಗೂ ಶಾಸಕಿ ರೂಪಕಲಾ ಶಶಿಧರ್ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನೂ ಭೇಟಿಯಾಗಿದ್ದಾರೆ.
ಕೋಮುಲ್ ಅಧ್ಯಕ್ಷರಾಗಲು ಶಾಸಕರಾದ ಕೆ.ವೈ.ನಂಜೇಗೌಡ ಎಸ್.ಎನ್.ನಾರಾಯಣಸ್ವಾಮಿ ಇಬ್ಬರಿಗೂ ಅರ್ಹತೆಯಿದೆ. ಆಯ್ಕೆ ಮಾಡುವುದು ನಿರ್ದೇಶಕರಿಗೆ ಬಿಟ್ಟಿದ್ದು. ಅವರು ಯಾರ ಕಡೆ ಕೈ ಎತ್ತಿದರೆ ಅವರು ಅಧ್ಯಕ್ಷರಾಗುತ್ತಾರೆ. ನನಗೆ ನಂಜೇಗೌಡರಾದರೂ ಎಸ್ಎನ್‌ಎನ್ ಆದರೂ ಖುಷಿಯೇ-ಬೈರತಿ ಸುರೇಶ್, ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.